ಕುಮಟಾ: ಪಾಳು ಜಮೀನಿನಲ್ಲಿ ಹಸಿರುಕ್ಕಿಸುವ ಕೃಷಿಕ

7
ಸ್ನಾತಕೋತ್ತರ ಪದವೀಧರನ ಕೃಷಿ ಆಸಕ್ತಿಗೆ ಜಮೀನು ಮಾಲೀಕರ ಪ್ರೋತ್ಸಾಹ

ಕುಮಟಾ: ಪಾಳು ಜಮೀನಿನಲ್ಲಿ ಹಸಿರುಕ್ಕಿಸುವ ಕೃಷಿಕ

Published:
Updated:
Deccan Herald

ಕುಮಟಾ: ತಮ್ಮ ಕೃಷಿ ಭೂಮಿ ಸಾಗುವಳಿ ಮಾಡದೇ ಪಾಳು ಬಿಡುವವರೇ ಈಗ ಹೆಚ್ಚಿದ್ದಾರೆ. ಅವರ ನಡುವೆ ಭೂ ರಹಿತ ಕೃಷಿ ಆಸಕ್ತ ಸ್ನಾತಕೋತ್ತರ ಪದವೀಧರರೊಬ್ಬರು ಊರಿನ ಕೃಷಿಕರ ಪಾಳು ಬಿದ್ದ ಭೂಮಿಯಲ್ಲಿ ಸಾಗುವಳಿ ಮಾಡಿ ಹಸಿರುಕ್ಕಿಸುತ್ತಿದ್ದಾರೆ.

ಪಟ್ಟಣದ ವಿವೇಕನಗರ ನಿವಾಸಿ ತಿಮ್ಮಪ್ಪ ಮುಕ್ರಿ ಈ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇವರು ಕನ್ನಡ ಮತ್ತು ಇತಿಹಾಸ ವಿಷಯದಲ್ಲಿ ಎಂ.ಎ ಹಾಗೂ ಬಿ.ಎಡ್ ಪದವಿ ಪಡೆದಿದ್ದಾರೆ. ಬೆಂಗಳೂರು ಹಾಗೂ ಕೆಲವೆಡೆ ಶಿಕ್ಷಕ ವೃತ್ತಿ ನಡೆಸಿ ಅದು ಒಗ್ಗದಿದ್ದಾಗ ನೇರವಾಗಿ ಊರಿಗೆ ವಾಪಸಾದರು. ಕೃಷಿಯಲ್ಲಿ ತೊಡಗಿಸಿಕೊಳ್ಳುವ ಅತೀವ ಆಸಕ್ತಿಯಿಂದ ಅಷ್ಟಿಷ್ಟು ಸ್ವಂತ ಭೂಮಿಯಲ್ಲಿ ಸಾಗುವಳಿ ಮಾಡಿ ಉತ್ತಮ ಫಸಲು ತೆಗೆದರು.

ಆಗ ಹೊಳೆದದ್ದೇ ಊರಿನಲ್ಲಿ ಪಾಳು ಬಿದ್ದ ಗದ್ದೆಗಳನ್ನು ಬಾಡಿಗೆ ಪಡೆದು ಸಾಗುವಳಿ ಮಾಡುವ ಹೊಸ ಯೋಚನೆ. ಅವರ ಆಸಕ್ತಿಗೆ ನೀರೆರೆದವರು ಹೆಗಡೆಯ ನಿವೃತ್ತ ಮುಖ್ಯ ಶಿಕ್ಷಕರೂ ಆಗಿರುವ ಕೃಷಿ ಆಸಕ್ತ ಡಿ.ಎಂ.ಕಾಮತ್. ಅವರು ಸಾಗುವಳಿ ಮಾಡಲಾಗದ ತಮ್ಮ ಗದ್ದೆಯನ್ನೇ ತಿಮ್ಮಪ್ಪ ಅವರಿಗೆ ಬೇಸಾಯ ಮಾಡಲು ನೀಡಿದರು. ಇದಕ್ಕೆ ಅವರು ಪ್ರತಿಫಲಾಪೇಕ್ಷೆ ಮಾಡಲಿಲ್ಲ. 

ಇದೇ ರೀತಿ, ವಿವೇಕಗನರದ ಸೀತಾಬಾಯಿ ಹೆಬ್ಬಾರ ಹಾಗೂ ಗಣಪತಿ ಹೆಬ್ಬಾರ ಅವರೂ ತಮ್ಮ ಗದ್ದೆಯನ್ನು ಸಾಗುವಳಿ ಮಾಡಲು ನೀಡಿದ್ದಾರೆ. ಎರಡು ವರ್ಷಗಳಿಂದ ಮೂವರಿಂದ ಪಡೆದ ಸುಮಾರು ನಾಲ್ಕು ಎಕರೆ ಭೂಮಿಯಲ್ಲಿ ಭತ್ತ ಬೆಳೆಯುತ್ತಿದ್ದಾರೆ.

ತಿಮ್ಮಪ್ಪ ಈ ವರ್ಷ ಜಯಾ ಹಾಗೂ ಹಳಗ ಭತ್ತದ ತಳಿಯನ್ನು ಸಾಲು ನಾಟಿ ಹಾಗೂ ಯಂತ್ರ ನಾಟಿ ಮೂಲಕ ಬೆಳೆಸಿದ್ದಾರೆ. ಬೇಸಾಯದ ಮೇಲೆ ಅವರಿಗಿರುವ ಪ್ರೀತಿಯನ್ನು ಕಂಡು ಮೂವರೂ ಒಂದು ರೂಪಾಯಿಯನ್ನೂ ಬಾಡಿಗೆ ಪಡೆದುಕೊಂಡಿಲ್ಲವಂತೆ. ಕೇವಲ ಭತ್ತದ ಹುಲ್ಲು ನೀಡಿದರೆ ಸಾಕು ಎಂದು ಹೇಳಿ ಬೆನ್ನುತಟ್ಟಿದ್ದಾರೆ.

‘ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾಗ ಆರೋಗ್ಯ ಏರು ಪೇರಾಗುತ್ತಿತ್ತು. ಊರಿಗೆ ಬಂದು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಉತ್ಸಾಹ ಮೂಡಿತು. ಗಿಡಗಂಟಿ ಬೆಳೆದ ಗದ್ದೆಯನ್ನು ಶುಚಿಗೊಳಿಸಿ ಮಣ್ಣು ಹದ ಮಾಡಲು ಮೊದಲು ಕಷ್ಟವಾಯಿತು. ಸಾಗುವಳಿ ಮಾಡುವಾಗ ತೀರಾ ಅಗತ್ಯವಿದ್ದರೆ ಮಾತ್ರ ಕೂಲಿಯಾಳುಗಳನ್ನು ಬಳಕೆ ಮಾಡುತ್ತೇನೆ. ಉಳಿದೆಲ್ಲ ಕೆಲಸಗಳನ್ನೂ ನಾನೊಬ್ಬನೇ ನಿಭಾಯಿಸುತ್ತೇನೆ’ ಎಂದು ಅವರು ತಮ್ಮ ಕಾರ್ಯ ವೈಖರಿ ವಿವರಸಿದರು.

ಎಂ.ಬಿ.ಎ ಓದಿ ಕೊಂಕಣ ರೈಲ್ವೇಯಲ್ಲಿ ಉದ್ಯೋಗಿಯಾಗಿರುವ ತಮ್ಮ ಚಂದ್ರಕಾಂತ ಮುಕ್ರಿ, ಊರಿನಲ್ಲೇ ಇರುವ ಇನ್ನೊಬ್ಬ ತಮ್ಮ ಗಣೇಶ ಮುಕ್ರಿ ಪ್ರತಿ ವರ್ಷ ಸಾಗುವಳಿ ಸಂದರ್ಭದಲ್ಲಿ ನೆರವಿಗೆ ಬರುವುದು ಮತ್ತೊಂದು ಗಮನಾರ್ಹ ಸಂಗತಿ.

ತಿಮ್ಮಪ್ಪ ಅವರ ಕೃಷಿ ಸಾಗುವಳಿ ಆಸಕ್ತಿಗೆ ಕೃಷಿ ಇಲಾಖೆ ಮುಂದೆ ಬಂದು ಎಲ್ಲ ರೀತಿಯ ನೆರವು ನೀಡಿದೆ. ಇಲಾಖೆಯ ಸಹಾಯಧನ ಬಳಸಿ ತಿಮ್ಮಪ್ಪ ಅವರು ಒಂದು ಪವರ್ ಟಿಲ್ಲರ್ ಖರೀಸಿದ್ದಾರೆ. ಕಳೆ ಕೀಳುವ ಯಂತ್ರವನ್ನು ಕೊಂಚ ಬದಲಾಯಿಸಿ ಕಟಾವು ಯಂತ್ರವಾಗಿ ಪರಿವರ್ತನೆ ಮಾಡುವ ವಿಧಾನವನ್ನೂ ಅವರು ಕಂಡುಕೊಂಡಿದ್ದಾರೆ. ಅವರ ಕೃಷಿ ಚಟುವಟಿಕೆಯ ಪ್ರಾತ್ಯಕ್ಷಿಕೆಯ ವಿಡಿಯೊವನ್ನು ಕೃಷಿ ಇಲಾಖೆ ಅಧಿಕಾರಿಗಳು ದೆಹಲಿಯ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಕಚೇರಿಗೆ ಕಳಿಸಿ ಅಲ್ಲಿಂದ ದೊರೆಯುವ ಸೌಲಭ್ಯ ಕೂಡ ದೊರೆಯುವಂತೆ ಮಾಡಿದ್ದಾರೆ.

‘ಮಾದರಿ ಕಾರ್ಯ’

‘ತಿಮ್ಮಪ್ಪ ಮುಕ್ರಿ ಅವರು ಶ್ರಮ ವಹಿಸಿ ಕೆಲಸ ಮಾಡುವ ರೀತಿ ಇನ್ನೊಬ್ಬರಿಗೆ ಮಾದರಿಯಾಗಿದೆ. ಅವರನ್ನು ಅನುಸರಿಸಿ ಬೇರೆ ಒಂದಿಬ್ಬರು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ತಿಮ್ಮಪ್ಪ ಅವರು ಹಿಂಗಾರು ಬೆಳೆಯಾಗಿ ಬೆಳೆದ ಉದ್ದು, ಅಲಸಂದೆ, ಹೆಸರುಕಾಳು ಲಾಭದಾಯಕವಾಗಿದೆ’ ಎನ್ನುತ್ತಾರೆ  ಕೃಷಿ ಸಹಾಯಕ ನಿರ್ದೇಶಕ ಶಂಕರ ಹಗಡೆ.

ತಮ್ಮ ಜಮೀನು ಸಾಗುವಳಿ ಮಾಡಲಾಗದಿದ್ದವರು ಹೀಗೆ ಬೇರೆಯವರ ಸಹಾಯ ಪಡೆದು ಸಾಗುವಳಿ ನಡೆಸಿದರೆ ಭವಿಷ್ಯದಲ್ಲಿ ಆಹಾರ ಕೊರತೆ ನೀಗಬಹುದು ಎನ್ನುವುದು ಅವರ ಅನಿಸಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !