ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಬಿಗೆ ನಲುಗಿದ ಕುಕ್ಕುಟೋದ್ಯಮ

ಲಾಕ್‌ಡೌನ್ ಪರಿಣಾಮ; ಕೋಳಿ ಸಮಾಧಿ ಮಾಡಲು ಯೋಚಿಸುತ್ತಿರುವ ಸಾಕಣೆದಾರರು
Last Updated 2 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಶಿರಸಿ: ಲಾಕ್‌ಡೌನ್ ಪರಿಣಾಮ ಹಾಗೂ ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ದಲ್ಲಾಳಿಗಳ ಲಾಬಿಗೆ ಕುಕ್ಕುಟೋದ್ಯಮ ನಲುಗಿದೆ. ತಾಲ್ಲೂಕಿನ ಬಂಡಲ ಸುತ್ತಮುತ್ತಲಿನ ಫಾರ್ಮ್‌ಗಳಲ್ಲಿ ಒಂದು ಲಕ್ಷ ಬ್ರಾಯ್ಲರ್ ಕೋಳಿಗಳು ಸಮಾಧಿ ಸೇರುವ ಹಂತದಲ್ಲಿವೆ.

ಕೋಳಿ ಸಾಕಣೆಗೆ ಪೂರಕ ಹವಾಮಾನವಿರುವ ಬಂಡಲದಲ್ಲಿ ಹಲವಾರು ಕೋಳಿ ಫಾರ್ಮ್‌ಗಳಿವೆ. ಇಲ್ಲಿನ ಕೋಳಿ ಸಾಕಣೆದಾರರು, ಕುಕ್ಕುಟ ಮಹಾಮಂಡಳದ ಅಡಿಯಲ್ಲಿ ಕೋಳಿ ಸಾಕಣೆ ಗ್ರಾಮೀಣ ಕೈಗಾರಿಕಾ ಮತ್ತು ಮಾರಾಟ ಸಹಕಾರಿ ಸಂಘವನ್ನು ರಚಿಸಿಕೊಂಡು, ಇದರ ಅಡಿಯಲ್ಲಿ ಕುಕ್ಕುಟೋದ್ಯಮ ನಡೆಸುತ್ತಿದ್ದಾರೆ. ಮಹಾಮಂಡಳ ವೈಜ್ಞಾನಿಕವಾಗಿ ನಿಗದಿಪಡಿಸುವ ದರಕ್ಕೆ ಸರಿಯಾಗಿ ಕೋಳಿ, ಮೊಟ್ಟೆಗಳ ಮಾರಾಟ ಇಲ್ಲಿ ನಡೆಯುತ್ತದೆ.

ಆದರೆ, ಕೊರೊನಾ ವೈರಸ್ ಸೋಂಕಿನ ಭಯವನ್ನೇ ಬಂಡವಾಳ ಮಾಡಿಕೊಂಡು ಮಧ್ಯವರ್ತಿಗಳು, ಮಹಾಮಂಡಳದ ದರಪಟ್ಟಿ ನಿಯಮವನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ದರಕ್ಕೆ ಬ್ರಾಯ್ಲರ್ ಕೋಳಿ ಖರೀದಿಸಿದ್ದಾರೆ. ‘ಕೆ.ಜಿ.ಯೊಂದಕ್ಕೆ ₹ 75–80 ಇದ್ದ ದರವನ್ನು ₹ 6ರಿಂದ 8ಕ್ಕೆ ಇಳಿಸಿಕೊಂಡು ಸಾಕಣೆದಾರರಿಂದ ಖರೀದಿಸಿದ್ದಾರೆ. ಮೊದಲೇ ನಷ್ಟದಲ್ಲಿರುವ ನಾವು, ಈಗ ಮಾರಾಟವೇ ಇಲ್ಲದೇ ಕಂಗಾಲಾಗಿದ್ದೇವೆ’ ಎನ್ನುತ್ತಾರೆ ಸಾಕಣೆದಾರರು.

’ಬ್ರಾಯ್ಲರ್ ಕೋಳಿಗಳು 45 ದಿನ ಬೆಳವಣಿಗೆಯಾಗಿ, ಸಾಮಾನ್ಯವಾಗಿ 2.2ರಿಂದ 2.5 ಕೆ.ಜಿ ತೂಕಕ್ಕೆ ಬಂದ ಮೇಲೆ ಮಾರಾಟ ಮಾಡುತ್ತೇವೆ. ಲಾಕ್‌ಡೌನ್‌ ಘೋಷಣೆಗಿಂತ ಮೊದಲು ಸಾಕಣೆ ಮಾಡಿರುವ ಬಾಯ್ಲರ್ ಕೋಳಿಗಳಿಗೆ ಈಗ 60 ದಿನಗಳಾಗಿವೆ. ಬಹುತೇಕ ಎಲ್ಲವೂ 4 ಕೆ.ಜಿ.ಯಷ್ಟು ತೂಕ್ಕೆ ಬೆಳೆದಿವೆ. ಅವುಗಳಿಗೆ ಆಹಾರ ಹಾಕುವುದು ಭಾರವಾಗಿದೆ. ಅಲ್ಲದೇ ಇವು ಇನ್ನು ಸಾಯಲಾರಂಭಿಸುತ್ತವೆ. ಈ ಭಾಗದಲ್ಲಿ ಈ ಹಂತದಲ್ಲಿ ಬೆಳೆದ ಕನಿಷ್ಠ 1 ಲಕ್ಷ ಕೋಳಿಗಳು ಇವೆ. ಮಾರಾಟ ವ್ಯವಸ್ಥೆ ಇಲ್ಲದಿದ್ದರೆ, ನಮಗೆ ಉಳಿದಿರುವುದು, ಈ ಆರೋಗ್ಯವಂತ ಕೋಳಿಗಳನ್ನು ಹೊಂಡೆ ತೆಗೆದು ಹುಗಿಯುವುದೊಂದೇ ಮಾರ್ಗ’ ಎನ್ನುತ್ತಾರೆ ಕೋಳಿ ಸಾಕಣೆ ಗ್ರಾಮೀಣ ಕೈಗಾರಿಕಾ ಮತ್ತು ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಗೌಡರ್.

‘1000 ಕೋಳಿ ಸಾಕಣೆಗೆ ಕನಿಷ್ಠ 2 ಲಕ್ಷ ವೆಚ್ಚವಾಗುತ್ತದೆ. ಸಾಕಣೆದಾರರಿಗೆ ಇವುಗಳ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ಒಂದಿಷ್ಟು ಕೋಳಿಗಳಾದರೂ ಮಾರಾಟವಾದರೆ, ಬೆಳೆಗಾರರು ಉಳಿದುಕೊಳ್ಳುತ್ತಾರೆ. ಲಾಕ್‌ಡೌನ್‌ ಮಾಡಿರುವ, ಕೊರೊನಾ ವೈರಸ್ ಗಂಭೀರತೆಯ ಬಗ್ಗೆ ನಮಗೆ ಅರಿವಿದೆ. ಆದರೆ, ಕೆಲವಷ್ಟನ್ನಾದರೂ ಅಂಗಡಿಗಳಿಗೆ ಕೊಟ್ಟು, ಅವರ ಮೂಲಕ ಗ್ರಾಹಕರಿಗೆ ತಲುಪಿಸಿದರೆ, ಸಾಕಣೆದಾರರ ದೊಡ್ಡ ನಷ್ಟದಿಂದ ಬಚಾವಾಗುತ್ತಾನೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT