7
ಕಾರವಾರ: ಪತ್ರಿಕಾ ದಿನಾಚರಣೆ ಉದ್ಘಾಟಿಸಿದ ಶಾಸಕಿ ರೂಪಾಲಿ ನಾಯ್ಕ

ಸರಸ್ವತಿ ಒಲಿದವರಿಂದ ಸುಳ್ಳು ಬೇಡ

Published:
Updated:
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿದರು

ಕಾರವಾರ: ‘ಸರಸ್ವತಿಯನ್ನು ಒಲಿಸಿಕೊಂಡವರು ಸುಳ್ಳು ಬರೆಯಬಾರದು. ನಡೆದ ವಿಚಾರವನ್ನು ನೈಜವಾಗಿ ತಿಳಿಸಬೇಕು’ ಎಂದು ಶಾಸಕಿ ರೂಪಾಲಿ ನಾಯ್ಕ ಪತ್ರಕರ್ತರಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಪತ್ರಕರ್ತರು ಯಾವುದೇ ಒತ್ತಡ ಇದ್ದರೂ ನೇರವಾಗಿ ಇರುವ ವಿಷಯವನ್ನೇ ಬರೆಯಬೇಕು. ಜನರಿಗೆ ಮೋಸ ಆಗುವುದನ್ನು ತಡೆಯುವುದು ಹಾಗೂ ಜಾಗೃತಿ ಮೂಡಿಸುವ ಕಾರ್ಯ ಅವರಿಂದಾಗುತ್ತಿದೆ. ಆತ್ಮವಿಶ್ವಾಸದಿಂದ ವೃತ್ತಿಯಲ್ಲಿ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿ, ‘ಪತ್ರಕರ್ತರಿಗೆ ಮೊದಲಿದ್ದಷ್ಟು ಗೌರವ ಜನರಿಂದ ಈಗ ಸಿಗುತ್ತಿಲ್ಲ. ಇದಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ನಾವೇ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಪತ್ರಿಕೋದ್ಯಮಕ್ಕೆ ಕೆಟ್ಟ ಹೆಸರು ಬರಲು ಕಾರಣವೇನು ಎನ್ನುವುದನ್ನು ಪತ್ರಕರ್ತರೆಲ್ಲ ಒಂದಾಗಿ ಚರ್ಚಿಸಬೇಕು’ ಎಂದರು.

‘ಸುದ್ದಿ ಪತ್ರಿಕೆಗಳ ಇತಿಹಾಸ 175 ವರ್ಷಗಳ ಹಿಂದಿನದು. ಆದರೆ, ದೃಶ್ಯ ಮಾಧ್ಯಮಕ್ಕಿರುವುದು 11 ವರ್ಷಗಳ ಇತಿಹಾಸವಷ್ಟೆ. ಹೀಗಾಗಿ ಅವು ಇನ್ನೂ ಪ್ರಬುದ್ಧ ಸ್ಥಿತಿಗೆ ಬರಬೇಕಿವೆ. ಆರೋಗ್ಯಯುತ ಚರ್ಚೆಗಳು ಅಲ್ಲಿ ಆಗಬೇಕಿವೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ‘ಪ್ರಜಾಪ್ರಭುತ್ವದ ಮೂರು ಅಂಗಗಳು ಎಲ್ಲಾದರೂ ಎಡವಿದಾಗ ನಾಲ್ಕನೇ ಅಂಗವಾದ ಮಾಧ್ಯಮ ಎಚ್ಚರಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ಪರಿಶೀಲಿಸಿ ಗಣನೆಗೆ ತೆಗೆದುಕೊಳ್ಳಬೇಕು’ ಎಂದರು.

ಪ್ರಶಸ್ತಿ ಪ್ರದಾನ: ಪತ್ರಕರ್ತರಾದ ಶ್ರೀನಾಥ ಜೋಶಿ ಅವರಿಗೆ ‘ಟ್ಯಾಗೋರ್ ಪತ್ರಿಕಾ ಪ್ರಶಸ್ತಿ’, ಶೇಷಕೃಷ್ಣ ಅವರಿಗೆ ‘ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ’, ವಸಂತಕುಮಾರ್ ಕತಗಾಲ ಹಾಗೂ ಛಾಯಾಗ್ರಾಹಕ ಪಾಂಡುರಂಗ ಹರಿಕಂತ್ರ ಅವರಿಗೆ ‘ಜೀವಮಾನದ ಸಾಧನೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಜಿಲ್ಲಾ ಪತ್ರಿಕಾ ಭವನಕ್ಕೆ ಕೊಡುಗೆ ನೀಡಿದ ದಾನಿಗಳಾದ ರಾಜು ತಾಂಡೇಲ್, ಜಾರ್ಜ್ ಫರ್ನಾಂಡೀಸ್, ಮಾಧವ ನಾಯಕ, ದಿಲೀಪ ಅರ್ಗೇಕರ್, ಇಬ್ರಾಹಿಂ ಕಲ್ಲೂರ್, ನಿರಾಕಾರ ಫರ್ನೀಚರ್ಸ್‌, ಸುರೇಶ್ ಶೆಟ್ಟಿ, ಗಿರೀಶ್ ರಾವ್ ಅವರನ್ನು ಗೌರವಿಸಲಾಯಿತು.

ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗಣೇಶ್ ಹೆಗಡೆ ಹಾಗೂ ನಾಗರಾಜ ಹರಪನಹಳ್ಳಿ ಕಾರ್ಯಕ್ರಮ ನಿರೂಪಣೆ ಮಾಡಿದರು. ರಮಾ ಗಾಂವ್ಕರ್ ಪ್ರಾರ್ಥಿಸಿದರು. ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಕಡತೋಕಾ ಮಂಜು ಸ್ವಾಗತಿಸಿದರು. ಪತ್ರಕರ್ತ ದೀಪಕಕುಮಾರ್ ಶೇಣ್ವಿ ವಂದಿಸಿದರು.

ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಟಿ.ಬಿ.ಹರಿಕಾಂತ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !