ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಪ್ರವಾಸಿಗನಿಗೆ ನೆರವಾದ ಪೊಲೀಸರು

ದಿಕ್ಕು ತೋಚದೇ ಜಿಲ್ಲಾಧಿಕಾರಿ ಕಚೇರಿಯಲ್ಲೇ ರಾತ್ರಿ ಕಳೆದ ಯುವಕ
Last Updated 21 ಜೂನ್ 2020, 11:44 IST
ಅಕ್ಷರ ಗಾತ್ರ

ಕಾರವಾರ:ಕೈಯಲ್ಲಿದ್ದ ದುಡ್ಡೆಲ್ಲ ಖರ್ಚಾಗಿ ಪುನಃ ಸ್ವದೇಶಕ್ಕೆ ಹೋಗಲಾಗದೇ ಪರದಾಡುತ್ತಿದ್ದ ರಷ್ಯಾ ಪ್ರವಾಸಿಗನಿಗೆನಗರದ ಪೊಲೀಸರು ಸಹಾಯ ಮಾಡಿದ್ದಾರೆ. ಆತ ಮುಂಬೈನಲ್ಲಿರುವ ರಾಯಭಾರ ಕಚೇರಿಯನ್ನು ತಲುಪುವ ವ್ಯವಸ್ಥೆ ಮಾಡಿದ್ದಾರೆ.

ರುಸ್ಲಾನ್ (32) ಎಂಬಾತನೇ ಸಂಕಷ್ಟದಲ್ಲಿದ್ದ ಪ್ರವಾಸಿ. ಗೋಕರ್ಣದಿಂದ ಬಸ್ ಹತ್ತಿ ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕುಳಿತಿದ್ದ ಆತ, ಇಡೀ ರಾತ್ರಿಯನ್ನು ಅಲ್ಲೇ ಕಳೆದಿದ್ದ. ಶನಿವಾರ ಬೆಳಿಗ್ಗೆ ಸಿಬ್ಬಂದಿ ಕರ್ತವ್ಯಕ್ಕೆ ಬರುವಾಗ ವ್ಯಾಯಾಮ ಮಾಡುತ್ತಿದ್ದ ಆತನನ್ನು ನೋಡಿ ಗಾಬರಿಯಾದರು. ಆತನ ಪೂರ್ವಾಪರ ತಿಳಿದುಕೊಳ್ಳಲು ಭಾಷೆಯ ತೊಡಕಾಯಿತು. ಆತನಿಗೆ ರಷ್ಯನ್ ಹೊರತಾಗಿಇಂಗ್ಲಿಷ್ ಸೇರಿದಂತೆ ಮತ್ಯಾವುದೇ ಭಾಷೆ ಬರುತ್ತಿರಲಿಲ್ಲ.

ವಿಷಯ ತಿಳಿದು ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಪಿ.ಎಸ್.ಐ ಸಂತೋಷಕುಮಾರ್ ಹಾಗೂ ಹಲವರು ಮಾತನಾಡಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಆತನನ್ನು ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಗೂಗಲ್ ಟ್ರಾನ್ಸ್‌ಲೇಟರ್ ಮೂಲಕ ಸಮಸ್ಯೆಯನ್ನು ಅರಿತುಕೊಂಡರು. ಬಳಿಕ ಮುಂಬೈನಲ್ಲಿರುವ ರಷ್ಯಾದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಬಸ್‌ನಲ್ಲಿ ಆತನನ್ನು ಅಲ್ಲಿಗೆ ಕಳುಹಿಸಿಕೊಟ್ಟರು.

ಕೆಲವು ತಿಂಗಳ ಹಿಂದೆ ಗೋಕರ್ಣಕ್ಕೆ ಪ್ರವಾಸ ಬಂದಿದ್ದ ಆತ, ಲಾಕ್‌ಡೌನ್ಕಾರಣದಿಂದ ಎಲ್ಲೂ ಹೋಗಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಆತನ ವೀಸಾ ಅವಧಿಯೂ ಮುಕ್ತಾಯವಾಗಿತ್ತು. ತನ್ನ ಬ್ಯಾಗ್, ಹಣ, ಮೊಬೈಲ್ ಫೋನ್‌ ಅನ್ನು ಆತ ಕಳೆದುಕೊಂಡಿದ್ದ. ಪಾಸ್‌ಪೋರ್ಟ್‌ ಮಾತ್ರ ಜೊತೆಗಿತ್ತು. ಈ ನಡುವೆ ಆತನ ವೀಸಾ ಅವಧಿಯನ್ನು ವಿದೇಶಾಂಗ ಇಲಾಖೆಯು ಜೂನ್ ಅಂತ್ಯದವರೆಗೆ ವಿಸ್ತರಿಸಿದ್ದು ಪರಿಶೀಲನೆಯಲ್ಲಿ ತಿಳಿಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT