ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಗುಂಡಿ ಸೇತುವೆ ಪುನರ್ ನಿರ್ಮಾಣ ನನೆಗುದಿಗೆ

ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚಾರವೇ ಸವಾಲು
Last Updated 7 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಮುಂಡಗೋಡ: ಈ ಬಾರಿಯ ನೆರೆ 15 ವರ್ಷಗಳ ಹಿಂದಿನ ಕಹಿ ಅನುಭವವನ್ನು ಮತ್ತೆ ನೆನಪಿಸಿದೆ. ಜೀವ ಕೈಯಲ್ಲಿ ಹಿಡಿದುಕೊಂಡು ಏಳು ವರ್ಷ ಕಳೆದಿದ್ದ ಜನರು, ಕಾಲುಸಂಕ ನಿರ್ಮಾಣವಾದ ಮೇಲೆ ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಮೂರು ತಿಂಗಳಿಂದ ಮತ್ತದೇ ಸಂಕವಿಲ್ಲದೆ, ಸಂಕಷ್ಟ ಅನುಭವಿಸುತ್ತಿದ್ದಾರೆ.

ಅಗಸ್ಟ್ 8ರಂದು ಸುರಿದ ಭಾರಿ ಮಳೆಗೆ ಬೇಡ್ತಿ ಹಳ್ಳ ಉಕ್ಕಿ ಹರಿದು, ನೀರಿನ ರಭಸಕ್ಕೆ ರಸ್ತೆ ಇತ್ತೆಂಬ ಕುರುಹೂ ಸಿಗದಂತೆ ಭೂಮಿ ಕೊಚ್ಚಿಕೊಂಡು ಹೋಗಿರುವ ಕಾರಣ ಮುಂಡಗೋಡ–ಯಲ್ಲಾಪುರ ತಾಲ್ಲೂಕಿನ ಮಧ್ಯದಲ್ಲಿರುವ ಶಿಡ್ಲಗುಂಡಿ ಸೇತುವೆ ಎರಡು ತಾಲ್ಲೂಕುಗಳ ನಡುವಿನ ಸಂಪರ್ಕ ಕೊಂಡಿಯನ್ನು ಕಳಚಿದೆ. ಗಿಡಮರಗಳು, ದೇವಸ್ಥಾನ, ತನಿಖಾ ಠಾಣೆ ಎಲ್ಲವೂ ನೀರಿಗೆ ಆಹುತಿಯಾಗಿವೆ.

ಶಿಡ್ಲಗುಂಡಿ ಸೇತುವೆ ಸುತ್ತಮುತ್ತಲಿನ ಪ್ರದೇಶಗಳು ಭೂಕಂಪ ಸಂಭವಿಸಿದ ನಂತರದ ಚಿತ್ರಣದಂತೆ ಕಾಣುತ್ತವೆ. ಜನರ ಹಾಗೂ ಲಘುವಾಹನಗಳ ಓಡಾಟಕ್ಕೆ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಸಹ, ಎರಡು ಬಾರಿ ಹಳ್ಳದ ನೀರಿನಲ್ಲಿ ಮುಳುಗಿ ಹಾನಿಯಾಗಿದೆ. ಹುಬ್ಬಳ್ಳಿ–ಧಾರವಾಡ ಪ್ರದೇಶಗಳಲ್ಲಿ ಹೆಚ್ಚು ಮಳೆ ಆದರೆ, ಯಲ್ಲಾಪುರ ಅಥವಾ ಮುಂಡಗೋಡ ಕಡೆ ಹೋಗಿಬರಲು ಈ ಮಾರ್ಗ ಬಂದಾಗುತ್ತದೆ.

‘ಕೂಲಿ ಕೆಲಸಕ್ಕೆಂದು ಪ್ರತಿನಿತ್ಯ ನೂರಕ್ಕೂ ಹೆಚ್ಚು ಜನರು ಶಿಡ್ಲಗುಂಡಿ ಸುತ್ತಲಿನ ಹಳ್ಳಿಗಳಿಂದ ಯಲ್ಲಾಪುರಕ್ಕೆ ಹೋಗುತ್ತಾರೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಸಮಯಕ್ಕೆ ಸರಿಯಾಗಿ ವಾಹನಗಳು ಸಿಗದೇ ದುಡಿಮೆಯಿಂದಲೂ ವಂಚಿತರಾಗಿದ್ದಾರೆ. ಹಳ್ಳದ ನೀರು ಹೆಚ್ಚಾದರೆ ವಿದ್ಯಾರ್ಥಿಗಳೂ ಅನಿವಾರ್ಯವಾಗಿ ರಜೆ ಮಾಡಬೇಕಾದ ಪರಿಸ್ಥಿತಿಯಿದೆ’ ಎಂದು ಸ್ಥಳೀಯ ನಿವಾಸಿ ಸುಬ್ರಾಯ ಭಟ್ಟ ಹೇಳಿದರು.

‘ಬೇಡ್ತಿ ಹಳ್ಳದಲ್ಲಿ ನೀರು ಹೆಚ್ಚಾದರೆ ತಾತ್ಕಾಲಿಕ ರಸ್ತೆ ಮುಳುಗುತ್ತದೆ. ಹಳ್ಳ ದಾಟಲು ಆಗುವುದಿಲ್ಲ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ ದುಡಿಮೆಗೆ ಬಹಳಷ್ಟು ಹೊಡೆತ ಬಿದ್ದಿದೆ. ಸೇತುವೆ ಎರಡೂ ಬದಿಗೆ ಸರ್ಕಾರಿ ಬಸ್‌ ಹಾಗೂ ಖಾಸಗಿ ವಾಹನಗಳು ಪ್ರಯಾಣಿಕರಿಗಾಗಿ ಕಾಯುತ್ತಿರುತ್ತವೆ’ ಎನ್ನುತ್ತಾರೆ ಕ್ರೂಸರ್ ವಾಹನ ಚಾಲಕ ಜಗದೀಶ ದ್ಯಾಮಣ್ಣ ಪಾಟೀಲ.

ಬ್ರಿಟಿಷ್ ನಿರ್ಮಿತ ಶಿಡ್ಲಗುಂಡಿ ಸೇತುವೆ2004ರ ಏಪ್ರಿಲ್‌ 7ರಂದು ಶಿಥಿಲಗೊಂಡಿತ್ತು. ಆಗ ಸೇತುವೆ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದ ಅಧಿಕಾರಿಗಳು, ಹಳೆಯ ಸೇತುವೆಯ ಕಬ್ಬಿಣ ತೆಗೆಯಲು ಎರಡು ವರ್ಷ ಸಮಯ ತೆಗೆದುಕೊಂಡಿದ್ದರು. ಆಮೆಗತಿಯಲ್ಲಿ ಸಾಗಿದ್ದ ಕಾಮಗಾರಿಯು, ಏಳು ವರ್ಷಗಳಲ್ಲಿ ಮುಗಿದಿತ್ತು. ಮೀನುಗಾರರ ದೋಣಿ ಮೂಲಕ ಜನರು ಆ ಕಡೆಯಿಂದ ಈ ಕಡೆ ದಾಟುತ್ತಿದ್ದರು. ನಂತರ ಕಬ್ಬಿಣದ ಕಾಲುಸಂಕ ನಿರ್ಮಿಸಲಾಗಿತ್ತು ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT