ಭಾನುವಾರ, ನವೆಂಬರ್ 17, 2019
21 °C
ಪ್ರಯಾಣಿಕನ ಮೇಲೆ ರಾಜ್ಯ ರಸ್ತೆ ಸಾರಿಗೆ ಇಲಾಖೆ ಸಿಬ್ಬಂದಿಯಿಂದ ಹಲ್ಲೆಗೆ ಖಂಡನೆ

ಬಸ್ ಸಂಚಾರ ತಡೆದು ಪ್ರತಿಭಟನೆ

Published:
Updated:
Prajavani

ಯಲ್ಲಾಪುರ: ಅನಾರೋಗ್ಯ ಪೀಡಿತ ಬಸ್ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿ, ಪೊಲೀಸ್ ಠಾಣೆಗೆ ಎಳೆದೊಯ್ದ ಪ್ರಕರಣವನ್ನು ಖಂಡಿಸಿ ಪಟ್ಟಣದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದರು.

ಸುಮಾರು ಎರಡು ಗಂಟೆ ಬಸ್‌ಗಳ ಸಂಚಾರವನ್ನು ತಡೆಯಲಾಯಿತು. ತಾಲ್ಲೂಕು ಹವ್ಯಕ ಸಂಘ, ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ವಿವಿಧ ಸಂಘಗಳು ಬೆಂಬಲ ಸೂಚಿಸಿದ್ದವು. ಚಾಲಕ ಮತ್ತು ನಿರ್ವಾಹಕರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಾರಿಗೆ ಸಂಸ್ಥೆಯ ಬಸ್ ಚಾಲಕ ಎಂ.ಎ.ಬಿರಾದಾರ್ ಮತ್ತು ನಿರ್ವಾಹಕ ಎಂ.ಎಚ್.ಮಾಯಣ್ಣನವರ್, ಶಿಕ್ಷಣ ಇಲಾಖೆಯ ನೌಕರರೊಬ್ಬರು ಶುಕ್ರವಾರ ಬಸ್ ಹತ್ತಲು ಬಂದಾಗ ತಡೆದಿದ್ದರು. ಇದನ್ನು ಪ್ರಶ್ನಿಸಿದಾಗ, ಅವರ ಮೇಲೆ ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಅಮಾನವೀಯವಾಗಿ ಎಳೆದೊಯ್ದಿದ್ದರು ಎಂದು ದೂರಲಾಗಿದೆ.

ಈ ಬಗ್ಗೆ ಘಟಕ ವ್ಯವಸ್ಥಾಪಕ ಸಿ.ವಿ.ಇಟಗಿ ಪ್ರತಿಕ್ರಯಿಸಿ, ‘ಇಬ್ಬರ ಮೇಲೂ ಸೂಕ್ತ ಕ್ರಮ ಕೈಗೊಳ್ಳಲು ನಾಲ್ಕು ದಿನ ಕಾಲಾವಕಾಶ ನೀಡಬೇಕು. ನಂತರ ಕೈಗೊಳ್ಳಲಾದ ಕ್ರಮದ ಕುರಿತು ಲಿಖಿತವಾಗಿ ತಿಳಿಸಲಾಗುವುದು’ ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನಡೆದ ಪ್ರತಿಭಟನೆಯ ಕಾರಣ ಗ್ರಾಮೀಣ ಭಾಗದ ಅನೇಕ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ರೈತ ಮುಖಂಡ ಪಿ.ಜಿ.ಭಟ್ಟ ಬರಗದ್ದೆ, ತಾಲ್ಲೂಕು ಹವ್ಯಕ ನೌಕರರ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಹವ್ಯಕ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಡಿ.ಎನ್.ಗಾಂವ್ಕರ, ಸಾಮಾಜಿಕ ಕಾರ್ಯಕರ್ತರಾದ ಡಾ.ರವಿ ಭಟ್ಟ, ದ್ಯಾಮಣ್ಣ ಬೋವಿವಡ್ಡರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

‘ನನಗೂ ಮಾಹಿತಿ ನೀಡಿರಲಿಲ್ಲ’: ‘ಬಸ್ ನಿಲ್ದಾಣದಲ್ಲಿ ಶುಕ್ರವಾರ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿ, ದೂರು ನೀಡಲು ಎಳೆದುಕೊಂಡು ಹೋದ ಘಟನೆಯ ಕುರಿತು ನಿಲ್ದಾಣದ ನಿರ್ವಾಹಕರಿಗೂ ಮತ್ತು ನನಗೂ ಸಿಬ್ಬಂದಿ ಮಾಹಿತಿ ನೀಡಿಲ್ಲ. ಹೀಗೆ ಯಾವುದೇ ಮಾಹಿತಿ ನೀಡದೇ ಕಾನೂನು ಮೀರಿ ದೂರು ಕೊಡಲು ಪೊಲೀಸ್ ಠಾಣೆಗೆ ಹೋಗಿದ್ದು ತಪ್ಪು’ ಎಂದು ಘಟಕ ವ್ಯವಸ್ಥಾಪಕ ಸಿ.ವಿ.ಇಟಗಿ ತಿಳಿಸಿದ್ದಾರೆ.

‘ವಾಸ್ತವದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೇ ನಮ್ಮ ನೌಕರರು ಪೊಲೀಸರಿಗೆ ದೂರು ನೀಡುವಂತಿಲ್ಲ. ಆದ್ದರಿಂದ ಅವರು ಮಾಡಿದ ತಪ್ಪಿಗೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಚಾಲಕ, ನಿರ್ವಾಹಕರಿಗೆ ನೋಟಿಸ್ ಜಾರಿ ಮಾಡಿದ್ದು, ಘಟನೆಯ ವಿವರಗಳನ್ನು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)