ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಕೇಂದ್ರದಲ್ಲಿ ಭರದ ಸಿದ್ಧತೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಸಲು ಪೂರಕ ತಯಾರಿ
Last Updated 23 ಜೂನ್ 2020, 12:05 IST
ಅಕ್ಷರ ಗಾತ್ರ

ಶಿರಸಿ: ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ತಾಲ್ಲೂಕಿನಲ್ಲಿ ಭರದ ಸಿದ್ಧತೆಗಳು ನಡೆದಿವೆ. ನಗರ ವ್ಯಾಪ್ತಿಯ ಏಳು ಹಾಗೂ ಗ್ರಾಮೀಣ ಭಾಗದ ಮೂರು ಕೇಂದ್ರಗಳು ಪರೀಕ್ಷೆಗೆ ಸಜ್ಜುಗೊಂಡಿವೆ.

ತಾಲ್ಲೂಕಿನಲ್ಲಿ ಒಟ್ಟು 3097 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅವರಲ್ಲಿ 106 ಮಕ್ಕಳು ವಲಸೆ ಬಂದಿದ್ದರೆ, ಇಲ್ಲಿನ 57 ಮಕ್ಕಳು ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜು, ಆವೆಮರಿಯಾ ಪ್ರೌಢಶಾಲೆ, ಪ್ರೊಗ್ರೆಸ್ಸಿವ್ ಪದವಿಪೂರ್ವ ಕಾಲೇಜು, ನಿಲೇಕಣಿ ಸರ್ಕಾರಿ ಪ್ರೌಢಶಾಲೆ, ಲಯನ್ಸ್ ಪ್ರೌಢಶಾಲೆ, ಜಯಂತಿ ಪ್ರೌಢಶಾಲೆ ಬನವಾಸಿ, ಶ್ರೀದೇವಿ ಪ್ರೌಢಶಾಲೆ ಹುಲೇಕಲ್, ಸರ್ಕಾರಿ ಪ್ರೌಢಶಾಲೆ ಇಸಳೂರು ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ಸೇಂಟ್ ಅಂಥೋನಿ ಪ್ರೌಢಶಾಲೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಪರೀಕ್ಷೆ ಸುಗಮವಾಗಿ ನಡೆಸಲು ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ನಿರಂತರ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈಗಾಗಲೇ ಪ್ರವೇಶಪತ್ರ ವಿತರಣೆಯು ಆಯಾ ಶಾಲೆಗಳಲ್ಲಿ ನಡೆದಿದೆ. ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ನಡುವೆ ಮೂರು ಅಡಿ ಅಂತರ ಕಾಯ್ದುಕೊಳ್ಳಲು ಅನುವಾಗುವಾಗುವಂತೆ ಡೆಸ್ಕ್‌ಗಳನ್ನು ಹಾಕಲಾಗಿದೆ. ನಗರಸಭೆ ವತಿಯಿಂದ ಸ್ಯಾನಿಟೈಸ್ ಮಾಡುವ ಕಾರ್ಯ ನಡೆಯುತ್ತಿದೆ.

ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲಿರುವ ಶಿಕ್ಷಕರಿಗೆ ಪ್ರೊಗ್ರೆಸ್ಸಿವ್ ಕಾಲೇಜಿನ ಕೇಂದ್ರದಲ್ಲಿ ಮಂಗಳವಾರ ತರಬೇತಿ ನಡೆಯಿತು. ಕೇಂದ್ರದ ಅಧೀಕ್ಷಕ ಅನಿಲ್ ಗಾಂವಕರ ತರಬೇತಿ ನೀಡಿದರು. ಪರೀಕ್ಷಾ ಕೊಠಡಿಯಲ್ಲಿ ಆಸನ ವ್ಯವಸ್ಥೆ, ಶಾರೀರಿಕ ಅಂತರ ಕಾಪಾಡುವ ವಿಚಾರ, ಮಕ್ಕಳ ಸುರಕ್ಷತೆ ಬಗ್ಗೆ ವಹಿಸಬೇಕಾದ ಕಾಳಜಿ ಕುರಿತು ಅವರು ವಿವರಣೆ ನೀಡಿದರು.

ನಂತರ, ಪರೀಕ್ಷೆ ದಿನ ಕೇಂದ್ರಕ್ಕೆ ಬರುವ ಮಕ್ಕಳಿಗೆ ಮಾರ್ಗದರ್ಶನ ನೀಡುವ ಸಂಬಂಧ ಶಿಕ್ಷಕರನ್ನು ಸರದಿಯಲ್ಲಿ ನಿಲ್ಲಿಸಿ, ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಕೈಗೆ ಸ್ಯಾನಿಟೈಸರ್ ಹಾಕಿ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಕೇಂದ್ರಕ್ಕೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದರು.

‘ಜ್ವರ, ಕೆಮ್ಮು, ನೆಗಡಿ ಇರುವ ಮಕ್ಕಳಿಗೆ ಕುಳಿತು ಪರೀಕ್ಷೆ ಬರೆಯಲು ಎರಡು ಪ್ರತ್ಯೇಕ ಕೊಠಡಿ ಮೀಸಲಿಡಲಾಗಿದೆ. ಮೊಬೈಲ್ ಸ್ವಾಧೀನಾಧಿಕಾರಿಗೆ ಒಂದು ಪ್ರತ್ಯೇಕ ಕೊಠಡಿ ಇಡಲಾಗಿದೆ. ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ದಿನೇಶ ನೇತ್ರೇಕರ ತಿಳಿಸಿದರು. ಪ್ರಶ್ನೆಪತ್ರಿಕೆ ಅಭಿರಕ್ಷಕ ಮಂಜುನಾಥ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT