ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕೆಯೊಡೆಯದ ‘1001’ ತಳಿ ಭತ್ತ; ರೈತರಿಂದ ಆರೋಪ

ಬಿತ್ತನೆ ಬೀಜ ಮರಳಿಸಿದ ಹಲವು ರೈತರು: ಕಳಪೆ ಸಂಶಯ
Last Updated 17 ಜುಲೈ 2022, 19:30 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಭತ್ತದ ಕಣಜ ಖ್ಯಾತಿಯ ಬನವಾಸಿ ಹೋಬಳಿಯಲ್ಲಿ ಈ ಬಾರಿ ಕೃಷಿ ಇಲಾಖೆ ರೈತರಿಗೆ ಹಂಚಿಕೆ ಮಾಡಿದ್ದ ‘1001’ ತಳಿಯ ಭತ್ತದ ಬಿತ್ತನೆ ಬೀಜ ಮೊಳಕೆ ಒಡೆದಿಲ್ಲ ಎಂಬ ಆರೋಪ ಕೆಲವು ರೈತರಿಂದ ಕೇಳಿಬಂದಿದೆ.

ಕಳೆದ ತಿಂಗಳು ಬನವಾಸಿಯ ರೈತ ಸಂಪರ್ಕ ಕೇಂದ್ರದಿಂದ ನೂರಾರು ರೈತರು ಬಿತ್ತನೆ ಬೀಜ ಖರೀದಿಸಿ ಒಯ್ದಿದ್ದರು. ಈ ಪೈಕಿ ಕೆಲವರು ಭತ್ತ ನೆನೆಯಲು ಹಾಕಿ ವಾರ ಕಳೆದರೂ ಮೊಳಕೆ ಒಡೆದಿರಲಿಲ್ಲ. ಇದರಿಂದ ಕಂಗೆಟ್ಟು ಕೆಲವರು ರೈತ ಸಂಪರ್ಕ ಕೇಂದ್ರಕ್ಕೆ ಬಿತ್ತನೆ ಬೀಜ ಮರಳಿಸಿದ್ದಾರೆ. ಇದಕ್ಕೆ ಬದಲಾಗಿ ಪರ್ಯಾಯ ತಳಿಯ ಬಿತ್ತನೆ ಬೀಜವನ್ನೂ ಪಡೆದುಕೊಂಡಿದ್ದಾರೆ.

ಕಳೆದ ಒಂದು ವಾರದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ರೈತರು ‘1001’ ತಳಿಯ ಬಿತ್ತನೆ ಬೀಜ ಮರಳಿಸಿದ್ದಾರೆ. ಇಲಾಖೆಯಿಂದ ಪೂರೈಕೆಯಾಗಿರುವ ಬೀಜ ಕಳಪೆ ಇರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಆದರೆ, ಇದೇ ತಳಿಯ ಭತ್ತ ಒಯ್ದಿದ್ದ ನೂರಾರು ರೈತರು ಸಸಿಗಳನ್ನು ಮೊಳಕೆಯೊಡೆಸಿ ಮಡಿ ಮಾಡಿ ನಾಟಿಗೆ ಸಿದ್ಧತೆ ನಡೆಸಿಕೊಂಡಿದ್ದಾರೆ.

‘1001 ತಳಿಯ ಮೂರು ಬ್ಯಾಗ್‍ನಷ್ಟು ಬೀಜಗಳನ್ನು ಒಯ್ದು ಮನೆಯ ಅಂಗಳದಲ್ಲಿ ನೆನೆಯಲು ಹಾಕಲಾಗಿತ್ತು. ನಾಲ್ಕೈದು ದಿನವಾದರೂ ಅವು ಮೊಳಕೆಯೊಡೆದಿರುವುದನ್ನು ಗಮನಿಸಿ ಪುನಃ ರೈತ ಸಂಪರ್ಕ ಕೇಂದ್ರಕ್ಕೆ ನೀಡಿದ್ದೇವೆ. ಬನವಾಸಿ ಭಾಗದ ಹಲವು ರೈತರಿಗೆ ಇದೇ ಅನುಭವವಾಗಿದೆ’ ಎನ್ನುತ್ತಾರೆ ರೈತರಾದ ಚಂದ್ರಪ್ಪ ಚೆನ್ನಯ್ಯ, ಸುಬ್ರಹ್ಮಣ್ಯ ನಾಯ್ಕ.

‘ಬನವಾಸಿ ಭಾಗದಲ್ಲಿ ನಿರಂತರ ಮಳೆಯಿಂದ ತಂಪು ವಾತಾವರಣವಿತ್ತು. ಹೆಚ್ಚಿನ ತೇವಾಂಶದ ಕಾರಣ ಬೀಜ ಮೊಳಕೆಯೊಡೆಯಲು ತೊಂದರೆಯಾಗಿರಬಹುದು. ಬಿತ್ತನೆ ಬೀಜ ಪಡೆದಿದ್ದ ಬಹುತೇಕ ರೈತರು ಸಸಿ ಮಾಡಿ, ನಾಟಿಗೆ ಸಿದ್ಧತೆ ನಡೆಸಿದ್ದಾರೆ. ಮೊಳಕೆಯೊಡೆಯದ ಬೀಜಗಳನ್ನು ವಾಪಸ್ ‍ಪಡೆದು, ರೈತರಿಗೆ ಹೊಸದಾಗಿ ಬಿತ್ತನೆ ಬೀಜಗಳನ್ನು ನೀಡಲಾಗಿದೆ’ ಎಂದು ಬನವಾಸಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಜಿ.ಡಿ.ಪಟಗಾರ ಪ್ರತಿಕ್ರಿಯಿಸಿದರು.

*

ತೇವಾಂಶದ ಕಾರಣಕ್ಕೆ ಬೀಜ ಮೊಳಕೆಯೊಡೆಯಲು ವಿಳಂಬವಾಗಿರುವ ಸಾಧ್ಯತೆ ಇದೆ. ಪೂರೈಕೆಯಾದ ಬಹುಪಾಲ ಬಿತ್ತನೆ ಬೀಜಗಳಿಂದ ರೈತರು ಸಸಿ ಮಾಡಿದ್ದಾರೆ.
ಮಧುಕರ ನಾಯ್ಕ,ಕೃಷಿ ಇಲಾಖೆ ಸಹಾಯಕ ನಿರ್ದೇಶಕ

*

ರೈತರಿಗೆ ಪೂರೈಕೆ ಮಾಡಿರುವ ಬಿತ್ತನೆ ಬೀಜ ಕಳಪೆ ಮಟ್ಟದಿಂದ ಕೂಡಿರುವ ಸಂಶಯವನ್ನು ರೈತರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯಲಿ.
ಶ್ರೀಲತಾ ಕಾಳೇರಮನೆ,ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT