ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನತಾ ಕರ್ಫ್ಯೂ’ ಜಾರಿಗೆ ತೀವ್ರ ನಿಗಾ, ಪೊಲೀಸರ ತಂಡದಿಂದ ಗಸ್ತು

ಕೊರೊನಾ ವೈರಸ್ ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ
Last Updated 21 ಮಾರ್ಚ್ 2020, 12:12 IST
ಅಕ್ಷರ ಗಾತ್ರ

ಕಾರವಾರ:‘ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ಕ್ರಮದ ಭಾಗವಾಗಿ ಪ್ರಕಟಿಸಲಾಗಿರುವಮಾರ್ಚ್ 21ರ ಜನತಾ ಕರ್ಫ್ಯೂ ಸಂದರ್ಭ ಎಲ್ಲರೂ ತಮ್ಮ ಮನೆಗಳಲ್ಲೇ ಇರಬೇಕು. ಇದು ಗಂಭೀರ ವಿಚಾರವಾದ ಕಾರಣ ಪೊಲೀಸರು ತಂಡಗಳನ್ನು ರಚಿಸಿ ನಿಗಾ ವಹಿಸಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಾಂಕ್ರಾಮಿಕ ಸೋಂಕು ಈಗ ನಮ್ಮ ದೇಶದಲ್ಲಿ ಮೂರನೇ ಹಂತಕ್ಕೆ ತಲುಪಿರುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ವೈರಸ್ ಹರಡುವ ವಾಹಕ ಆಗಬಾರದು. ಜನತಾಕರ್ಫ್ಯೂಗೆ ಜನರಸ್ಪಂದನೆಯನ್ನು ಅವಲೋಕಿಸಲಾಗುವುದು. ಅದನ್ನು ಆಧರಿಸಿ ಮುಂದಿನ ದಿನಗಳಲ್ಲಿ ಐವರಿಗಿಂತ ಅಧಿಕ ಜನರು ಗುಂಪು ಸೇರದಂತೆಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದುತಿಳಿಸಿದರು.

‘ದವಸ ಧಾನ್ಯ, ತರಕಾರಿ, ಹಾಲು ಮುಂತಾದ ದೈನಂದಿನ ಅಗತ್ಯ ವಸ್ತುಗಳಿಗೆ ಕೊರತೆ ಆಗಬಾರದು. ಅವುಗಳನ್ನು ಮನೆ ಬಾಗಿಲಿಗೇ ತಲುಪಿಸುವ ನಿಟ್ಟಿನಲ್ಲಿ ಸಾಧ್ಯವಾದ ಪ್ರಯತ್ನ ಮಾಡಲಾಗುವುದು. ಒಟ್ಟಿನಲ್ಲಿ ಯಾರೂ ಅನಗತ್ಯವಾಗಿ ಸಂಚರಿಸಬಾರದು’ ಎಂದು ತಿಳಿಸಿದರು.

‘ಈಗಾಗಲೇ ನಿಗದಿಯಾಗಿರುವ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡಬೇಕು. ಕನಿಷ್ಠ ಇನ್ನೊಂದು ವಾರ ಜನರು ಗುಂಪು ಸೇರಬಾರದು. ಎಷ್ಟೇ ಜಾಗೃತಿ ಮೂಡಿಸಿದರೂ‍ಪ್ರಜ್ಞಾವಂತರು, ವಿದ್ಯಾವಂತರೇ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ದುರದೃಷ್ಟಕರ’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

‘ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವವರು ಈ ವೈರಸ್ ದಾಳಿಗೆ ತುತ್ತಾಗುವ ಸಾಧ್ಯತೆ ಅಧಿಕ. ಆದ್ದರಿಂದಅತ್ಯಗತ್ಯ ಸೇವೆಯಲ್ಲಿ ತೊಡಗಿಕೊಂಡಿರುವವರು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಹಾಜರಾಗಬೇಕು’ ಎಂದು ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಸುದ್ದಿಗೋಷ್ಠಿಯಲ್ಲಿದ್ದರು.

ಸೈರನ್ ಮೂಲಕಸೂಚನೆ:‘ಬೆಳಿಗ್ಗೆ 6.58ಕ್ಕೆ ಒಂದು ನಿಮಿಷದ ಸೈರನ್ ಮೊಳಗಲಿದ್ದು, ಆಗ ಜನತಾ ಕರ್ಫ್ಯೂ ಜಾರಿಯಾಯಿತು ಎಂದರ್ಥ. ಸಂಜೆ 5 ಗಂಟೆಗೆ 30 ಸೆಕೆಂಡ್‌ಗಳ ಮತ್ತೊಂದು ಸೈರನ್ ಮೊಳಗಲಿದ್ದು, ನಾಗರಿಕರು ತಮ್ಮ ಮನೆಗಳಲ್ಲೇ ಇದ್ದುಕೊಂಡು, ಅಗತ್ಯ ಸೇವೆಯಲ್ಲಿ ತೊಡಗಿಕೊಂಡವರಿಗೆ ಧನ್ಯವಾದ ಸಲ್ಲಿಸಲು ಚಪ್ಪಾಳೆ ಹೊಡೆಯಬಹುದು. ರಾತ್ರಿ 9ಕ್ಕೆ ಮತ್ತೊಂದು ದೀರ್ಘ ಸೈರನ್ ಕೇಳಿ ಬರಲಿದ್ದು, ಆಗ ಕರ್ಫ್ಯೂ ಮುಕ್ತಾಯವಾಗಲಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ತಿಳಿಸಿದರು.

‌‘72 ಗಂಟೆಯೂ ಜೀವಿಸಬಲ್ಲದು’:‘ಕೊರೊನಾ ವೈರಸ್‌ನ ಜೀವಿತಾವಧಿ ಎಂಟು ತಾಸು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡುತ್ತಿದೆ. ಆದರೆ, ಸ್ಟೀಲ್‌ ಪರಿಕರಗಳ ಮೇಲೆವೈರಸ್ 72 ಗಂಟೆಗಳವರೆಗೂ ಜೀವಿಸಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ. ಆದ್ದರಿಂದ ವೈದ್ಯರು ಹೇಳುವುದನ್ನು ನಂಬಿ. ವದಂತಿಗಳಿಗೆ ಕಿವಿಗೊಡಬೇಡಿ’ ಎಂದು ಮೊಹಮ್ಮದ್ ರೋಶನ್ ಸ್ಪಷ್ಟಪಡಿಸಿದರು.

ಯಾವುದು ಲಭ್ಯ: ಆಸ್ಪತ್ರೆ ಹಾಗೂ ಇತರ ತುರ್ತು ಆರೋಗ್ಯ ಸೇವೆಗಳು, ಪೊಲೀಸ್, ಪತ್ರಿಕೆ

ಯಾವುದು ಅಲಭ್ಯ:ಬಸ್ ಸಂಚಾರ, ಆಟೊ, ಟೆಂಪೊ, ಖಾಸಗಿ ವಾಹನ ಸಂಚಾರ, ಸಂತೆ, ಮಾರುಕಟ್ಟೆ, ಕಿರಾಣಿ ಅಂಗಡಿ ಸೇರಿದಂತೆ ಉಳಿದೆಲ್ಲ ಸೇವೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT