ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಸಿದ್ಧತೆ

ಟೆಂಡರ್ ಪ್ರಕ್ರಿಯೆ ಪೂರ್ಣ: ಮರಗಳ ಕಟಾವಿಗೆ ಅರ್ಜಿ ಸಲ್ಲಿಕೆ
Last Updated 8 ಏಪ್ರಿಲ್ 2022, 21:45 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಅಂತಿಮ ಹಂತದ ಸಿದ್ಧತೆ ನಡೆದಿದೆ.

ಹುಬ್ಬಳ್ಳಿ ರಸ್ತೆಯ ಬದಿಯಲ್ಲಿ ಕ್ರೀಡಾ ಇಲಾಖೆಗೆ ಸೇರಿದ ಎರಡೂವರೆ ಎಕರೆ ಜಾಗವನ್ನು ಈಗಾಗಲೆ ಅಂತಿಮಗೊಳಿಸಲಾಗಿದೆ. ಈ ಜಾಗದಲ್ಲಿರುವ 35ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅರಣ್ಯ ಇಲಾಖೆಗೆ ಅನುಮತಿ ಕೇಳಿದೆ. ಕಟಾವು ಮಾಡಲಾಗುವ ಮರಗಳಿಗೆ ಗುರುತನ್ನೂ ಹಾಕಲಾಗಿದೆ.

ಕ್ರೀಡಾಂಗಣ ಸ್ಥಾಪನೆಗೆ ಗುರುತಿಸಿದ ಜಾಗದಲ್ಲಿ ಪಿಡಬ್ಲ್ಯೂಡಿ ಕೆಲವು ದಿನಗಳ ಹಿಂದೆಯೇ ಮಣ್ಣು ಪರೀಕ್ಷೆಯನ್ನೂ ನಡೆಸಿದೆ. ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು ಬೆಳಗಾವಿ ಮೂಲದ ಖಾಸಗಿ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದೆ.

‘ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು ಜಾಗವನ್ನು ಕಾಮಗಾರಿಗೆ ಬಿಟ್ಟುಕೊಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೂಚಿಸಲಾಗಿದೆ. ಮರಗಳ ಕಟಾವು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೆಲಸ ಆರಂಭಿಸಲಾಗುತ್ತದೆ’ ಎಂದು ಪಿಡಬ್ಲ್ಯೂಡಿ ಅಸಿಸ್ಟಂಟ್ ಎಂಜಿನಿಯರ್ ರಾಮಲಿಂಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘400 ಆಸನಗಳ ಸಾಮರ್ಥ್ಯದ ಒಳಾಂಗಣ ಕ್ರೀಡಾಂಗಣ ಇದಾಗಿರಲಿದೆ. ₹10 ಕೋಟಿ ಅನುದಾನ ನಿಗದಿಯಾಗಿದೆ. ಮುಂದಿನ ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆ ಪಡೆದ ಸಂಸ್ಥೆಗೆ ಷರತ್ತು ವಿಧಿಸಲಾಗಿದೆ’ ಎಂದು ಹೇಳಿದರು.

ಅಥ್ಲೆಟಿಕ್ಸ್, ಶಟಲ್ ಬ್ಯಾಡ್ಮಿಂಟನ್ ಕ್ರೀಡೆಗಳಿಗೆ ಅನುಕೂಲವಾಗುವಂತೆ ಹಲವು ವರ್ಷಗಳಿಂದ ಒಳಾಂಗಣ ಕ್ರೀಡಾಂಗಣ ಸ್ಥಾಪಿಸುವ ಬೇಡಿಕೆ ಸಾರ್ವಜನಿಕ ವಲಯದಲ್ಲಿತ್ತು. ಕಳೆದ ವರ್ಷ ಸರ್ಕಾರದಿಂದ ವಿಶೇಷ ಅನುದಾನವೂ ಬಿಡುಗಡೆಯಾಗಿತ್ತು.

ಕೆಲವು ತಿಂಗಳ ಹಿಂದಷ್ಟೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಶಿರಸಿಯಲ್ಲಿ ಜಂಟಿ ಸಭೆ ನಡೆಸಿ ಕ್ರೀಡಾಂಗಣಕ್ಕೆ ಜಾಗ ಅಂತಿಮಗೊಳಿಸಿದ್ದರು.

ಒಳಾಂಗಣ ಕ್ರೀಡಾಂಗಣ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದ್ದು, ಕ್ರೀಡಾಪಟುಗಳಿಗೆ ಆದಷ್ಟು ಬೇಗ ಅನುಕೂಲ ಕಲ್ಪಿಸಿಕೊಡಲಾಗುವುದು .

ವಿಶ್ವೇಶ್ವರ ಹೆಗಡೆ ಕಾಗೇರಿ

ವಿಧಾನಸಭಾ ಅಧ್ಯಕ್ಷ

ಅಂಕಿ–ಅಂಶ

₹10 ಕೋಟಿ

ಕ್ರೀಡಾಂಗಣಕ್ಕೆ ಬಿಡುಗಡೆಯಾದ ಅನುದಾನ

24 ತಿಂಗಳು

ಕಾಮಗಾರಿಗೆ ನಿಗದಿಪಡಿಸಿದ ಅವಧಿ

400

ಆಸನದ ಸಾಮರ್ಥ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT