ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರೋಡೆಕೋರರ ಬಂಧನ : ಮಾರಕಾಸ್ತ್ರ ವಶ

Last Updated 29 ಮಾರ್ಚ್ 2020, 16:00 IST
ಅಕ್ಷರ ಗಾತ್ರ

ಯಲ್ಲಾಪುರ: ಒಂಟಿ ಮನೆ ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ಅಂತರರಾಜ್ಯ ದರೋಡೆಕೋರರ ತಂಡವನ್ನು ಇಲ್ಲಿನ ಪೊಲೀಸರು ತಾಲ್ಲೂಕಿನ ಹಿತ್ಲಳ್ಳಿ ಬಳಿ ಬಂಧಿಸಿ, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಶನಿವಾರ ಬೆಳಗಿನ ಜಾವ ದರೋಡೆಕೋರರು ಹಿತ್ಲಳ್ಳಿ ಗ್ರಾಮದಲ್ಲಿದ್ದ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ, ಪೊಲೀಸರು ದಾಳಿ ನಡೆಸಿದರು. ಮಧ್ಯ ಪ್ರದೇಶ ಅಲಿರಾಜಪುರದ ಹೀರಾಸಿಂಗ್ ಡೋಂಗರಸಿಂಗ್ ಭಾಮನಿಯಾ, ದುಡಿಯಾ (ನಿಲೇಶ) ಡೊಂಗರಸಿಂಗ್ ಭಾಮನಿಯಾ, ಕೆಂದು (ನಾನಕಾಪೊರೆ) ಡೊಂಗರಸಿಂಗ್ ಭಾಮನಿಯಾ. ಖೇಲು ಸಾವರಸಿಂಗ್ ಭಾಮನಿಯಾ, ರೆಂದಾ (ಹಾಬು) ಬಾಲು ಭಾಮನಿಯಾ ಬಂಧಿತರು.

ಪ್ರಮುಖ ಆರೋಪಿ ಹೀರಾಸಿಂಗ್ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಈ ಹಿಂದೆ ಕಾರವಾರ ಜೈಲಿನಲ್ಲಿದ್ದಾಗ ಯಲ್ಲಾಪುರದ ಅನಂತ ಕೋತ ಎಂಬ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡು ಹಿತ್ಲಳ್ಳಿ ಜಾಗನಮನೆಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ತಪ್ಪಿಸಿಕೊಂಡು ಓಡಿಹೋಗಿದ್ದ. 2017ರಲ್ಲಿ ಶಿರಸಿಯಲ್ಲಿ ಮನೆಯೊಂದರ ಒಳಹೊಕ್ಕಿ ಜನರ ಮೇಲೆ ಹಲ್ಲೆ ನಡೆಸಿರುವ ಪ್ರಕರಣವೂ ಈತನ ಮೇಲಿದೆ. ಕುಮಟಾದಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದು, ಪೊಲೀಸರು ಬೆನ್ನತ್ತಿದಾಗ ಚಲಿಸುವ ರೈಲಿನಿಂದ ಹಾರಿ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲ ಆರೋಪಿತರು ಆದಿವಾಸಿಗಳಾದ ಬಿಲ್ಲ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 10 ವರ್ಷಗಳಿಂದ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ದರೋಡೆ, ಕಳ್ಳತನ ಮಾಡಿರುವ ಆರೋಪಗಳು ಇವರ ಮೇಲಿವೆ. ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ನಡೆದಿರುವ ಅನೇಕ ಕಳ್ಳತನ ಪ್ರಕರಣ, ಗೋವಾ, ರಾಜಸ್ಥಾನ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ನಡೆದಿರುವ 100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಂಗತಿಯನ್ನು, ಆರೋಪಿಗಳು ತನಿಖೆಯ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ‍ಅವರು ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಲ್ಲಾಪುರ ಪಿಎಸ್‌ಐಗಳಾದ ಸುರೇಶ, ಮಂಜುನಾಥ ಗೌಡರ್, ಸಿಬ್ಬಂದಿ ಬಸವರಾಜ ಹಗರಿ, ಮಹ್ಮದ ಶಫಿ, ಗಜಾನನ ನಾಯ್ಕ, ನಂದೀಶ ಗುಡ್ಡೋಡಗಿ, ವಿನೋದಕುಮಾರ ರೆಡ್ಡಿ, ಪರಶುರಾಮ ಕಾಳೆ, ಕರ್ಣಕುಮಾರ, ಚಿದಂಬರ ಅಂಗಡಿ, ಕೃಷ್ಣ ಮಾತ್ರೋಜಿ, ಗಿರೀಶ ಲಮಾಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT