ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಖಾಸಗೀಕರಣ ಅಪಾಯಕಾರಿ: ರಾಘವೇಂದ್ರ ನಾಯರಿ

ಬ್ಯಾಂಕ್ ರಾಷ್ಟ್ರೀಕರಣದ 53ನೇ ವಾರ್ಷಿಕೋತ್ಸವ
Last Updated 26 ಜುಲೈ 2022, 15:36 IST
ಅಕ್ಷರ ಗಾತ್ರ

ಕಾರವಾರ: ‘ರಾಷ್ಟ್ರೀಕೃತ ಬ್ಯಾಂಕ್‌ಗಳು ದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿವೆ. ಅವುಗಳನ್ನು ಖಾಸಗೀಕರಣಗೊಳಿಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದರ ವಿರುದ್ಧ ಜನ ಸಿಡಿದೇಳಬೇಕು’ ಎಂದು ಕರ್ನಾಟಕ ಪ್ರದೇಶ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಹೇಳಿದರು.

ಉತ್ತರ ಕನ್ನಡ ಜಿಲ್ಲಾ ಬ್ಯಾಂಕ್ ನೌಕರರ ಸಂಘವುನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಬ್ಯಾಂಕ್ ರಾಷ್ಟ್ರೀಕರಣದ53ನೇ ವಾರ್ಷಿಕೋತ್ಸವ’ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.

‘ದೇಶದ ಜನ ತಮ್ಮ ದುಡಿಮೆಯ ₹ 180 ಲಕ್ಷ ಕೋಟಿಯನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳ ಮೇಲೆ ವಿಶ್ವಾಸವಿಟ್ಟು ಠೇವಣಿ ಇಟ್ಟಿದ್ದಾರೆ. ದೇಶದ ಶೇ 90ರಷ್ಟು ಮಂದಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವ್ಯವಹರಿಸುತ್ತಿದ್ದಾರೆ. ಜನರ ನಂಬಿಕೆ ಮತ್ತು ವಿಶ್ವಾಸಕ್ಕೆ ಪೂರಕವಾಗಿ ಆ ಬ್ಯಾಂಕ್‌ಗಳನ್ನು ಉಳಿಸುವುದು, ಬಲಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಉಳಿಸಿಕೊಳ್ಳುವುದು ಜನಸಾಮಾನ್ಯರ ಹೊಣೆಗಾರಿಕೆಯೂ ಹೌದು’ ಎಂದು ಅಭಿಪ್ರಾಯಪಟ್ಟರು.

‘14 ಬ್ಯಾಂಕ್‌ಗಳನ್ನು 1969ರಲ್ಲಿ ರಾಷ್ಟ್ರೀಕರಣ ಮಾಡಲಾಯಿತು. ಇದು ದೇಶದಲ್ಲಿ ಆರ್ಥಿಕ ಕ್ರಾಂತಿಗೆ ಮುನ್ನುಡಿ ಬರೆಯಿತು. ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಕ್ರಮ ಕೈಗೊಂಡರಾದರೂ ಅದಕ್ಕಾಗಿ ಎರಡು ದಶಕ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಹೋರಾಡಿತ್ತು’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ವಿನೋದ ಬಾಂದೇಕರ ಮಾತನಾಡಿ, ‘ಬ್ಯಾಂಕ್ ರಾಷ್ಟ್ರೀಕರಣ ನಮ್ಮ ದೇಶದ ಅಭಿವೃದ್ಧಿಯ ಹೆಬ್ಬಾಗಿಲಾಗಿದೆ. ಆದರೆ, ಇತ್ತೀಚೆಗೆ ಸರ್ಕಾರಗಳು ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ. ಖಾಸಗಿ ಬ್ಯಾಂಕಿಂಗ್ ನೀತಿಯನ್ನು ಜಾರಿಗೊಳಿಸುತ್ತಿರುವುದು ದೇಶ ವಿರೋಧಿಯಾಗಿದೆ‌’ ಎಂದರು.

ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಾಸುದೇವ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ನಮ್ಮ ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳು ವಿಶ್ವದಲ್ಲೇ ಅತ್ಯಂತ ಬಲಿಷ್ಠವಾದ ತಳಹದಿ ಹೊಂದಿವೆ‌. ಪ್ರತಿ ವರ್ಷ ಲಕ್ಷಾಂತರ ಕೋಟಿ ರೂಪಾಯಿಗಳ ಲಾಭ ಗಳಿಸುತ್ತಿವೆ. ಆದರೆ, ವಿಲೀನದ ನೆಪದಲ್ಲಿ ಐದು ವರ್ಷಗಳಲ್ಲಿ ಸುಮಾರು 4,000 ಶಾಖೆಗಳನ್ನು ಮುಚ್ಚಲಾಗಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT