ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿ ಮಾಡಿದ ರೈತರು 9 ಮಂದಿ !

ಕನಿಷ್ಠ ಬೆಂಬಲ ಬೆಲೆಯಡಿ ಭತ್ತ ಖರೀದಿ ಯೋಜನೆ; ಗಿರಣಿ ಮಾಲೀಕರ ನಿರಾಸಕ್ತಿ
Last Updated 16 ಜನವರಿ 2020, 19:30 IST
ಅಕ್ಷರ ಗಾತ್ರ

ಶಿರಸಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಆರಂಭವಾಗಿರುವ ಮೂರು ಖರೀದಿ ನೋಂದಣಿ ಕೇಂದ್ರಗಳಲ್ಲಿ 15 ದಿನಗಳಲ್ಲಿ ಒಟ್ಟು ಒಂಬತ್ತು ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ !

ಬೆಂಬಲ ಬೆಲೆಯಡಿ ರೈತರ ನೋಂದಣಿ ಪ್ರಕ್ರಿಯೆ ಕಳೆದ ವರ್ಷ ಕೃಷಿ ಇಲಾಖೆಯ ವ್ಯಾಪ್ತಿಯಲ್ಲಿತ್ತು. ಈ ವರ್ಷ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಇದರ ಹೊಣೆ ನೀಡಲಾಗಿದೆ. ಶಿರಸಿಯಲ್ಲಿ ಕೆಎಫ್‌ಸಿಎಸ್‌ಸಿ ಪಡಿತರ ಸಗಟು ಕೇಂದ್ರ, ಕುಮಟಾ ಹಾಗೂ ಮುಂಡಗೋಡಿನಲ್ಲಿ ಎಪಿಎಂಸಿ ಮಳಿಗೆಗಳಲ್ಲಿ ರೈತರ ನೋಂದಣಿ ಪ್ರಕ್ರಿಯೆ ಜನೆವರಿ 1ರಿಂದ ಆರಂಭವಾಗಿದೆ. ಶಿರಸಿಯಲ್ಲಿ ಈವರೆಗೆ ಆರು ರೈತರು ನೋಂದಣಿ ಮಾಡಿಸಿದ್ದರೆ, ಮುಂಡಗೋಡಿನಲ್ಲಿ ಮೂವರು ರೈತರು ನೋಂದಣಿ ಮಾಡಿದ್ದಾರೆ. ಕುಮಟಾದಲ್ಲಿ ಒಬ್ಬ ರೈತನೂ ಈ ಕೇಂದ್ರದತ್ತ ಮುಖ ಮಾಡಿಲ್ಲ.

ಏನಿದು ಬೆಂಬಲ ಬೆಲೆ ?: ಕೆಎಫ್‌ಸಿಎಸ್‌ಸಿಯಲ್ಲಿ ನೋಂದಣಿ ಮಾಡಿಸಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಬೆಂಬಲ ಬೆಲೆಯಡಿ ಭತ್ತ ಮಾರಾಟ ಮಾಡಬಹುದು. ನೋಂದಣಿಗೆ ರೈತರು ಕಡ್ಡಾಯವಾಗಿ ಕೃಷಿ ಇಲಾಖೆಯಿಂದ ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯ ಗುರುತಿನ ಸಂಖ್ಯೆ ತರಬೇಕು. ಪ್ರತಿ ರೈತ ಎಕರೆಗೆ 16 ಕ್ವಿಂಟಲ್‌ನಂತೆ ಗರಿಷ್ಠ 40 ಕ್ವಿಂಟಲ್‌ ಮಾತ್ರ ಮಾರಾಟ ಮಾಡಲು ಅವಕಾಶವಿದೆ.

ಮಾಲೀಕರಿಗೆ ಭಾರ: ಕಳೆದ ವರ್ಷದಿಂದ ಭತ್ತ ಖರೀದಿಯನ್ನು ನೋಂದಣಿ ಮಾಡಿಸಿದ ಅಕ್ಕಿ ಗಿರಣಿ ಮಾಲೀಕರೇ ನೇರವಾಗಿ ಖರೀದಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಗಿರಣಿ ಮಾಲೀಕರು ಭತ್ತ ಖರೀದಿಗೆ ನಿರಾಸಕ್ತಿ ತೋರುತ್ತಿದ್ದಾರೆ. ‘ಸರ್ಕಾರದ ನಿಯಮದಂತೆ ಒಂದು ಕ್ವಿಂಟಲ್ ಭತ್ತಕ್ಕೆ 67 ಕೆ.ಜಿ ಅಕ್ಕಿಯನ್ನು ನಾವು ಕೊಡಬೇಕು. ಈ ಭಾಗದ ಭತ್ತದಿಂದ ಕ್ವಿಂಟಲ್‌ವೊಂದಕ್ಕೆ ಸರಾಸರಿ 63ರಿಂದ 64 ಕೆ.ಜಿ ಅಕ್ಕಿ ಸಿಗುತ್ತದೆ. ಅಲ್ಲದೇ, ಈ ಯೋಜನೆಯಡಿ ಭತ್ತ ಖರೀದಿಸುವ ಗಿರಣಿ ಮಾಲೀಕನು, ಉತ್ಪನ್ನ ಖರೀದಿ ಪ್ರಮಾಣ ಆಧರಿಸಿ ಬ್ಯಾಂಕ್‌ ಠೇವಣಿ ಇಡಬೇಕು. ಇದರಿಂದ ಗಿರಣಿ ಮಾಲೀಕರಿಗೆ ನಷ್ಟವೇ ಹೆಚ್ಚು’ ಎನ್ನುತ್ತಾರೆ ನೋಂದಣಿ ಮಾಡಿರುವ ಬನವಾಸಿ ಗಿರಣಿ ಮಾಲೀಕ ಶಫಿ ಶೇಖ್.

‘ಆಸ್ತಿಯನ್ನು ಭದ್ರತೆಯಾಗಿಟ್ಟು ಭತ್ತ ಖರೀದಿಸುವುದಾದರೆ, ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತೇನೆ. ಠೇವಣಿ ಇಡುವುದಾದಲ್ಲಿ, ನಾವು ಮಾರುಕಟ್ಟೆಯಲ್ಲಿ ಕ್ವಿಂಟಲ್‌ವೊಂದಕ್ಕೆ ಸರಾಸರಿ ₹ 1300 ದರದಲ್ಲಿ ಭತ್ತ ಖರೀದಿಸಿ, ಅಕ್ಕಿ ಮಾರಾಟ ಮಾಡುವುದೇ ಉತ್ತಮ. ಠೇವಣಿಯಿಟ್ಟು ಖರೀದಿಸು ಅನಿವಾರ್ಯತೆ ನಮಗೆ ಇಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

ರೈತರ ಸಮಸ್ಯೆ ಏನು ?: ಬೆಂಬಲ ಬೆಲೆಯಡಿ ಮಾರಾಟ ಮಾಡಲು ಇಲಾಖೆ ನಿಗದಿಪಡಿಸಿದ ದಿನಾಂಕಕ್ಕೆ ಕಾಯಬೇಕು. ಒಂದೊಮ್ಮೆ ಖರೀದಿಗೆ ಗಿರಣಿ ಮಾಲೀಕರು ಮುಂದಾಗದಿದ್ದಲ್ಲಿ ಮತ್ತೆ ವ್ಯಾಪಾರಸ್ಥರನ್ನು ಹುಡುಕಬೇಕಾಗುತ್ತದೆ. ಕಳೆದ ವರ್ಷ ಗಿರಣಿ ಮಾಲೀಕರು ಮುಂದೆ ಬರದ ಕಾರಣಕ್ಕೆ ಖರೀದಿಯೇ ನಡೆಯಲಿಲ್ಲ ಎನ್ನುತ್ತಾರೆ ರೈತ ತೆರಕನಳ್ಳಿಯ ಚಂದ್ರಶೇಖರ ನಾಯ್ಕ.

‘ಮೂರು ತಾಲ್ಲೂಕುಗಳಲ್ಲೂ ತಲಾ ಒಬ್ಬರು ಗಿರಣಿ ಮಾಲೀಕರನ್ನು ಭತ್ತ ಖರೀದಿಗೆ ಒಪ್ಪಿಸಲಾಗಿದೆ. ನಾವು ಭತ್ತ ಸಂಗ್ರಹ ಮಾಡುವಂತಿಲ್ಲ. ಗಿರಣಿ ಮಾಲೀಕರು ಭತ್ತ ಖರೀದಿಸಿದರೆ, ಸರ್ಕಾರ ರೈತರ ಖಾತೆಗೆ ಹಣ ಜಮಾ ಮಾಡುತ್ತದೆ. ಈಗಾಗಲೇ ಹೆಸರು ನೋಂದಾಯಿಸಿರುವವರಿಗೆ ಮಾರಾಟಕ್ಕೆ ದಿನಾಂಕ ನೀಡಲಾಗಿದೆ’ ಎಂದು ಕೆಎಫ್‌ಸಿಎಸ್‌ಸಿ ಉಪನಿರ್ದೇಶಕ ಪುಟ್ಟಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT