ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಬನವಾಸಿಯಲ್ಲಿ ‘ಫಿಲಿಪ್ಪೀನ್ಸ್ ಅನಾನಸ್’

ಪ್ರಾಯೋಗಿಕ ಕೃಷಿ:ಫಲಾನುಭವಿ ಆಯ್ಕೆ ಮಾಡಿದ ತೋಟಗಾರಿಕಾ ಇಲಾಖೆ
Last Updated 6 ಜುಲೈ 2022, 20:30 IST
ಅಕ್ಷರ ಗಾತ್ರ

ಶಿರಸಿ: ಬಹುಬೇಡಿಕೆ ಹೊಂದಿರುವ ಫಿಲಿಪ್ಪೀನ್ಸ್ ಮೂಲದ ‘ಎಂ.ಡಿ.–2’ ತಳೀಯ ಅನಾನಸ್‍ನ್ನು ತಾಲ್ಲೂಕಿನ ಬನವಾಸಿ ಭಾಗದಲ್ಲಿ ಬೆಳೆಸಿ, ಪರಿಚಯಿಸುವ ಪ್ರಾಯೋಗಿಕ ಯೋಜನೆಯನ್ನು ತೋಟಗಾರಿಕಾ ಇಲಾಖೆ ಕೈಗೆತ್ತಿಕೊಂಡಿದೆ.

ಅನಾನಸ್ ಹೆಚ್ಚು ಬೆಳೆಯುವ ಸೊರಬ ಮತ್ತು ಬನವಾಸಿ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಈ ತಳಿಯ ಹಣ್ಣಿನ ಗಿಡ ಬೆಳೆಸಲು ರಾಜ್ಯ ಸರ್ಕಾರದ ನಿರ್ದೇಶನದಂತೆ ಇಲಾಖೆ ಮುಂದಡಿ ಇಟ್ಟಿದೆ. ಬನವಾಸಿ ಹೋಬಳಿಯ 11 ರೈತರನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ರೈತರ ತಲಾ 15 ಗುಂಟೆ ಜಾಗದಲ್ಲಿ ಮಾತ್ರ ಪ್ರಸಕ್ತ ವರ್ಷ ಎಂ.ಡಿ.–2 ತಳಿಯ ಅನಾನಸ್ ಬಿತ್ತನೆ ಮಾಡಲಾಗುತ್ತದೆ.

ಸದ್ಯ ಬನವಾಸಿ ವ್ಯಾಪ್ತಿಯಲ್ಲಿ ‘ರಾಜಾ’, ‘ಗೇಂಟ್–ಕ್ಯೂ’ ತಳಿಯ ಅನಾನಸ್‍ಗಳನ್ನು ವ್ಯಾಪಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಉತ್ತರ ಭಾರತದ ದೆಹಲಿ, ಹರಿಯಾಣಕ್ಕೆ ಇಲ್ಲಿಂದ ಹಣ್ಣುಗಳು ಪೂರೈಕೆ ಆಗುತ್ತಿದೆ.

‘ಎಂ.ಡಿ.–2 ತಳಿಯ ಅನಾನಸ್ ದೇಶದ ಅಸ್ಸಾಂ ಭಾಗದಲ್ಲಿ ಬೆಳೆಯಲಾಗುತ್ತಿದೆ. ಸಾಮಾನ್ಯ ಅನಾನಸ್‍ಗಳು ಸರಾಸರಿ 2 ಕೆ.ಜಿ. ತೂಗಿದರೆ, ಈ ತಳಿಯ ಹಣ್ಣುಗಳು ಎರಡೂವರೆ ಕೆ.ಜಿ ತೂಕದವರೆಗೆ ಬೆಳೆಯುತ್ತವೆ. ರೈತರಿಗೂ ಇದು ಲಾಭದಾಯಕವಾಗಲಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ್ ಹೆಗಡೆ.

‘ಬನವಾಸಿ ಭಾಗದಲ್ಲಿ ಸದ್ಯ ಬೆಳೆಯುತ್ತಿರುವ ಅನಾನಸ್‍ಗಳಲ್ಲಿ ಬಹುಪಾಲು ಉತ್ತರ ಭಾರತದ ರಾಜ್ಯಗಳಿಗೆ ರವಾನೆಯಾಗುತ್ತಿವೆ. ಅಲ್ಲಿ ಅವುಗಳನ್ನು ಸಂಸ್ಕರಿಸಿ ಬೇರೆ ಬೇರೆ ಉತ್ಪನ್ನಗಳಾಗಿ ಬಳಸಲಾಗುತ್ತಿದೆ. ಎಂ.ಡಿ.–2 ತಳಿಯ ಅನಾನಸ್‍ಗಳಿಂದ ಹಲವು ವಿಧದ ಉತ್ಪನ್ನ ಸಿದ್ಧಪಡಿಸುವ ಜತೆಗೆ ನೇರವಾಗಿ ಸೇವಿಸಲು ಸಾಧ್ಯವಿದೆ. ಅಲ್ಲದೆ ಈ ಜಾತಿಯ ಹಣ್ಣುಗಳು ಹೆಚ್ಚು ಸಿಹಿ ಅಂಶವನ್ನೂ ಒಳಗೊಂಡಿರುವುದರಿಂದ ಬೇಡಿಕೆಯೂ ಹೆಚ್ಚು’ ಎಂದು ವಿವರಿಸಿದರು.

‘ಕೋವಿಡ್ ಸಂದರ್ಭದಲ್ಲಿ ಅನಾನಸ್ ಬೆಳೆಗಾರರು ಹೆಚ್ಚು ನಷ್ಟ ಅನುಭವಿಸಿದ್ದರು. ಹಣ್ಣುಗಳು ಹೊರರಾಜ್ಯಕ್ಕೆ ರಫ್ತಾಗಲು ಅಡ್ಡಿಯಾಗಿತ್ತು. ಸ್ಥಳೀಯವಾಗಿ ಬೇಡಿಕೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿತ್ತು. ಹೀಗಾಗಿ ಎಂ.ಡಿ.–2 ತಳಿಗೆ ಆದ್ಯತೆ ನೀಡುವ ಪ್ರಯತ್ನ ನಡೆಯುತ್ತಿದ್ದು ಈ ಹಣ್ಣುಗಳಿಗೆ ಸ್ಥಳೀಯವಾಗಿಯೂ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

--------------

ಪ್ರಾಯೋಗಿಕವಾಗಿ 4 ಎಕರೆ ಪ್ರದೇಶದಲ್ಲಿ ಎಂ.ಡಿ.–2 ತಳಿಯ ಅನಾನಸ್ ಬಿತ್ತನೆ ಗುರಿ ಹೊಂದಲಾಗಿದೆ. ಬಿತ್ತನೆಗೆ ಅಸ್ಸಾಂನಿಂದ ಬೀಜಗಳು ಸದ್ಯದಲ್ಲೇ ಪೂರೈಕೆಯಾಗಲಿವೆ.

- ಸತೀಶ್ ಹೆಗಡೆ,ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT