ಭಾನುವಾರ, ಜೂನ್ 13, 2021
26 °C
ಲಾಕ್‌ಡೌನ್ ಕಠಿಣ ನಿಯಮಾವಳಿ ಜಾರಿ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಅಗತ್ಯ ವಸ್ತು ಖರೀದಿಗೆ ವಾಹನದಲ್ಲಿ ಬಂದರೆ ಜಪ್ತಿ: ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಮೇ 10ರಿಂದ ಲಾಕ್‌ಡೌನ್ ಜಾರಿಯಾಗುತ್ತಿದೆ. ಈ ಅವಧಿಯಲ್ಲಿ ಅಗತ್ಯ ಸೇವೆಗಳನ್ನು ಹೊರತಾಗಿ ಮತ್ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಒಂದು ವೇಳೆ, ವಾಹನ ಸಂಚರಿಸಿದರೆ ಅವುಗಳನ್ನು ಜಪ್ತಿ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶವಿದೆ. ಆದರೆ, ವಾಹನಗಳನ್ನು ತಂದರೆ ಜಪ್ತಿ ಮಾಡಲಾಗುವುದು. ಅವುಗಳನ್ನು ಮಾಲೀಕರಿಗೆ ಕನಿಷ್ಠ ಎರಡು ತಿಂಗಳ ತನಕ ಪುನಃ ಕೊಡುವ ಸಾಧ್ಯತೆಗಳಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಸರ್ಕಾರದ ನಿಯಮಾವಳಿಯಂತೆ, ನಾಗರಿಕರು ಜೀವನಾವಶ್ಯಕ ವಸ್ತುಗಳಾದ ದಿನಸಿ, ಹಾಲು, ಹಣ್ಣು, ತರಕಾರಿ, ಮಾಂಸ, ಮೀನುಗಳನ್ನು ನಡೆದುಕೊಂಡು ಬಂದೇ ಖರೀದಿಸಬೇಕು. 10 ಗಂಟೆಯ ನಂತರ ಜೀವನೋಪಾಯದ ವಸ್ತುಗಳನ್ನು ಮನೆ ಮನೆಗೆ ತಳ್ಳು ಗಾಡಿಗಳಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಅವಕಾಶವಿದೆ’ ಎಂದು ತಿಳಿಸಿದರು.

‘ಬೇರೆ ರಾಜ್ಯಗಳು ಮತ್ತು ಬೇರೆ ಜಿಲ್ಲೆಗಳಿಂದ ಉತ್ತರ ಕನ್ನಡಕ್ಕೆ ಬರುವವರಿಗೆ ಕ್ವಾರಂಟೈನ್ ಮುದ್ರೆ ಹಾಕಲಾಗುವುದು. ಮಾಜಾಳಿ ಹಾಗೂ ಅನಮೋಡ ಚೆಕ್‌ಪೋಸ್ಟ್‌ಗಳಲ್ಲಿ ಮಾತ್ರ ಮೇ 10ರಿಂದ ಈ ಕ್ರಮ ಜಾರಿಯಾಗಲಿದೆ. ಕೆಲವೇ ದಿನಗಳಲ್ಲಿ ಹೋಂ ಐಸೋಲೇಶನ್ ಹಾಗೂ ಬೇರೆ ಜಿಲ್ಲೆಗಳಿಂದ ಬರುವ ಎಲ್ಲರಿಗೂ ಮುದ್ರೆ ಒತ್ತಲಾಗುವುದು’ ಎಂದು ತಿಳಿಸಿದರು.

‘ಕೋವಿಡ್ ಗುಣಲಕ್ಷಣಗಳು ಇರುವವರಿಗೆ ಮಾತ್ರ ಗಂಟಲು ದ್ರವದ ಪರೀಕ್ಷೆ ನಡೆಸಲು ಸರ್ಕಾರ ಆದೇಶಿಸಿದೆ. ಆ ಪ್ರಕಾರವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಜಿಲ್ಲೆಗೆ ಬಳ್ಳಾರಿಯಿಂದ ಆಮ್ಲಜನಕ ಸರಬರಾಜಾಗುತ್ತಿದೆ. ದಿನಕ್ಕೆ ಐದು ಕಿಲೋಲೀಟರ್‌ಗಳಷ್ಟು ನೀಡಲು ಸರ್ಕಾರ ಅವಕಾಶ ನೀಡಿದೆ. ಇದು ಜಿಲ್ಲೆಯ ಈ ಹಿಂದಿನ ಕೋವಿಡ್ 19 ಸನ್ನಿವೇಶಗಳ ಆಧಾರದಲ್ಲಿ ನಿರ್ಧಾರವಾಗಿದೆ’ ಎಂದರು.

‘ಇತ್ತೀಚೆಗೆ ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್‌ನಿಂದ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚಾಗಲಿದ್ದು, ಸರಬರಾಜಿನ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗುವುದು. ರೆಮ್‌ಡಿಸಿವರ್, ಲಸಿಕೆ ತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಅಭಾವ ಇಲ್ಲ’ ಎಂದು ತಿಳಿಸಿದರು.

ಪ್ರತಿ ಪಟ್ಟಣಕ್ಕೆ ಚೆಕ್‌ಪೋಸ್ಟ್

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ಜಿಲ್ಲೆಯ ಗಡಿಗಳಲ್ಲಿ 19 ಕಡೆ ತಪಾಸಣಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಇದೇ ರೀತಿಯಲ್ಲಿ, ಜಿಲ್ಲೆಯ ಪ್ರತಿ ನಗರ, ಪಟ್ಟಣದ ಪ್ರವೇಶ ಪ್ರದೇಶದಲ್ಲಿ ಕೂಡ ಚೆಕ್‍ಪೋಸ್ಟ್ ತೆರೆಯಲಾಗಿದೆ. ಜಿಲ್ಲೆಯಾದ್ಯಂತ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದರು.

****

ಜಿಲ್ಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ಮದುವೆಗಳನ್ನು ಮನೆಗಳಲ್ಲೇ ಮಾಡಲು ಅವಕಾಶವಿದೆ. ಸರ್ಕಾರ ತಿಳಿಸಿದಂತೆ, ಪಾಸ್ ಹೊಂದಿರುವ 40 ಜನ ಮಾತ್ರ ಸೇರಬಹುದು.

– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು