ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯಬಲ್ ಕಂಪೆನಿ ಕಾರ್ಮಿಕರ ಪ್ರತಿಭಟನೆ

ಕನಿಷ್ಠ ವೇತನ ನೀಡಲು ಒತ್ತಾಯ
Last Updated 2 ಮಾರ್ಚ್ 2020, 15:46 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ಧಾರೇಶ್ವರದ ರಿಲಯಬಲ್ ಕ್ಯಾಶ್ಯೂ ಕಂಪನಿಗೆ ಮಾಲೀಕರು ಏಕಾಏಕಿ ಬೀಗ ಹಾಕಿರುವುದನ್ನು ಖಂಡಿಸಿ, ಕಂಪನಿಯ ನೂರಾರು ಕಾರ್ಮಿಕರು ಉ.ಕ. ಜಿಲ್ಲಾ ಕ್ಯಾಶ್ಯೂ ಇಂಡಸ್ಟ್ರೀಸ್ ಎಂಪ್ಲಾಯಿಸ್ ಯೂನಿಯನ್, ಸಿಐಟಿಯು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದೊಂದಿಗೆ ಸೋಮವಾರ ಉಪವಿಭಾಗಾಧಿಕಾರಿ ಎದುರು ಪ್ರತಿಭಟನೆ ನಡೆಸಿದರು.

ಕಳೆದ ಹತ್ತು ವರ್ಷಗಳಿಂದ ಕಂಪನಿಯಲ್ಲಿ ನೂರಾರು ಕಾರ್ಮಿಕರು ಕನಿಷ್ಠ ವೇತನ ಪಡೆದು ದುಡಿಯುತ್ತಿದ್ದಾರೆ. ಇತ್ತೀಚೆಗೆ ಏಕಾಏಕಿ ಕಂಪನಿಗೆ ಬೀಗ ಜಡಿದ ಮಾಲೀಕರು, ಕಾರ್ಮಿಕರನ್ನು ಉದ್ಯೋಗದಿಂದ ಕಿತ್ತುಹಾಕುವ ಮೂಲಕ ಬೀದಿಗೆ ತಳ್ಳಿದ್ದಾರೆ. ಕಂಪನಿಯಲ್ಲಿ ಶೇ 90ರಷ್ಟು ಮಹಿಳಾ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರಿಂದ ಕೆಲಸ ತೆಗೆದುಕೊಂಡ ಮಾಲೀಕರು, ಕನಿಷ್ಠ ಸೌಲಭ್ಯಗಳನ್ನೂ ನೀಡಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿದ ಕಾರ್ಮಿಕರು ಕನಿಷ್ಠ ಕೂಲಿ ನೀಡುವಂತೆ ಮನವಿ ಮಾಡಿದರೂ ಆಡಳಿತ ವರ್ಗ ಕಠಿಣ ಧೋರಣೆ ಬದಲಿಸಲಿಲ್ಲ. ಕೆಲ ತಿಂಗಳ ಹಿಂದೆ ಕಾರ್ಮಿಕ ಇಲಾಖೆ ನಡೆಸಿದ ಸಂಧಾನದಿಂದ ಅಲ್ಪ ಸಮಯಕ್ಕಾಗಿ ಕಂಪನಿಯನ್ನು ಪುನರಾರಂಭಿಸಿ ಈಗ ಮತ್ತೆ ಬಂದ್ ಮಾಡಲಾಗಿದೆ. 15 ಕಾರ್ಮಿಕ ಮುಖಂಡರನ್ನು ಕಂಪನಿ ಅಮಾನತು ಮಾಡಿರುವುದನ್ನು ವಾಪಸು ಪಡೆದು, ಕನಿಷ್ಠ ವೇತನ ನೀಡಬೇಕು' ಎಂದು ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ‘ಕ್ಯಾಶ್ಯೂ ಕಂಪನಿ ಆರಂಭಿಸುವಾಗ ಮಾಲೀಕರು ಕಾರ್ಮಿಕರ ಮನೆ ಮನೆಗೆ ತೆರಳಿ, ವಿವಿಧ ಸೌಲಭ್ಯಗಳ ಆಮಿಷಗಳನ್ನೊಡ್ಡಿ ಕೆಲಸಕ್ಕೆ ಸೆರಿಸಿಕೊಂಡಿದ್ದರು. ಕಾರ್ಮಿಕರ ಶ್ರಮದಿಂದ ಬೆಳೆದ ಮಾಲೀಕರು ಈಗ ಕಂಪನಿ ಮುಚ್ಚಿ ಮಹಿಳಾ ಕಾರ್ಮಿಕರನ್ನು ಬೀದಿಗೆ ತಳ್ಳಿದ್ದಾರೆ. ಕಾರ್ಮಿಕರಿಗೆ ಸ್ಪಂದಿಸದಿದ್ದರೆ ಕಾನೂನಾತ್ಮಕ ಉಗ್ರ ಹೋರಾಟ ನಡೆಸಬೇಕಾಗುತ್ತದೆ' ಎಂದರು. ಸಿಐಟಿಯು ರಾಜ್ಯ ಉಪಾಧ್ಯಕ್ಷ ಹರೀಶ ನಾಯ್ಕ, ಕಾರ್ಮಿಕ ಮುಖಂಡ ತಿಲಕ ಗೌಡ, ವೀಣಾ ನಾಯಕ ತಲಗೇರಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT