ಹೋರಾಟಕ್ಕೆ ಹಾದಿಯಾದ ‘ತಮ್ಮದೆಂಬ’ ಪ್ರತಿಪಾದನೆ

6
ಗೋಕರ್ಣ ದೇಗುಲ ಹಸ್ತಾಂತರ: ಹೈಕೋರ್ಟ್ ಆದೇಶದ ಕುರಿತು ಪ್ರಧಾನ ಅರ್ಚಕರ ಪ್ರತಿಕ್ರಿಯೆ

ಹೋರಾಟಕ್ಕೆ ಹಾದಿಯಾದ ‘ತಮ್ಮದೆಂಬ’ ಪ್ರತಿಪಾದನೆ

Published:
Updated:
Deccan Herald

ಗೋಕರ್ಣ:  ‘ಸಾರ್ವಜನಿಕವಾಗಿದ್ದ ದೇವಸ್ಥಾನವನ್ನು, ತಮ್ಮ ಆಳ್ವಿಕೆಗೆ ಒಳಪಟ್ಟಿದ್ದು ಎಂದು ರಾಮಚಂದ್ರಾಪುರ ಮಠವು ಪ್ರತಿಪಾದಿಸಿದ್ದೇ ನಾವು ಹೋರಾಟದ ಹಾದಿ ತುಳಿಯಲು ಕಾರಣವಾಯಿತು...’

ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ರದ್ದುಪಡಿಸಿ, ಹೈಕೋರ್ಟ್ ನೀಡಿದ ಆದೇಶದ ಸಂಬಂಧ ದೇವಸ್ಥಾನದ ಪ್ರಧಾನ ಅರ್ಚಕ ಗಜಾನನ ಕೃಷ್ಣ ಹಿರೇ ‘ಪ್ರಜಾವಾಣಿ’ ಜತೆ ಶನಿವಾರ ಹೀಗೆ ಮಾತು ಆರಂಭಿಸಿದರು.

‘ಗೋಕರ್ಣ ದೇವಸ್ಥಾನವು ಖಾಸಗಿಯವರಿಗೆ ಸೇರಿರಲಿಲ್ಲ ಮತ್ತು ಸೇರಲು ಸಾಧ್ಯವೂ ಇಲ್ಲ. 2008ರಲ್ಲಿ ಮಠಕ್ಕೆ ಹಸ್ತಾಂತರಿಸುವ ಮೊದಲು ಯಾವುದೇ ಮಠಗಳ ಮಠಾಧೀಶರು ಯಾರದೇ ಪೂರ್ವಾನುಮತಿಯಿಲ್ಲದೇ ದೇವಸ್ಥಾನಕ್ಕೆ ಬರಲು ಅವಕಾಶವಿತ್ತು. ಆದರೆ, ನಂತರ ಶೃಂಗೇರಿಯೂ ಸೇರಿದಂತೆ ಎಲ್ಲ ಮಠಗಳೂ ರಾಮಚಂದ್ರಾಪುರ ಮಠದ ಅನುಮತಿ ಪಡೆಯುವುದು ಅನಿವಾರ್ಯವಾಯಿತು. ಇದರ ವಿರುದ್ಧ ಸುದೀರ್ಘ 10 ವರ್ಷಗಳ ಕಾನೂನು ಹೋರಾಟ ಮಾಡಿದೆವು’ ಎಂದು ಅವರು ಹೇಳಿದರು.

‘ದೇವಸ್ಥಾನದಲ್ಲಿ ಮಹಾಪೂಜೆಯನ್ನು ಹಿರೇ ಮತ್ತು ಅಡಿ ಎಂಬ ಎರಡು ಕುಟುಂಬದವರು ಮಾತ್ರ ಮಾಡುವುದು ಮಯೂರವರ್ಮನ ಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯ. ಆದರೆ, ರಾಮಚಂದ್ರಾಪುರ ಮಠದ ಆಡಳಿತದಲ್ಲಿ ಯಾರು ಬೇಕಾದರೂ ಪೂಜೆ ಮಾಡಲು ಅವಕಾಶ ನೀಡಲಾಯಿತು. ಇದು ನಮಗೆ ದೊಡ್ಡ ಆಘಾತವಾಗಿತ್ತು. ಈ ಮೂಲಕ ಹಿಂದಿನಿಂದಲೂ ಬಂದ ಸಂಪ್ರದಾಯವನ್ನು ಅವರು ಮುರಿದರು. ಇದರ ವಿರುದ್ಧ 2008ರ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಯಿತು’ ಎಂದು ಅವರು ನೆನಪಿಸಿಕೊಂಡರು.

‘ಈ ದೇವಸ್ಥಾನದಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೇ ಉಪಾಧಿವಂತರು ಭಕ್ತರಿಗೆ ದೇವರ ಸೇವೆ ಮಾಡಿಸುತ್ತಿದ್ದರು. ಮಠದ ಆಡಳಿತದ ಅವಧಿಯಲ್ಲಿ ಅರ್ಚನೆ, ವಿವಿಧ ಪೂಜೆಗಳ ಶುಲ್ಕವನ್ನು 10 ಪಟ್ಟು ಹೆಚ್ಚಿಸಲಾಯಿತು. ಇದರ ಮೂಲಕವೂ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಯಿತು. ಈ ಎಲ್ಲ ಅಂಶಗಳನ್ನು ವಿರೋಧಿಸಿ 50ಕ್ಕೂ ಹೆಚ್ಚು ಮಂದಿ ನ್ಯಾಯಾಲಯದ ಮೊರೆ ಹೋದೆವು’ ಎಂದು ಹೇಳಿದರು.

ದೇವಸ್ಥಾನದ ಆಡಳಿತ ಹಸ್ತಾಂತರ ಕುರಿತು ಹೈಕೋರ್ಟ್ ನೀಡಿದ ತೀರ್ಪು, ಸಾಮಾನ್ಯ ಭಕ್ತರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಶನಿವಾರ ಅಮಾವಾಸ್ಯೆಯೂ ಆಗಿದ್ದ ಕಾರಣ ಭಕ್ತರ ಸಂಖ್ಯೆ ಎಂದಿಗಿಂತಲೂ ಸ್ವಲ್ಪ ಜಾಸ್ತಿಯಿದ್ದುದು ಕಂಡುಬಂತು.

‘ವಿಡಿಯೊ ಚಿತ್ರೀಕರಣ ಮಾಡಿರಲಿಲ್ಲ’

ದೇವಸ್ಥಾನವನ್ನು 2008ರ ಆಗಸ್ಟ್ 12ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದರು. ಈ ಪ್ರಕ್ರಿಯೆ ಆರಂಭಿಸುವ ಮೊದಲು ಸರ್ಕಾರವು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಯಿಂದ ವರದಿ ತೆಗೆದುಕೊಂಡಿರಲಿಲ್ಲ. ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ಮಾಡಿದ ಒಂದು ದೂರವಾಣಿ ಕರೆಯನ್ನೇ ಆಧರಿಸಿ ಮುಜರಾಯಿ ಇಲಾಖೆಯಿಂದ ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸಲಾಯಿತು. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ವಿಡಿಯೊ ಚಿತ್ರೀಕರಣ ಮಾಡಲಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ ಎಂದು ಗಜಾನನ ಕೃಷ್ಣ ಹಿರೇ ದೂರಿದ್ದಾರೆ.

‘ಆಸ್ತಿ ಪರಿಶೀಲನೆ ಮಾಡಲಾಗುವುದು’

ದೇವಸ್ಥಾನದ ಚರ ಮತ್ತು ಸ್ಥಿರ ಆಸ್ತಿಗಳನ್ನು ಪರಿಶೀಲನೆ ಮಾಡಬೇಕಿದೆ. ಅದಕ್ಕಾಗಿ ಕಂದಾಯ ಇಲಾಖೆ ಅಧಿಕಾರಿ, ದೇವಸ್ಥಾನದ ದೈನಂದಿನ ಆದಾಯ, ಖರ್ಚಿನ ಲೆಕ್ಕಾಚಾರ ಮಾಡಲು ಲೆಕ್ಕ ಪರಿಶೋಧಕರನ್ನು ನೇಮಿಸಲಾಗುವುದು. ಈ ಎಲ್ಲ ಪ್ರಕ್ರಿಯೆಗಳ ವಿಡಿಯೊ ಚಿತ್ರೀಕರಣ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಉಳಿದಂತೆ ಆಡಳಿತದ ಹಸ್ತಾಂತರ ಕುರಿತು ನ್ಯಾಯಾಲಯದ ಆದೇಶ ಕೈಸೇರಿದ ಬಳಿಕವೇ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು. ಕುಮಟಾ ಉಪ ವಿಭಾಗಾಧಿಕಾರಿ ಲಕ್ಷ್ಮೀಪ್ರಿಯಾ ಕೂಡ ಇದೇ ರೀತಿ ಪ್ರತಿಕ್ರಿಯಿಸಿದರು.

‘ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ’

ರಾಮಚಂದ್ರಾಪುರ ಮಠವು ದೇವಸ್ಥಾನವನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಬಳಿಕ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಕುಮಟಾ ತಾಲ್ಲೂಕು ಪಂಚಾಯ್ತಿ ಸದಸ್ಯ ಮಹೇಶ್ ಶೆಟ್ಟಿ ಹೇಳುತ್ತಾರೆ.

2008ಕ್ಕಿಂತ ಮೊದಲು ದೇವಸ್ಥಾನದ ಆಡಳಿತ ವ್ಯವಸ್ಥಿತವಾಗಿರಲಿಲ್ಲ. ಈಗ ಪಾರದರ್ಶಕತೆ ಬಂದಿದೆ. ದೇಗುಲದ ಸುತ್ತಮುತ್ತ ನೈರ್ಮಲ್ಯ, ಭಕ್ತರಿಗೆ ಎರಡು ಹೊತ್ತು ಅನ್ನ ಸಂತರ್ಪಣೆ ಮಾಡಲಾಗುತ್ತಿದೆ. 3–4 ವರ್ಷಗಳಿಂದ ಎಲ್ಲ ಧರ್ಮಗಳ ಸುಮಾರು 700 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಇದಕ್ಕೆ ಸುಮಾರು ₹ 20 ಲಕ್ಷ ವ್ಯಯಿಸಲಾಗುತ್ತಿದೆ. ಒಟ್ಟಿನಲ್ಲಿ ಮಠದ ಆಡಳಿತದಲ್ಲಿ ಕ್ಷೇತ್ರದ ಅಭಿವೃದ್ಧಿಯಾಗಿದೆ ಎನ್ನುತ್ತಾರೆ ಅವರು.

 

* ನ್ಯಾಯಾಲಯದ ಆದೇಶದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಗೋಕರ್ಣ ಧಾರ್ಮಿಕ ಕ್ಷೇತ್ರ. ಪಿತೃ ಕಾರ್ಯ ಮಾಡಲು ಇಲ್ಲಿಗೆ ಬಂದಿದ್ದೇನೆ

   -ಯಶವಂತ ಕುಮಾರ, ಮೈಸೂರು          

* ಗೋಕರ್ಣ ದೇವಸ್ಥಾನವನ್ನು ಖಾಸಗಿ ಒಡೆತನದಿಂದ ತಪ್ಪಿಸಿ ಮುಜರಾಯಿ ಇಲಾಖೆಗೆ ಒಪ್ಪಿಸುವಂತೆ ನೀಡಿದ ಆದೇಶ ಸಂತೋಷ ತಂದಿದೆ
     -ಅರುಣ ನಾಯ್ಕ ತದಡ,  ದೇವಸ್ಥಾನ ಭಕ್ತ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !