ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ತೆರವಿಗೆ ಬಂದರು ಇಲಾಖೆ ಎಚ್ಚರಿಕೆ

ಅಂಕೋಲಾದ ಗಾಬಿತವಾಡ: ತಡೆಗೋಡೆ ನಿರ್ಮಾಣದಲ್ಲಿ ಮತ್ತೆ ಭಿನ್ನಮತ
Last Updated 11 ಜೂನ್ 2021, 14:28 IST
ಅಕ್ಷರ ಗಾತ್ರ

ಅಂಕೋಲಾ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ತಾಲ್ಲೂಕಿನ ಹಾರವಾಡ ಗ್ರಾಮ ಪಂಚಾಯಿತಿಯ ಗಾಬಿತವಾಡ ಸಮುದ್ರ ತಡೆಗೋಡೆ ನಿರ್ಮಾಣ ವಿಷಯದಲ್ಲಿ ಮತ್ತೆ ಭಿನ್ನಮತ ವ್ಯಕ್ತವಾಗಿದೆ.

ಗಾಬಿತವಾಡದ ಕೆಲವು ಸ್ಥಳೀಯರು ಬುಧವಾರ ಗ್ರಾಮ ಪಂಚಾಯಿತಿ ಸದಸ್ಯೆ ದಿವ್ಯಾ ತಾರಿ ನೇತೃತ್ವದಲ್ಲಿ ತಡೆಗೋಡೆ ನಿರ್ಮಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಒತ್ತಾಯಿಸಿದ್ದರು. ಈ ವೇಳೆ ಕೆಲವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ್ದರು.

ಇದೇ ವಿಷಯವಾಗಿ ಶುಕ್ರವಾರ ಕೆಲವು ಸ್ಥಳೀಯರು ತಡೆಗೋಡೆ ನಿರ್ಮಾಣ ಮಾಡದಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂತೋಷ ತಾವು ಟಾಕೇಕರ ನೇತೃತ್ವದಲ್ಲಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.

ತಡೆಗೋಡೆಯಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಅಡಚಣೆ ಆಗುತ್ತದೆ ಎನ್ನುವುದು ಒಂದು ಗುಂಪಿನ ವಾದ. ಮನೆಗಳಿಗೆ ನೀರು ನುಗ್ಗುವ ಆತಂಕವಿದ್ದು, ತಡೆಗೋಡೆ ನಿರ್ಮಿಸಬೇಕು ಎನ್ನುವುದು ಇನ್ನುಳಿದವರ ವಾದವಾಗಿದೆ. ಹಿಂದೆ ಸತೀಶ್ ಸೈಲ್ ಶಾಸಕರಾಗಿದ್ದ ಅವಧಿಯಲ್ಲಿ ಇದೇ ತಡೆಗೋಡೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಈಗ ತಡೆಗೋಡೆಗೆ ಬೆಂಬಲ ನೀಡುತ್ತಿರುವವರು ಹಿಂದೆ ವಿರೋಧ ವ್ಯಕ್ತಪಡಿಸಿದ್ದರು ಎಂಬ ಆರೋಪವಿದೆ.

ತಡೆಗೋಡೆ ನಿರ್ಮಾಣ ಸಂಬಂಧ ಭಿನ್ನಮತ ಭುಗಿಲೆದ್ದ ಬೆನ್ನಲ್ಲೇ ಬಂದರು ಇಲಾಖೆಯ ಅಧಿಕಾರಿಗಳು ಗಾಬಿತವಾಡದ ಮೀನುಗಾರರು ವಾಸವಾಗಿದ್ದ ಜಾಗ ಬಂದರು ಇಲಾಖೆಗೆ ಸೇರಿದೆ. ಮನೆ ತೆರವುಗೊಳಿಸಬೇಕು ಎಂದು ಶುಕ್ರವಾರ ಮುಂಜಾನೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

ಕಾರವಾರದಿಂದ ಭಟ್ಕಳದ ತುದಿಯವರೆಗೂ ಬಂದರು ಇಲಾಖೆಯ ಜಾಗದಲ್ಲಿ ಮೀನುಗಾರರು ಮನೆ ನಿರ್ಮಿಸಿಕೊಂಡಿದ್ದಾರೆ. ಉಳಿದಡೆ ಯಾವುದೇ ಕ್ರಮ ಕೈಗೊಳ್ಳದೇ ಇಲ್ಲಿ ಮನೆಗಳನ್ನು ತೆರವುಗೊಳಿಸುವುದು ಯಾವ ನ್ಯಾಯ ಎಂದು ಮೀನುಗಾರರು ಪ್ರಶ್ನಿಸಿದ್ದಾರೆ.

ಗೊಂದಲ ಮೂಡಿಸಿದ ಹೇಳಿಕೆ

‘ತಹಶೀಲ್ದಾರರು ಬಂದರು ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳಿಗೆ ಮತ್ತು ನಮ್ಮ ಕಚೇರಿಗೆ ಅಲ್ಲಿನ ಅತಿಕ್ರಮಣ ತೆರವುಗೊಳಿಸುವಂತೆ ಪತ್ರ ನೀಡಿದ್ದಾರೆ. ಅದರ ಅನ್ವಯ ಕ್ರಮ ಕೈಗೊಂಡಿದ್ದೇವೆ. ಮೇಲಧಿಕಾರಿಗಳ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದು ಬೇಲೆಕೇರಿ ಬಂದರು ಉಪ ಸಂರಕ್ಷಕ ಸಂದೀಪಕುಮಾರ ಶೆಟ್ಟಿ ಹೇಳಿದ್ದಾರೆ.

ತಹಶೀಲ್ದಾರ್ ಉದಯ ಕುಂಬಾರ ಪ್ರತಿಕ್ರಿಯಿಸಿ, ‘ಚಂಡಮಾರುತದಿಂದ ಉಂಟಾದ ಹಾನಿಗೆ ಸ್ಥಳೀಯರು ಪರಿಹಾರ ನೀಡುವಂತೆ ಒತ್ತಾಯಿಸಿದ್ದರು. ಬಂದರು ಇಲಾಖೆಯ ಜಾಗದಲ್ಲಿ ಮನೆ ಇರುವುದರಿಂದ ಪರಿಹಾರ ನೀಡಲು ಬರುವುದಿಲ್ಲ. ಹಾಗಾಗಿ ಸೂಕ್ತ ಮಾಹಿತಿ ನೀಡುವಂತೆ ಮಾತ್ರ ಪತ್ರ ಬರೆದಿದ್ದೇನೆಯೇ ಹೊರತು ತೆರವುಗೊಳಿಸುವಂತೆ ತಿಳಿಸುವುದು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT