ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸ್ಕತ್ ಕೊಂಡರೂ ಬೇಕು ಪ್ಲಾಸ್ಟಿಕ್ ಚೀಲ!

ಕಾರವಾರ: ನಗರದ ಅಂಗಡಿಗಳಲ್ಲಿ ಕದ್ದುಮುಚ್ಚಿ ಪ್ಲಾಸ್ಟಿಕ್ ಚೀಲಗಳ ಮಾರಾಟ
Last Updated 27 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಕಾರವಾರ: ‘ಅರ್ಧ ಲೀಟರ್ ಹಾಲಿನ ಪ್ಯಾಕೇಟ್ ಖರೀದಿಸಿದರೂ ಪ್ಲಾಸ್ಟಿಕ್ ಚೀಲ ಕೇಳುತ್ತಾರೆ. ಗರಂ ಮಸಾಲೆಯ ಸಣ್ಣ ಪ್ಯಾಕೇಟ್, ಬಿಸ್ಕತ್ತು, ಒಂದೆರಡು ಸಾಬೂನು ತೆಗೆದುಕೊಂಡರೂ ಅವುಗಳನ್ನು ಪ್ಲಾಸ್ಟಿಕ್ ಚೀಲದಲ್ಲೇ ಕೊಡಬೇಕು. ಇಲ್ಲದಿದ್ದರೆ ಗ್ರಾಹಕರಿಗೆಸಮಾಧಾನ ಆಗುವುದೇ ಇಲ್ಲ...’

ನಗರದಲ್ಲಿ ಪ್ಲಾಸ್ಟಿಕ್ ಬಳಕೆ ದೈನಂದಿನ ಜೀವನದಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎಂಬುದನ್ನು ವರ್ತಕರೊಬ್ಬರು ಹೀಗೆ ತೆರೆದಿಟ್ಟರು.

‘ನಮ್ಮ ಅಂಗಡಿಯಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಕದ್ದುಮುಚ್ಚಿಇಟ್ಟುಕೊಂಡಿದ್ದೇವೆ. ಅದನ್ನು ಗ್ರಾಹಕರ ಕೈಗೆ ದಾಟಿಸಿದ ಬಳಿಕ ನಮಗದು ಸಂಬಂಧವಿಲ್ಲ. ಗೊತ್ತಾದರೆ ನಮ್ಮ ಮೇಲೆ ನಗರಸಭೆಯ ಅಧಿಕಾರಿಗಳು ದಾಳಿ ಮಾಡಬಹುದು. ಹಾಗಾಗಿ ನಮ್ಮ ಹೆಸರನ್ನು ಬರೆಯಲೇಬಾರದು’ ಎಂಬ ಆಗ್ರಹವನ್ನೂ ಅವರು ಮುಂದಿಟ್ಟರು.

ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿದೆ. ಆದರೆ, ಅದರಕಟ್ಟುನಿಟ್ಟಿನ ಅನುಷ್ಠಾನ ಕೇವಲ ದಾಖಲೆಗಳಲ್ಲಿವೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಮಾರುಕಟ್ಟೆಯಲ್ಲಿ, ದಿನಸಿ, ಹಣ್ಣಿನ ಅಂಗಡಿಗಳಲ್ಲಿ, ಹಾಲು ಮಾರಾಟಗಾರರು ತೆರೆಮರೆಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದಾರೆ.

‘ಅಕ್ಕಿ, ಬೇಳೆ ಕಾಳು, ಮೀನು ಮುಂತಾದ ಆಹಾರ ಸಾಮಗ್ರಿಯನ್ನು ಪ್ಲಾಸ್ಟಿಕ್‌ಚೀಲದಲ್ಲಿ ಸಾಗಿಸಿದಷ್ಟು ಸುಲಭವಾಗಿ ಬಟ್ಟೆ, ಪೇಪರ್ ಚೀಲಗಳಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಪೇಪರ್ ಲಕೋಟೆ ಬೇಗ ಹರಿದುಹೋಗುತ್ತದೆ. ಸೂಪರ್ ಮಾರ್ಕೆಟ್‌ನಲ್ಲಿ ಬಟ್ಟೆಚೀಲ ದುಬಾರಿಯಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ಚೀಲವೇ ಅನುಕೂಲಕರ’ ಎನ್ನುವುದು ನಗರದ ಕೋಡಿಬಾಗ ನಿವಾಸಿ, ಗೃಹಿಣಿ ರಾಜೇಶ್ವರಿ ಅವರ ಅನಿಸಿಕೆ.

ನಗರದ ಕಡಲತೀರದಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು ರಾಶಿರಾಶಿ ಬಂದು ಬೀಳುತ್ತವೆ. ಈಚೆಗೆ ಆಯೋಜಿಸಲಾಗಿದ್ದ ಕಡಲತೀರ ಸ್ವಚ್ಛತಾ ಅಭಿಯಾನದಲ್ಲಿ ನಾಲ್ಕು ಟನ್‌ಗೂ ಅಧಿಕ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವು ಮಾಡಲಾಗಿತ್ತು. ಇದೇರೀತಿ, ನಗರದ ಯಾವುದೇ ಬಡಾವಣೆಗಳಿಗೆ ಹೋದರೂ ಪ್ಲಾಸ್ಟಿಕ್ ಉತ್ಪನ್ನಗಳ ಅವಶೇಷಗಳು ಕಂಡುಬರುತ್ತವೆ. ಅಷ್ಟರ ಮಟ್ಟಿಗೆ ನಿತ್ಯಜೀವನದಲ್ಲಿ ಪ್ಲಾಸ್ಟಿಕ್ ಹಾಸುಹೊಕ್ಕಾಗಿದೆ.

ನಿರಂತರ ದಾಳಿ:‘ಸಾರ್ವಜನಿಕರು ಪ್ಲಾಸ್ಟಿಕ್ ಉತ್ಪನ್ನಗಳನ್ನು ಕಡಿಮೆ ಬಳಕೆ ಮಾಡುವಂತೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಅಂಗಡಿಗಳಿಂದವಶಪಡಿಸಿಕೊಂಡ ನಿಷೇಧಿತ ಪ್ಲಾಸ್ಟಿಕ್‌ ಅನ್ನುನಗರಸಭೆಯ ಗೋದಾಮಿನಲ್ಲಿ ತುಂಬಿಡಲಾಗಿದೆ. ಈ ರೀತಿಯ ದಾಳಿಗಳು, ಜಾಗೃತಿ ಕಾರ್ಯಕ್ರಮಗಳು ಸದಾ ಜಾರಿಯಲ್ಲಿರುತ್ತವೆ’ ಎನ್ನುತ್ತಾರೆ ನಗರಸಭೆಯ ಪರಿಸರ ಅಧಿಕಾರಿ ಮಲ್ಲಿಕಾರ್ಜುನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT