ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ ಸಿದ್ಧತೆ

ಕಳೆದ ಬಜೆಟ್‍ನಲ್ಲಿ ಘೋಷಣೆಯಾಗಿದ್ದ ₹7 ಕೋಟಿ ಅನುದಾನ
Last Updated 13 ಫೆಬ್ರುವರಿ 2022, 15:49 IST
ಅಕ್ಷರ ಗಾತ್ರ

ಶಿರಸಿ: ಕಳೆದ ಸಾಲಿನ ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಶಿರಸಿಯಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ ₹7 ಕೋಟಿ ಅನುದಾನ ಘೋಷಿಸಿದ್ದಷ್ಟೆ ಉತ್ತರ ಕನ್ನಡದ ಘಟ್ಟದ ಮೇಲಿನ ಭಾಗಕ್ಕೆ ಸಿಕ್ಕ ದೊಡ್ಡ ಕೊಡುಗೆಯಾಗಿತ್ತು.

ಕೇಂದ್ರ ಸ್ಥಾಪನೆಗೆ ವರ್ಷದ ಬಳಿಕ ಜಾಗ ಮಂಜೂರುಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ. ವಿದ್ಯಾರ್ಥಿಗಳು, ಶಿಕ್ಷಕರು, ವಿಜ್ಞಾನ ಆಸಕ್ತರಿಗೆ ತರಬೇತಿ ನೀಡುವ ಜತೆಗೆ ವಿಜ್ಞಾನ ಸಂಬಂಧಿತ ಚಟುವಟಿಕೆ ಕೈಗೊಳ್ಳಲು ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಕೆಲಸ ಮಾಡಲಿದೆ.

ಪ್ರಸ್ತುತ ಜಿಲ್ಲೆಯ ಕಾರವಾರದಲ್ಲಿ ಮಾತ್ರ ಈ ಕೇಂದ್ರವಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯೂ ಆಗಿರುವುದರಿಂದ ಘಟ್ಟದ ಮೇಲಿನ ವಿದ್ಯಾರ್ಥಿಗಳು, ಜನರಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಸರ್ಕಾರ ಶಿರಸಿಗೆ ಪ್ರತ್ಯೇಕ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಜೂರು ಮಾಡಿತ್ತು. 2020–21ನೇ ಸಾಲಿನ ಬಜೆಟ್‍ನಲ್ಲಿ ಇದಕ್ಕೆ ಅನುದಾನ ನೀಡುವುದಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು.

ನಗರದಿಂದ ಏಳು ಕಿಲೋ ಮೀಟರ್ ದೂರದಲ್ಲಿರುವ ಇಸಳೂರು ಗ್ರಾಮದಲ್ಲಿ ಕೇಂದ್ರ ಸ್ಥಾಪನೆಯಾಗಲಿದೆ. ಇಲ್ಲಿನ ಸರ್ವೆ ನಂ.45ರಲ್ಲಿರುವ 3 ಎಕರೆ 14 ಗುಂಟೆ ಜಾಗವನ್ನು ಇದಕ್ಕಾಗಿ ನೀಡಲಾಗುತ್ತಿದೆ.

ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಕೆಲವರು ಅತಿಕ್ರಮಿಸಿಕೊಂಡಿದ್ದರು. ಅದನ್ನು ತೆರವುಗೊಳಿಸಿ ಜಾಗವನ್ನು ವಿಜ್ಞಾನ ಕೇಂದ್ರ ಸ್ಥಾಪಿಸುವ ಸಂಬಂಧ ಮಂಜೂರಾತಿಗೆ ತಹಶೀಲ್ದಾರ ಅವರು ಜಿಲ್ಲಾಧಿಕಾರಿಗೆ ಪ್ರಸ್ತಾವ ಕಳಿಸಿದ್ದರು. ತಾಂತ್ರಿಕ ಕಾರಣಕ್ಕೆ ಪ್ರಸ್ತಾವಕ್ಕೆ ಸಮ್ಮತಿ ಸಿಗಲು ತಡವಾಗಿದೆ.

ಕೇಂದ್ರ ಸ್ಥಾಪನೆಗೆ ಸರ್ಕಾರದಿಂದ ಹಸಿರು ನಿಶಾನೆ ದೊರೆಯುತ್ತಿದ್ದಂತೆ ಯಡಳ್ಳಿ ಭಾಗದಲ್ಲಿ ಅದನ್ನು ಸ್ಥಾಪಿಸುವ ಬಗ್ಗೆ ಪ್ರಯತ್ನ ನಡೆದಿತ್ತು. ಅಲ್ಲಿ ಜಾಗ ಪರಿಶೀಲನೆಯನ್ನೂ ನಡೆಸಲಾಯಿತು. ತಾಂತ್ರಿಕ ಕಾರಣಗಳಿಂದ ಅದು ನನೆಗುದಿಗೆ ಬಿದ್ದಿತ್ತು.

‘ವಿಜ್ಞಾನ ಚಟುವಟಿಕೆ ಸಂಬಂಧಿತ ತರಬೇತಿಗಳಿಗೆ ಕೇಂದ್ರ ಅನುಕೂಲವಾಗುತ್ತದೆ. ಶೈಕ್ಷಣಿಕ ಕೇಂದ್ರವೂ ಆಗಿರುವ ಶಿರಸಿಯಲ್ಲಿ ಕೇಂದ್ರ ಸ್ಥಾಪನೆಯಿಂದ ವಿದ್ಯಾರ್ಥಿಗಳು, ಶಿಕ್ಷಕರಿಗೆ ಅನುಕೂಲವೂ ಆಗಲಿದೆ. ಈ ಕೆಲಸ ಬಹುಬೇಗನೆ ಕೈಗೊಂಡರೆ ಉತ್ತಮ’ ಎಂದು ವಿಜ್ಞಾನ ಶಿಕ್ಷಕರೊಬ್ಬರು ಅಭಿಪ್ರಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT