ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರ ಆರೋಗ್ಯ ತಪಾಸಣೆ, ಸನ್ಮಾನ

ಕುಟುಂಬಸ್ಥರೊಡನೆ ಖುಷಿಯಲ್ಲಿ ಕಾಲ ಕಳೆದ ನಗರದ ಸ್ವಚ್ಛತಾ ಸಿಪಾಯಿಗಳು
Last Updated 23 ಸೆಪ್ಟೆಂಬರ್ 2019, 10:46 IST
ಅಕ್ಷರ ಗಾತ್ರ

ಶಿರಸಿ: ನಗರ ಸ್ವಚ್ಛವಾಗಿಡುವಲ್ಲಿ ಶ್ರಮಿಸುವ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ, ಮಕ್ಕಳಿಗೆ ಸನ್ಮಾನ, ಸಾಧಕರಿಗೆ ಗೌರವ ಸಲ್ಲಿಸುವ ಮೂಲಕ ಪೌರ ಕಾರ್ಮಿಕರ ದಿನಾಚರಣೆಯನ್ನು ಸೋಮವಾರ ಇಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪ್ರಾಮಾಣಿಕ ಹಾಗೂ ಪರಿಶ್ರಮದಿಂದ ಕೆಲಸ ಮಾಡಿದ ಪೌರ ಕಾರ್ಮಿಕರಾದ ದಯಾನಂದ ಹರಿಜನ, ಅನಿಲ್ ಹರಿಜನ, ಶಿವಾನಂದ ಚನ್ನಯ್ಯ, ಸುಶೀಲಾ ಹರಿಜನ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕವಾಗಿ ಸಾಧನೆ ಮಾಡಿದ ಪೌರ ಕಾರ್ಮಿಕರ ಮಕ್ಕಳನ್ನು ಪುರಸ್ಕರಿಸಲಾಯಿತು. ವಿಶೇಷ ಭತ್ಯೆಯನ್ನು ವಿತರಿಸಲಾಯಿತು. ಪೌರಾಡಳಿತ ನಿರ್ದೇಶನಾಲಯದ ಸಾಧನಾ ಪ್ರಶಸ್ತಿ ಪಡೆದಿರುವ ಆರೋಗ್ಯ ನಿರೀಕ್ಷಕ ಆರ್.ಎಂ.ವೆರ್ಣೇಕರ್ ಅವರನ್ನು ಸನ್ಮಾನಿಸಲಾಯಿತು.

ಸಿಪಿಐ ಬಿ.ಗಿರೀಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೌರ ಕಾರ್ಮಿಕರು ತಮ್ಮ ಕಾಯಕದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಕೆಟ್ಟ ವ್ಯಸನದಿಂದ ದೂರವಿರಬೇಕು. ಸರ್ಕಾರದ ಸೌಲಭ್ಯ ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು. ಆಗ ಪರಿವರ್ತನೆ ತರಲು ಸಾಧ್ಯ ಎಂದು ಹೇಳಿದರು. ಸಮಾಜಕ್ಕಾಗಿ ದುಡಿಯುವ ಪೌರ ಕಾರ್ಮಿಕರು ಕೆಲಸದ ವೇಳೆ ಮರಣ ಹೊಂದಿದರೆ, ಗಂಭೀರ ಅಪಘಾತ, ಕಾಯಿಲೆಗಳಾದರೆ ಸರ್ಕಾರದಿಂದ ಹೆಚ್ಚಿನ ಧನ ಸಹಾಯ ಸಿಗುವಂತಾಗಲು ನಗರಸಭೆ ಪ್ರಸ್ತಾವ ಸಲ್ಲಿಸಬೇಕು ಎಂದು ಸಲಹೆ ಮಾಡಿದರು.

ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ‘ಸಮಾಜದಲ್ಲಿ ಪ್ರತಿ ವ್ಯಕ್ತಿ, ಪ್ರತಿ ವೃತ್ತಿ ಕೂಡ ಗೌರವಯುತವಾದದ್ದೇ ಆಗಿದೆ. ಪೌರ ಕಾರ್ಮಿಕರು ಸಮಾಜದ ಸ್ವಚ್ಛತೆ ಕಾಪಾಡುವ ವೈದ್ಯರಾಗಿದ್ದಾರೆ. ನಿರಂತರ ಶ್ರಮಿಕರಾದ ಪೌರಕಾರ್ಮಿಕರ ಸ್ವಚ್ಛತಾ ಕಾರ್ಯದಲ್ಲಿ ಸಮಾಜವೂ ಕೈ ಜೋಡಿಸಬೇಕು. ಅನಗತ್ಯವಾಗಿ ಕಸ ಎಸೆಯುವ ಪ್ರವೃತ್ತಿ ನಿಂತರೆ ನಗರ ಸ್ವಚ್ಛವಾಗಿರುತ್ತದೆ’ ಎಂದರು.

ಪತ್ರಕರ್ತ ಜೆ.ಆರ್.ಸಂತೋಷಕುಮಾರ ಇದ್ದರು. ನಿವೃತ್ತ ಪ್ರಾಚಾರ್ಯ ಕೆ.ಎನ್.ಹೊಸ್ಮನಿ ಅವರು ಪೌರ ಕಾರ್ಮಿಕರ ಹಕ್ಕು ಮತ್ತು ಕರ್ತವ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಂಜುನಾಥ ಶೆಟ್ಟಿ ನಿರೂಪಿಸಿದರು. ಎಲ್.ವಿ.ನಾಯ್ಕ ಸ್ವಾಗತಿಸಿದರು. ಪರಿಸರ ಎಂಜಿನಿಯರ್ ಶಿವರಾಜ ಕನಕಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT