ಗುರುವಾರ , ಡಿಸೆಂಬರ್ 5, 2019
24 °C
ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್

ಸುವ್ಯವಸ್ಥಿತ ಚುನಾವಣೆಗೆ ಸಕಲ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ಶಾಂತಿ ಹಾಗೂ ಸುವ್ಯವಸ್ಥಿತ ಚುನಾವಣೆಗೆ ಯಾವುದೇ ರೀತಿಯ ನ್ಯೂನತೆ ಬಾರದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ್ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮತದಾರರು ಆಮಿಷಕ್ಕೆ ಒಳಗಾಗದೇ ಮತದಾನ ಮಾಡಬೇಕು. ಮತಗಟ್ಟೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಚುನಾವಣೆಯ ಪ್ರಯುಕ್ತ ಜಿಲ್ಲೆಯಲ್ಲಿರುವ 3886 ಪರವಾನಗಿ ಹೊಂದಿದ ಬಂದೂಕುಗಳ ಪೈಕಿ 3869 ಬಂದೂಕುಗಳನ್ನು ಆಯಾ ಠಾಣೆಯಲ್ಲಿ ದಾಸ್ತಾನು ಇಡಲಾಗಿದೆ. ಇಬ್ಬರಿಗೆ ವಿನಾಯಿತಿ ನೀಡಲಾಗಿದ್ದು, 12 ಬಂದೂಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನೀತಿಸಂಹಿತೆ ಪಾಲನೆಯ ಸಹಾಯವಾಣಿಯ ಮೂಲಕ 34, ಸಿ-ವಿಝಿಲ್ ಆ್ಯಪ್ ಮೂಲಕ ಐದು ದೂರುಗಳು, ಆಯೋಗದ ಪೋರ್ಟಲ್‌ ಮೂಲಕ 23 ದೂರುಗಳು ಬಂದಿವೆ’ ಎಂದರು.

‘ಕ್ಷೇತ್ರದಲ್ಲಿ 2014 ಅಂಗವಿಕಲ ಮತದಾರರನ್ನು ಗುರುತಿಸಲಾಗಿದೆ. ಅವರನ್ನು ಆಯೋಗವೇ ಮತಗಟ್ಟೆಗೆ ಕರೆತಂದು ಮತ ಚಲಾಯಿಸಲು ಅವಕಾಶ ಕಲ್ಪಿಸಿಕೊಡಲಿದೆ. ತೀರಾ ವಯಸ್ಸಾದವರು, ಗರ್ಭಿಣಿಯರು ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯ ಇಲ್ಲ. ಯಾವುದೇ ರಾಜಕೀಯ ಪಕ್ಷದವರು ಮತದಾರರನ್ನು ವಾಹನದಲ್ಲಿ ಕರೆತರುವುದನ್ನು ನಿಷೇಧಿಸಲಾಗಿದೆ’ ಎಂದು ಹೇಳಿದರು.

‘ಕ್ಷೇತ್ರದ ಮತದಾರರಲ್ಲದ ಪಕ್ಷಗಳ ನಾಯಕರು, ಕಾರ್ಯಕರ್ತರು ಕ್ಷೇತ್ರ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ. ಈ ಕುರಿತು ಹೋಟೆಲ್, ವಸತಿಗೃಹಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಆಯೋಗದ ಅನುಮತಿ ಪಡೆದು ಮನೆ–ಮನೆ ಪ್ರಚಾರ ನಡೆಸಬಹುದು. ಕೊನೆಯ 48 ಗಂಟೆಯ ಅವಧಿಯಲ್ಲಿ ಮತದಾರರಿಗೆ ಆಮಿಷವೊಡ್ಡುವ ಸಾಧ್ಯ ಇರುವ ಕಾರಣ ಕಟ್ಟುನಿಟ್ಟಿನ ನಿಗಾ ಇಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.  ಕ್ಷೇತ್ರದಲ್ಲಿ 144 ಕಲಂ ಜಾರಿಗೊಳಿಸಲಾಗಿದ್ದು, ಐವರಿಗಿಂತ ಹೆಚ್ಚು ಜನರು ಒಟ್ಟಾಗಿ ಹೋಗುವಂತಿಲ್ಲ. ಅನುಮತಿ ಪಡೆದ ಮನೆ–ಮನೆ ಪ್ರಚಾರಕರಿಗೆ ವಿನಾಯತಿ ನಿಡಲಾಗಿದೆ. 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಎಂ. ರೋಷನ್ ಮಾತನಾಡಿ, ‘ಪ್ರತಿ ಅಭ್ಯರ್ಥಿಗೆ ಮೂರು ವಾಹನಗಳಿಗೆ ಅನುಮತಿ ನೀಡಲಾಗಿದ್ದು, ಚಾಲಕ ಸೇರಿ ಐವರು ಮಾತ್ರ ಅದರಲ್ಲಿ ಪ್ರಯಾಣಿಸಬಹುದು. ಮತಗಟ್ಟೆಗೆ ಮೊಬೈಲ್ ಒಯ್ಯುವುದನ್ನು ನಿಷೇಧಿಸಲಾಗಿದೆ. ಈವರೆಗೆ ದಾಖಲೆ ಇಲ್ಲದೇ ಸಾಗಿಸಲಾಗುತ್ತಿದ್ದ ₹ 10.70 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಅಕ್ರಮಗಳ ತಡೆಗೆ ಹೆಚ್ಚಿನ ಸಿಬ್ಬಂದಿ ನೇಮಿಸಲಾಗಿದೆ. ಕ್ಷೇತ್ರದಲ್ಲಿ ಮಾದಕ ದ್ರವ್ಯ, ಅಬಕಾರಿ, ಸಾಮಗ್ರಿ ವಶ, ಹಣ ವಶದ ಒಟ್ಟು 17 ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು. ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ಚುನಾವಣಾಧಿಕಾರಿ ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ್ ಎಚ್.ವಿಶ್ವನಾಥ, ಮುಂಡಗೋಡ ತಹಶೀಲ್ದಾರ್ ಶ್ರೀಧರ ಮುಂದಲಮನಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು