ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಮೀರಿದರೆ ದಂಡದ ಬಿಸಿ

ಕೋವಿಡ್ ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ: ಜನಸಂಚಾರ ತಡೆಯಲು ಪೊಲೀಸರಿಂದ ಗಸ್ತು
Last Updated 21 ಏಪ್ರಿಲ್ 2021, 16:17 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದ್ದು, ಜಿಲ್ಲೆಯಲ್ಲೂ ವಿವಿಧ ಮಾರ್ಗಸೂಚಿಗಳನ್ನು ಜಾರಿ ಮಾಡಲಾಗಿದೆ. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಬುಧವಾರ ಬ್ಯಾರಿಕೇಡ್ ಅಳವಡಿಸಿ, ಸಾರ್ವಜನಿಕರ ಅನಗತ್ಯ ಸಂಚಾರವನ್ನು ತಡೆಯಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ಜಿಲ್ಲೆಯಾದ್ಯಂತ ಕಳೆದ ಬಾರಿ ಜನತಾ ಕರ್ಫ್ಯೂ ಜಾರಿಯಾಗಿದ್ದ ಸಂದರ್ಭದಲ್ಲಿ ಮಾಡಿಕೊಳ್ಳಲಾಗಿದ್ದ ಮಾದರಿಯಲ್ಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿಯಮದ ಪಾಲನೆಯನ್ನು ಖಾತ್ರಿ ಪಡಿಸಿಕೊಳ್ಳಲು ಪೊಲೀಸರು ರಾತ್ರಿ 9ರಿಂದ ಗಸ್ತು ತಿರುಗಲಿದ್ದಾರೆ. ಅಲ್ಲದೇ ಬೂತ್ ಮಟ್ಟದಲ್ಲಿ ಆರೋಗ್ಯ, ಕಂದಾಯ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.

‘ಕೋವಿಡ್ ನಿಯಮಾವಳಿಗಳ ಜಾರಿ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಬಹುತೇಕ ಕಳೆದ ಬಾರಿಯಲ್ಲಿ ಅನುಸರಿಸಿದ ಕ್ರಮಗಳನ್ನೇ ಜಾರಿ ಮಾಡಲಾಗುತ್ತದೆ. ರಾತ್ರಿ 9ರ ನಂತರ ಕರ್ಫ್ಯೂ ಸಂದರ್ಭದಲ್ಲಿ ರಾತ್ರಿ ಪಾಳಿ ಉದ್ಯೋಗಕ್ಕೆ ಹೋಗುವವರು ತಮ್ಮ ಸಂಸ್ಥೆಯಿಂದ ನೀಡಿದ ಗುರುತಿನ ಚೀಟಿಯನ್ನು ತೋರಿಸಬೇಕು. ಉಳಿದಂತೆ ವೈದ್ಯಕೀಯ ಸೇವೆಗಳಿಗೆ ಮಾತ್ರ ಅವಕಾಶವಿರುತ್ತದೆ’ ಎಂದು ಹೇಳಿದ್ದಾರೆ.

ನಿಯಮ ಮೀರಿದರೆ ಕ್ರಮ:

‘ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಅನಗತ್ಯವಾಗಿ ಯಾರಾದರೂ ಸಂಚರಿಸುತ್ತಿರುವುದು ಕಂಡುಬಂದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಲ್ಲದೇ ದಂಡವನ್ನೂ ವಿಧಿಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ನಿಯಂತ್ರಣ ನಿಯಮಾವಳಿಗಳನ್ನು ಜಾರಿ ಮಾಡುವ ನಿಟ್ಟಿನಲ್ಲಿ ನಗರಸಭೆಯಲ್ಲಿ ಬುಧವಾರ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಹಮ್ಮಿಕೊಳ್ಳಲಾಯಿತು. ಹೋಟೆಲ್, ಕಿರಾಣಿ, ಮಾರುಕಟ್ಟೆಗಳಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪಿ.ಪಿ.ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ಬಾಡ್ಕರ್, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದಕುಮಾರ, ತಹಶೀಲ್ದಾರ್ ಆರ್.ವಿ.ಕಟ್ಟಿ, ನಗರಸಭೆ ಆಯುಕ್ತ ಆರ್.ಪಿ.ನಾಯ್ಕ, ತಾಲ್ಲೂಕು ಮತ್ತು ಸೆಕ್ಟರ್ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಮಧ್ಯಾಹ್ನ 2ರ ತನಕ ಬ್ಯಾಂಕ್:

ಕೋವಿಡ್ ಸೋಂಕು ನಿಯಂತ್ರಣದ ಭಾಗವಾಗಿ ಎಲ್ಲ ಬ್ಯಾಂಕ್‌ಗಳ ಶಾಖೆಗಳಲ್ಲಿ ಸಾರ್ವಜನಿಕರಿಗೆ ವ್ಯವಹಾರ ಅವಧಿಯನ್ನು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಸೀಮಿತಗೊಳಿಸಲಾಗಿದೆ. ಈ ನಿಯಮವು ಏ.22ರಿಂದ ಮೇ 31ರವರೆಗೆ ಜಾರಿಯಲ್ಲಿ ಇರಲಿದೆ.

ನಗದು ವ್ಯವಹಾರ, ಚೆಕ್ ಠೇವಣಿ, ಹಣದ ವರ್ಗಾವಣೆ, ಸರ್ಕಾರಿ ವ್ಯವಹಾರಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಜಿಲ್ಲಾ ಸಹವರ್ತಿ ಬ್ಯಾಂಕ್ ವ್ಯವಸ್ಥಾಪಕ ಪಿ.ಎಂ.ಪಿಂಜರ್ ತಿಳಿಸಿದ್ದಾರೆ.

ಈ ಅವಧಿಯಲ್ಲಿ ಬ್ಯಾಂಕ್‌ಗಳ ಆಡಳಿತ ಕಚೇರಿಗಳು ಮತ್ತು ಶಾಖೆಗಳಲ್ಲಿ ಶೇ 50ರಷ್ಟೇ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಎಲ್ಲ ಶಾಖೆಗಳು, ಎ.ಟಿ.ಎಂ ಕೇಂದ್ರಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡುವಂತೆಯೂ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಾರದ ಸಂತೆ ರದ್ದು:

ಕಾರವಾರದಲ್ಲಿ ಭಾನುವಾರದ ಸಂತೆಗಳನ್ನು ಮುಂದಿನ ಆದೇಶದ ತನಕ ರದ್ದು ಮಾಡಲಾಗಿದೆ ಎಂದು ಪ್ರಭಾರ ಆಯುಕ್ತ ಆರ್.ಪಿ.ನಾಯ್ಕ ತಿಳಿಸಿದ್ದಾರೆ.

ಪ್ರತಿ ದಿನ ರಾತ್ರಿ 9ರಿಂದ ಬೆಳಿಗ್ಗೆ 6ರ ತನಕ ಕರ್ಫ್ಯೂ ಮತ್ತು ಪ್ರತಿ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6 ತನಕ ದಿನವಿಡೀ ಕರ್ಫ್ಯೂ ಇರಲಿದೆ. ಹಾಗಾಗಿ ಈ ಅವಧಿಯಲ್ಲಿ ಸಂತೆ ಆಯೋಜಿಸಲು ಸಾಧ್ಯವಾಗದು. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT