ಭಾನುವಾರ, ನವೆಂಬರ್ 29, 2020
20 °C
ಮೀನುಗಾರಿಕೆ ಶುರುವಾಗಲು ಮೂರು ದಿನ ಬಾಕಿ: ಕೋವಿಡ್ ನಿಯಮ ಪಾಲನೆಗೆ ಸಿದ್ಧತೆ

ಕಾರವಾರ: ದೋಣಿಗೆ ಕಾರ್ಮಿಕರ ಕೊರತೆಯ ಕಾರ್ಮೋಡ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೊರೊನಾ ವೈರಸ್ ಹಾವಳಿಯಿಂದಾಗಿ ಈ ವರ್ಷ ಮೀನುಗಾರಿಕೆಯೂ ಹಲವು ಕಟ್ಟುಪಾಡುಗಳ ಮಧ್ಯೆಯೇ ನಡೆಯಲಿದೆ. ಹೊರ ರಾಜ್ಯಗಳ ಕಾರ್ಮಿಕರು ಊರಿಗೆ ಹೋಗಿರುವ ಕಾರಣ ಪರ್ಸೀನ್ ದೋಣಿಗಳ ಕಾರ್ಯಾಚರಣೆಗೆ ತೊಡಕಾಗುವ ಸಾಧ್ಯತೆಯಿದೆ. ಇದರ ನಡುವೆ ಆ.1ರಿಂದ ಮತ್ತೆ ಕಡಲಿಗೆ ಇಳಿಯಲು ಮೀನುಗಾರರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈ ವರ್ಷ ದೇಶದಾದ್ಯಂತ ಅತ್ಯಂತ ಕಡಿಮೆ ಅವಧಿಯ ಮೀನುಗಾರಿಕಾ ನಿಷೇಧವಿತ್ತು. ಪ್ರತಿ ವರ್ಷ ಜೂನ್ 1ರಿಂದಲೇ ಮೀನುಗಾರಿಕೆ ಸ್ಥಗಿತವಾಗುತ್ತಿತ್ತು. ಆದರೆ, ಈ ವರ್ಷ ಮಾರ್ಚ್‌ನಿಂದ ಕೊರೊನಾ ಸಂಬಂಧ ಲಾಕ್‌ಡೌನ್ ಘೋಷಣೆಯಾಗಿತ್ತು. ಹಾಗಾಗಿ ಜೂನ್ 14ರವರೆಗೆ ಮೀನುಗಾರಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿತ್ತು.

ಒಂದಷ್ಟು ಬದಲಾವಣೆಗಳು: ಈ ವರ್ಷ ಬಂದರು ಹಾಗೂ ದೋಣಿಗಳಲ್ಲಿ ಮೀನುಗಾರರ ನಡುವೆ ಅಂತರ ಕಾಯ್ದುಕೊಳ್ಳುವುದು, ಮುಖಗವಸು, ಕೈಗವಸು ಧರಿಸುವುದು, ಫೇಸ್‌ ಶೀಲ್ಡ್ ತೊಡುವುದು, ಕೈಗಳನ್ನು ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸುವುದು ಮೀನುಗಾರಿಕಾ ಚಟುವಟಿಕೆಯ ಭಾಗವಾಗಲಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಕೈಗೊಂಡಿರುವ ಸಿದ್ಧತೆಯ ಬಗ್ಗೆ ಬೈತಖೋಲ್‌ನ ಶ್ರೀಧರ ಹರಿಕಂತ್ರ ಮಾಹಿತಿ ನೀಡಿದರು.

‘ಈ ಬಾರಿ ಪರ್ಸೀನ್ ದೋಣಿಗಳ ಮಾಲೀಕರು ಮೀನುಗಾರಿಕೆ ಆರಂಭವಾದ ಐದು ದಿನಗಳ ನಂತರ (ಆ.5) ಆಳಸಮುದ್ರಕ್ಕೆ ಹೋಗಲು ನಿರ್ಧರಿಸಿದ್ದಾರೆ. ಲಾಕ್‌ಡೌನ್ ಪ್ರಕಟವಾದ ಬಳಿಕ ಸಾವಿರಾರು ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ. ಈ ವರ್ಷ ಅವರು ಬರುವ ಸಾಧ್ಯತೆಗಳು ಕಡಿಮೆ. ಇದು 15–20 ಕಾರ್ಮಿಕರು ಬೇಕಾಗುವ ಪರ್ಸೀನ್ ದೋಣಿಗಳಿಗೆ ಸಮಸ್ಯೆಯಾಗಬಹುದು. ಸಾಮಾನ್ಯ ಮೀನುಗಾರಿಕಾ ದೋಣಿಗಳಿಗೆ ಜಿಲ್ಲೆಯ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ’ ಎಂದು ವಿವರಿಸಿದರು.

ಆದಾಯದಲ್ಲಿ ಕಡಿತ: ‘ಸೆಟ್ಲೆಗೆ ಕೆ.ಜಿ.ಗೆ ₹ 105 ಕೊಡುತ್ತಾರೆ. ಆದರೆ, ಡೀಸೆಲ್ ವೆಚ್ಚ ಹಾಗೂ ಕಾರ್ಮಿಕರ ವೇತನಕ್ಕೆ ಇದು ಸಾಕಾಗುವುದಿಲ್ಲ. ಒಂದು ಕ್ವಿಂಟಲ್ ಸೆಟ್ಲೆ ಸಿಕ್ಕಿದರೆ ₹ 10,500 ಆದಾಯವಾಯಿತು. ಒಂದು ಪರ್ಸಿನ್ ದೋಣಿಗೆ ಕನಿಷ್ಠ 100 ಲೀಟರ್ ಡೀಸೆಲ್ ಬೇಕು. ಈಗಿನ ದರದ ಪ್ರಕಾರ ಸುಮಾರು ₹ 8 ಸಾವಿರ ಅದಕ್ಕೆ ವ್ಯಯವಾಗುತ್ತದೆ’ ಎಂದು ಲೆಕ್ಕಾಚಾರ ಮುಂದಿಟ್ಟರು.

‘ಸುಮಾರು ₹ 3 ಸಾವಿರ ಕಾರ್ಮಿಕರ ವೇತನವಾದರೆ, ಒಟ್ಟು ಖರ್ಚು ₹ 11 ಸಾವಿರವಾಗುತ್ತದೆ. ಇದರಿಂದ ನಷ್ಟವಾಗುತ್ತದೆ. ಕೋವಿಡ್ ಕಾರಣದಿಂದ ಮೀನು ಉತ್ಪನ್ನಗಳ ಕಾರ್ಖಾನೆಗಳು ಸ್ಥಗಿತವಾಗಿವೆ. ಹಾಗಾಗಿ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ಮೀನುಗಾರರು ಸಭೆ ಸೇರಿ ನಿರ್ಧಾರಕ್ಕೆ ಬರಲಿದ್ದಾರೆ’ ಎಂದು ಹೇಳಿದರು.

‘ಪಾಸ್ ಇದ್ದರಷ್ಟೇ ಪ್ರವೇಶ’: ‘ಹೊರ ರಾಜ್ಯಗಳಿಂದ ಬರುವ ಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ಆರೋಗ್ಯ ಇಲಾಖೆ, ಮೀನುಗಾರಿಕಾ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಬೇಕು. ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗಿಕೊಂಡವರು ಮಾತ್ರ ಅಧಿಕೃತ ಪಾಸ್ ತೆಗೆದುಕೊಂಡು ಬಂದರಿಗೆ ಹೋಗಬಹುದು. ಮೀನುಗಾರರಿಗೆ ದೋಣಿಗಳಿಗೇ ಅಗತ್ಯ ಆಹಾರ ಸಾಮಾಗ್ರಿ ಪೂರೈಕೆ ಮಾಡಬೇಕು. ಸಾರ್ವಜನಿಕರು ವಿನಾ ಕಾರಣ ಸಂಚರಿಸಬಾರದು ಎಂದು ಈಗಾಗಲೇ ಸೂಚನೆ ನೀಡಲಾಗಿದೆ’ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು