ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಯಾಚಿತ್ರಗ್ರಾಹಕರಿಂದ ‘ಬೆಂಗಳೂರು ಚಲೋ’

Last Updated 9 ಅಕ್ಟೋಬರ್ 2020, 13:01 IST
ಅಕ್ಷರ ಗಾತ್ರ

ಕಾರವಾರ: ಕೊರೊನಾ ಕಾರಣದಿಂದ ಲಾಕ್‌ಡೌನ್ ಘೋಷಿಸಿದ ಬಳಿಕ ಛಾಯಾಚಿತ್ರಗ್ರಾಹಕರಿಗೆ ಕೆಲಸವೇ ಇಲ್ಲದಂತಾಗಿದೆ. ಆದ್ದರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಅ.31ರಂದು ‘ಬೆಂಗಳೂರು ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

‌ಈ ಸಂಬಂಧ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಬಳಿಕ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ ಪಿ.ನೇರಲಕಟ್ಟೆ, ‘ಛಾಯಾಚಿತ್ರಗ್ರಾಹಕರು ಮದುವೆ, ಮುಂಜಿ ನಡೆಯುವ ವರ್ಷದ ಮೂರು ತಿಂಗಳಲ್ಲಿ ದುಡಿದುಕೊಳ್ಳಬೇಕು. ಆದರೆ, ಕೊರೊನಾ ಸಂಬಂಧ ಲಾಕ್‌ಡೌನ್ ಘೋಷಣೆಯಾದ ಬಳಿಕ ಮದುವೆ ಮತ್ತಿತರ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದ್ದು, ಸರ್ಕಾರವು ನೆರವಿಗೆ ಬರಬೇಕು’ ಎಂದು ಒತ್ತಾಯಿಸಿದರು.

‘ಛಾಯಾಚಿತ್ರಗ್ರಾಹಕರಿಗೆ ವಿಶೇಷ ಪ್ಯಾಕೇಜ್ ನೆರವು ಘೋಷಿಸುವುದು, ಅಸಂಘಟಿತ ಕಾರ್ಮಿಕ ವಲಯದ 42ನೇ ವರ್ಗಕ್ಕೆ ಸೇರಿರುವ ಛಾಯಾಚಿತ್ರಗ್ರಾಹಕರಿಗೆ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸ್ಮಾರ್ಟ್ ಕಾರ್ಡ್ ವಿತರಿಸಬೇಕು. ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಬೇಕು. ಛಾಯಾ ಭವನಕ್ಕೆ ನಿವೇಶನ ಒದಗಿಸುವುದು, ವೃತ್ತಿಪರ ಛಾಯಾಚಿತ್ರಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವುದು, ವೃತ್ತಿ ಭದ್ರತೆ ಒದಗಿಸುವ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು’ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಮಂಜು.ವಿ.ನಾಯ್ಕ ಮಾತನಾಡಿ, ‘ಲಾಕ್‌ಡೌನ್ ಅವಧಿಯಲ್ಲಿ ಸಂಘ ಸಂಸ್ಥೆಗಳು ನಮಗೆ ಆಹಾರದ ಕಿಟ್‌ಗಳನ್ನು ನೀಡಿವೆ. ಆದರೆ, ನಂತರದ ಜೀವನ ಕಷ್ಟವಾಗಿದೆ. ನಮಗೆ ಸೌಲಭ್ಯ ನೀಡುವಂತೆ ಅಧಿಕಾರಿಗಳು, ಶಾಸಕರು, ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹೊನ್ನಾವರ ಘಟಕದ ಅಧ್ಯಕ್ಷ ಮಂಜು ಬಳ್ಕೂರ್, ಭಟ್ಕಳ ಘಟಕದ ಅಧ್ಯಕ್ಷ ಶ್ರೀನಿವಾಸ ಎಸ್.ನಾಯ್ಕ, ಕಾರವಾರ ತಾಲ್ಲೂಕು ಘಟಕದ ಅಧ್ಯಕ್ಷ ಸೂರಜ್ ಜೋಗಳೇಕರ್, ಗೋಕರ್ಣದ ಹರೀಶ ಸೂರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT