ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಸೈಬರ್ ವಂಚಕರು ಎಗರಿಸಿದ್ದ ಮೊತ್ತವನ್ನು ವರ್ಗಾವಣೆಯಾಗದಂತೆ ತಡೆದ ಪೊಲೀಸರು

ಪೊಲೀಸರ ಕಾರ್ಯಾಚರಣೆ: ಬ್ಯಾಂಕ್ ಖಾತೆಗಳಿಗೆ ಮರಳಿದ ಹಣ
Last Updated 26 ಜುಲೈ 2022, 14:41 IST
ಅಕ್ಷರ ಗಾತ್ರ

ಕಾರವಾರ: ಸೈಬರ್ ವಂಚಕರು ಜಿಲ್ಲೆಯ ವಿವಿಧ ಪ್ರಕರಣಗಳಲ್ಲಿ ಎಗರಿಸಿದ್ದ ಒಟ್ಟು ₹ 7.91 ಲಕ್ಷ ಹಣದ ಅಕ್ರಮ ವರ್ಗಾವಣೆಯನ್ನು ತಡೆಯುವಲ್ಲಿ ಸಿ.ಇ.ಎನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆ ಹಣವು ಸಂಬಂಧಿಸಿದವರ ಬ್ಯಾಂಕ್ ಖಾತೆಗಳಿಗೆ ಮರು ಜಮೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 21ರಂದು ಸಿದ್ದಾಪುರದ ಗಜಾನನ ಎಂಬುವವರ ಬ್ಯಾಂಕ್ ಖಾತೆಗೆ ಸಂಬಂಧಿಸಿ ಒ.ಟಿ.ಪಿ ಪಡೆದಿದ್ದ ವಂಚಕರು, ₹ 1.79 ಲಕ್ಷವನ್ನು ಲಪಟಾಯಿಸಿದ್ದರು. ಈ ಬಗ್ಗೆ ಅವರು ದೂರು ನೀಡಿದ್ದರು.

ಜ.10ರಂದು ನೌಕಾನೆಲೆಯ ಸಿಬ್ಬಂದಿ ಮನೋಜ್ ಎಂಬುವವರ ಬ್ಯಾಂಕ್ ಖಾತೆಯಿಂದ ₹ 1.83 ಲಕ್ಷವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಏ.27ರಂದು ಹೊನ್ನಾವರದ ತಾರಾ ಸುಭಾಷ್ ಅವರ ಬ್ಯಾಂಕ್ ಖಾತೆಯಿಂದ ₹ 50 ಸಾವಿರ, ಕಳೆದ ವರ್ಷ ಸೆ.8ರಂದು ಅಂಕೋಲಾ ಮಂಜುನಾಥ ಎಂಬುವವರ ಬ್ಯಾಂಕ್ ಖಾತೆಯಿಂದ ₹ 77,700 ಅನ್ನು ಆರೋಪಿಗಳು ವರ್ಗಾವಣೆ ಮಾಡಿಕೊಂಡಿದ್ದರು.

ಸಲ್ಲಿಕೆಯಾದ ದೂರುಗಳನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಸಂಬಂಧಿಸಿದ ಬ್ಯಾಂಕ್ ಮತ್ತು ನೋಡಲ್ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿದರು. ಆ ಹಣವು ಮತ್ತೊಂದು ಬ್ಯಾಂಕ್ ಖಾತೆಗೆ ವರ್ಗಾವಣೆಯಾಗದ ರೀತಿ ಕ್ರಮ ಕೈಗೊಂಡರು.

ತಕ್ಷಣಕ್ಕೆ ಆರೋಪಿಗಳ ಬಂಧನವಾಗಿಲ್ಲ. ಅವರಿಗೆ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದ್ರಿನಾಥ್ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಠಾಣೆಯ ಇನ್‌ಸ್ಪೆಕ್ಟರ್ ನಿತ್ಯಾನಂದ ಪಂಡಿತ್ ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ಶ್ಲಾಘಿಸಿದ್ದಾರೆ.

ಎಚ್ಚರಿಕೆ ವಹಿಸಲು ಸೂಚನೆ:

‘ಯಾವುದೇ ಬ್ಯಾಂಕ್‌, ಮೊಬೈಲ್ ನೆಟ್‌ವರ್ಕ್ ಕಂಪನಿ ಅಥವಾ ಇನ್ಯಾವುದೇ ಸಂಸ್ಥೆಯು ತಮ್ಮ ಸೇವೆಗಳ ನವೀಕರಣಕ್ಕಾಗಿ ನಿಮ್ಮ ಕೆ.ವೈ.ಸಿ, ಆಧಾರ್, ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಒ.ಟಿ.ಪಿ ವಿವರಗಳನ್ನು ಕೇಳುವುದಿಲ್ಲ. ಯಾವುದೇ ಅಪ್ಲಿಕೇಷನ್ ಡೌನ್‌ಲೋಡ್ ಮಾಡಲು ಹೇಳುವುದಿಲ್ಲ. ಆದ್ದರಿಂದ ಮೋಸದ ಕರೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ತಿಳಿಸಿದ್ದಾರೆ.

‘ಆನ್‌ಲೈನ್ ಆ್ಯಪ್‌ಗಳ ಮೂಲಕ ಹಣ ವರ್ಗಾವಣೆ ಮಾಡಿದಾಗ ಸಂಬಂಧಪಟ್ಟವರಿಗೆ ತಲುಪದಿದ್ದರೆ ಗೂಗಲ್‌ ಮೂಲಕ ಗ್ರಾಹಕರ ಸಹಾಯವಾಣಿ ಸಂಖ್ಯೆಯನ್ನು ಹುಡುಕಲಾಗುತ್ತದೆ. ಆ ಸಂಖ್ಯೆಗೆ ಕರೆ ಮಾಡಿದಾಗ ಅವರು ಒಂದು ಲಿಂಕ್, ಸಂದೇಶ ಅಥವಾ ಯು.ಪಿ.ಐ ಪಿನ್ ಅನ್ನು ಮತ್ತೊಂದು ಮೊಬೈಲ್ ಫೋನ್ ನಂಬರ್‌ಗೆ ಕಳುಹಿಸಲು ಹೇಳಿದರೆ ಕಳುಹಿಸಬೇಡಿ. ಅಂಥ ಸಂಖ್ಯೆಗಳು ವಂಚಕರದ್ದಾಗಿರುತ್ತವೆ’ ಎಂದು ಮಾಹಿತಿ ನೀಡಿದ್ದಾರೆ.

ಯಾರಾದರೂ ವಂಚನೆಗೆ ಒಳಗಾಗಿದ್ದರೆ ಹತ್ತಿರದ ಪೊಲೀಸ್ ಠಾಣೆ ಅಥವಾ ಸಿ.ಇ.ಎನ್ ಅಪರಾಧಗಳ ಪೊಲೀಸ್ ಠಾಣೆಯಲ್ಲೂ ದೂರು ನೀಡುವಂತೆಯೂ ತಿಳಿಸಿದ್ದಾರೆ.

––––

* ಸೈಬರ್ ವಂಚನೆಯ ಬಗ್ಗೆ 1930 ಅಥವಾ 112ಗೆ ಕರೆ ಮಾಡಬಹುದು. ಸೈಬರ್ ಪೋರ್ಟಲ್: www.cybercrime.gov.inನಲ್ಲಿ ದೂರು ದಾಖಲಿಸಬಹುದು.

– ಡಾ.ಸುಮನ್ ಪೆನ್ನೇಕರ್, ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT