ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಲ್ಲೂ ಪೊಲೀಸರ ಕಾರ್ಯ ಶ್ಲಾಘನೀಯ: ವಿಪುಲಾ ಎಂ.ಬಿ.ಪೂಜಾರಿ

‘ಪೊಲೀಸ್ ಹುತಾತ್ಮ ದಿನಾಚರಣೆ’ ಕಾರ್ಯಕ್ರಮ
Last Updated 22 ಅಕ್ಟೋಬರ್ 2020, 3:54 IST
ಅಕ್ಷರ ಗಾತ್ರ

ಕಾರವಾರ: ‘ಕೋವಿಡ್‌ನಂತಹ ಸಾಂಕ್ರಾಮಿಕ ಸೋಂಕಿನ ಸಂದರ್ಭದಲ್ಲೂ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ವಿಪುಲಾ ಎಂ.ಬಿ.ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ‘ಪೊಲೀಸ್ ಹುತಾತ್ಮ ದಿನಾಚರಣೆ’ ಕಾರ್ಯಕ್ರಮದಲ್ಲಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಹಲವು ಪೊಲೀಸರೂ ಕೋವಿಡ್‌ಗೆ ಒಳಗಾಗಿದ್ದಾರೆ. ಆದರೆ, ಅವರು ತಮ್ಮ ಕುಟುಂಬದಿಂದ ದೂರವಿದ್ದು, ಕರ್ತವ್ಯ ನಿಭಾಯಿಸಿದ್ದಾರೆ. ಶಾಂತಿ, ಸುವ್ಯವಸ್ಥೆ, ಕಾನೂನು ಪಾಲನೆಯ ಬಗ್ಗೆ ಶ್ರಮಿಸಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹುತಾತ್ಮ ಪೊಲೀಸರ ಪಟ್ಟಿಯನ್ನು ಓದಿದರು. ಇದೇವೇಳೆ, ಮೂರು ಬಾರಿ ಕುಶಾಲತೋಪು ಹಾರಿಸಿ, ಮೌನಾಚರಣೆ ಮಾಡಲಾಯಿತು. ಪೊಲೀಸ್ ಧ್ವಜವನ್ನು ಅರ್ಧಕ್ಕೆ ಇಳಿಸಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಲಾಯಿತು.

ದಿನಾಚರಣೆಯ ಅಂಗವಾಗಿ ಸಂಜೆ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಪೊಲೀಸ್ ಬ್ಯಾಂಡ್ ಪ್ರದರ್ಶನ ಹಮ್ಮಿಕೊಳ್ಳಲಾಯಿತು. ಹಲವು ವರ್ಷಗಳಿಂದ ಮೈಸೂರು ದಸರಾ ಬ್ಯಾಂಡ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆಲ್ಲುತ್ತಿರುವ ಕಾರವಾರ ಪೊಲೀಸ್ ವಾದ್ಯಮೇಳ ಗಮನ ಸೆಳೆಯಿತು.

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT