ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದರು ವಿಸ್ತರಣೆ ಬಗ್ಗೆ ಚರ್ಚಿಸಿ ಮುಂದಿನ ಕ್ರಮ: ಸಚಿವ ಅಂಗಾರ

ಕಾರವಾರದಲ್ಲಿ ನಡೆದ ಸಭೆಯಲ್ಲಿ ಅಭಿಪ್ರಾಯ, ಆಕ್ಷೇಪ, ಸಲಹೆ ಮಂಡಿಸಿದ ಹಲವರು
Last Updated 12 ಮಾರ್ಚ್ 2022, 15:26 IST
ಅಕ್ಷರ ಗಾತ್ರ

ಕಾರವಾರ: ‘ಸಾಗರಮಾಲಾ ಯೋಜನೆಯಡಿ ಇಲ್ಲಿನ ವಾಣಿಜ್ಯ ಬಂದರಿನ ವಿಸ್ತರಣೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಮೀನುಗಾರರಿಗೆ ಸ್ವಾವಲಂಬಿ ಬದುಕು ಕೊಡುವ ನಿಟ್ಟಿನಲ್ಲಿ ಕೆಲಸವಾಗಲಿದೆ’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

ವಾಣಿಜ್ಯ ಬಂದರು ವಿಸ್ತರಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಮೀನುಗಾರರು, ನಾಗರಿಕರ ಸಭೆಯಲ್ಲಿ ಮಾತನಾಡಿದರು.

‘ಅಲಿಗದ್ದಾ, ರವೀಂದ್ರನಾಥ ಟ್ಯಾಗೋರ್ ಕಡಲತೀರ ಉಳಿಸುವ ಇಚ್ಛೆ ನನಗೂ ಇದೆ. ಸಭೆಯಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರು ನೀಡಿದ ಸಲಹೆಗಳನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ. ಈ ವಿಚಾರವು ನ್ಯಾಯಾಲಯದಲ್ಲಿ ಇರುವ ಕಾರಣ ಹೆಚ್ಚೇನೂ ಹೇಳಲಾಗದು’ ಎಂದರು.

ಇದಕ್ಕೂ ಮೊದಲು ಮಾತನಾಡಿದ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ‘ಸಾಗರಮಾಲಾ ಯೋಜನೆಯನ್ನು ನಾವೆಲ್ಲರೂ ವಿರೋಧಿಸುತ್ತೇವೆ ಎಂದು ಭಾವಿಸಬಾರದು. ಆದರೆ, ಯೋಜನೆಯನ್ನು ಬದಲಿಸಬೇಕು. ಬಂದರು ವಿಸ್ತರಣೆಯಿಂದ ಅಲಿಗದ್ದಾದಲ್ಲಿ ಸಾಂಪ್ರದಾಯಿಕ ಮೀನುಗಾರರಿಗೆ, ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಲಿದೆ. ಈಗಾಗಲೇ ಅಳವಡಿಸಲಾಗಿರುವ ಅಲೆ ತಡೆಗೋಡೆಯಿಂದ ಕಡಲತೀರ ಕೊರೆತ ಆಗುತ್ತಿದೆ. ಹಾಗಾಗಿ ಈಗಿರುವ ಸ್ಥಿತಿಯಲ್ಲೇ ಬಂದರು ಅಭಿವೃದ್ಧಿಗೊಳಿಸಿ’ ಎಂದು ಒತ್ತಾಯಿಸಿದರು.

‘ಹೊನ್ನಾವರ, ಬೇಲೆಕೇರಿಯಲ್ಲಿ ಬಂದರು ನಿರ್ಮಾಣವಾಗುತ್ತಿದೆ. ಕಾರವಾರ ಬಂದರಿನಲ್ಲಿ ಸಾಮರ್ಥ್ಯಕ್ಕೆ ಸರಿಯಾಗಿ ಆದಾಯ ಬರುತ್ತಿಲ್ಲ. ಇಲ್ಲಿಯ ಬದಲು ಬೇಲೆಕೇರಿ ಬಂದರಿನ ಅಭಿವೃದ್ಧಿಗೆ ಹಣ ವಿನಿಯೋಗಿಸಿ’ ಎಂದು ಸಲಹೆ ನೀಡಿದರು.

ವಿಜ್ಞಾನಿ ಡಾ.ವಿ.ಎನ್.ನಾಯ್ಕ ಮಾತನಾಡಿ, ‘ಅಲೆ ತಡೆಗೋಡೆ ನಿರ್ಮಿಸಿದ ಬಳಿಕ ದೇವಬಾಗದವರೆಗೂ ಕಡಲ್ಕೊರತವಾಗುತ್ತಿದೆ. ಈ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ಕಡಲತೀರದ ಮೊದಲ ಬಳಕೆದಾರರಾದ ಮೀನುಗಾರರು ಈಗಾಗಲೇ ಸೀಬರ್ಡ್ ಯೋಜನೆಗಾಗಿ 30 ಕಿಲೋಮೀಟರ್ ಕಡಲತೀರವನ್ನು ಬಿಟ್ಟಿದ್ದಾರೆ. ಈಗ ಅವರಿಗಾಗಿ ಒಂದು ಕಡಲತೀರವನ್ನು ಬಿಡಬಾರದೇ’ ಎಂದು ಪ್ರಶ್ನಿಸಿದರು.

ಬಂದರು ಇಲಾಖೆ ಉಪ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ ಮಾತನಾಡಿ, ‘ಬಂದರನ್ನು ಬಾವುಟಕಟ್ಟೆ ತನಕ ಮಾತ್ರ ವಿಸ್ತರಿಸಲಾಗುತ್ತದೆ. ಅಲೆ ತಡೆಗೋಡೆ ನಿರ್ಮಾಣದಿಂದ ಮಳೆಗಾಲವೂ ನೀರು ಶಾಂತವಾಗಿರುತ್ತದೆ. ಇದು ಹಡಗು ಬರಲು ಅಗತ್ಯವಾಗಿದೆ. ಅಲ್ಲದೇ ಎರಡು ವರ್ಷಗಳಿಗೊಮ್ಮೆ ಹೂಳೆತ್ತಲು ಸರ್ಕಾರವು ವ್ಯಯಿಸುವ ₹ 20 ಕೋಟಿ ಉಳಿಯುತ್ತದೆ. ಇನ್ನು, ಬಂದರಿನ ಪೂರ್ಣ ಸಾಮರ್ಥ್ಯದಂತೆ ಕಾರ್ಯ ನಿರ್ವಹಿಸಲು ಜಟ್ಟಿಯ ಬಳಿ ಆಳ ಸಾಕಾಗುತ್ತಿಲ್ಲ’ ಎಂದು ಪ್ರತಿಪಾದಿಸಿದರು.

ಶಾಸಕಿ ಕೆಂಡಾಮಂಡಲ:

ಸಭೆಯಲ್ಲಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ‘ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆಗೆ 2017ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಿಗಲ್ಲು ಹಾಕಿದರು. ಆಗ ಎಲ್ಲಿ ಹೋಗಿದ್ರಿ ನೀವೆಲ್ಲ? ಆಗ ಸುಮ್ಮನಿದ್ದ, ಬೆಂಬಲ ಕೊಟ್ಟ ಹಲವು ಮುಖಂಡರು ಈ ಸಭೆಯಲ್ಲಿದ್ದೀರಿ. ಆಗ ಯಾಕೆ ವಿರೋಧ ಮಾಡಲಿಲ್ಲ’ ಎಂದು ಆಕ್ರೋಶದಿಂದ ಪ್ರಶ್ನಿಸಿದರು.

‘ಆಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು? ನಂತರ 2020ರಲ್ಲಿ ಬಂದರು ವಿಸ್ತರಣೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ನನ್ನ ಭಾವಚಿತ್ರಕ್ಕೆ ಚಪ್ಪಲಿಹಾರ ಹಾಕಿ ಅವಮಾನ ಮಾಡಿದ್ರು. ನೀವು ಮೊದಲು ಒಗ್ಗಟ್ಟಾಗಿ, ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗಿ. ನಮ್ಮ ಮೀನುಗಾರರಿಗೆ ಅನ್ಯಾಯ ಆಗಬಾರದು, ಮಾನವೀಯ ನೆಲೆಯಲ್ಲಿ ಕೆಲಸವಾಗಬೇಕು ಎಂಬುದು ನನ್ನ ಆಶಯವಾಗಿದೆ’ ಎಂದರು.

ವಕೀಲ ಪ್ರೀತಂ ಮಾಸೂರ್ಕರ್, ಮುಖಂಡರಾದ ವಿಕಾಸ ತಾಂಡೇಲ, ರಾಜು ತಾಂಡೇಲ, ಗಣಪತಿ ಮಾಂಗ್ರೆ ಸೇರಿದಂತೆ ಹಲವರು ಅಭಿಪ್ರಾಯ ಮಂಡಿಸಿದರು.

ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ವೇದಿಕೆಯಲ್ಲಿದ್ದರು.

****

* ನಮ್ಮವರಿಗೆ ಬೇಡದ ಯೋಜನೆ ನನಗೆ ಬೇಕಾ? ಬಾವುಟಕಟ್ಟೆಗಿಂತ ಮುಂದೆಯೂ ಬಂದರನ್ನು ವಿಸ್ತರಿಸುವ ಯೋಜನೆ ಇದ್ದರೆ ಇಲ್ಲಿಂದಲೇ ರದ್ದು ಮಾಡಿ.

- ರೂಪಾಲಿ ನಾಯ್ಕ, ಶಾಸಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT