ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು, ಕಡಲತೀರದಲ್ಲಿ ‘ಅಪ್ಪು’ ಹೆಜ್ಜೆ ಗುರುತು: ಉತ್ತರ ಕನ್ನಡದೊಂದಿಗೆ ವಿಶೇಷ ನಂಟು

Last Updated 29 ಅಕ್ಟೋಬರ್ 2021, 13:54 IST
ಅಕ್ಷರ ಗಾತ್ರ

ಕಾರವಾರ: ನಟ ಪುನೀತ್ ರಾಜಕುಮಾರ್ ಉತ್ತರ ಕನ್ನಡದೊಂದಿಗೆ ವಿಶೇಷ ನಂಟು ಹೊಂದಿದ್ದರು. ಜೊಯಿಡಾದ ಕಾಡು ಸುತ್ತಾಡಿದ್ದರು. ಬುಡಕಟ್ಟು ಜನರ ಮನೆಯಂಗಳದಲ್ಲಿ ನೆಲದಲ್ಲಿ ಕುಳಿತು ಊಟ ಮಾಡಿದ್ದರು. ಸಮುದ್ರದಲ್ಲಿ ಹಿಂದಕ್ಕೆ ಜಿಗಿದು ಸಾಹಸ ಮಾಡಿ ಅಚ್ಚರಿ ಮೂಡಿಸಿದ್ದರು.

ನಟನ ಸರಳತೆ, ಚುರುಕುತನ, ಜಿಲ್ಲೆಯ ಬಗ್ಗೆಯ ಅಭಿಮಾನವನ್ನು ಕಂಡವರು, ‘ಅಪ್ಪು’ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗದೇ ಕಣ್ಣೀರಿಡುತ್ತಿದ್ದಾರೆ.

ಪುನೀತ್, ಕಳೆದ ವರ್ಷ ನವೆಂಬರ್ ಮೊದಲ ವಾರದಲ್ಲಿ ಸಾಕ್ಷ್ಯಚಿತ್ರವೊಂದರ ಚಿತ್ರೀಕರಣಕ್ಕೆಂದು ಜೊಯಿಡಾಕ್ಕೆ ಬಂದಿದ್ದರು. ಕಾರ್ಟೋಳಿ ಹಾಗೂ ಪಾತಾಗುಡಿ ಗುಡ್ಡವನ್ನು ಏರಿ ಪ್ರಕೃತಿ ಸೌಂದರ್ಯವನ್ನು ಸವಿದಿದ್ದರು. ಕಾಳಿ ನದಿ ಉಗಮ ಸ್ಥಾನ ಡಿಗ್ಗಿಯಲ್ಲಿರುವ ಗ್ರಾಮ ದೇವತೆ ಚಾಪಲಾದೇವಿ ದೇಗುಲಕ್ಕೆ ಭೇಟಿ ನೀಡಿದ್ದರು.

ಚಿತ್ರೀಕರಣದ ಬಳಿಕ ಮಧ್ಯಾಹ್ನದ ಊಟವನ್ನು ಪಾತಾಗುಡಿ, ಡೇರಿಯಾದಲ್ಲಿ ಗ್ರಾಮಸ್ಥರ ಮನೆಯಂಗಳದಲ್ಲೇ ಮಾಡಿದ್ದರು. ನೆಲದ ಮೇಲೆ ಕುಳಿತು ಬಾಳೆಎಲೆಯಲ್ಲಿ ಮನೆ ಊಟ ಸವಿದು ಮೆಚ್ಚಿಕೊಂಡಿದ್ದರು. ಎದುರು ಸಿಕ್ಕಿದ್ದ ಅಭಿಮಾನಿಗಳಿಗೂ ಮುಗುಳ್ನಗುತ್ತ ‘ಸೆಲ್ಫಿ’ಗೆ, ಫೋಟೊಗೆ ಅವಕಾಶ ಮಾಡಿಕೊಟಿದ್ದರು. ಜೊಯಿಡಾಕ್ಕೆ ಬಂದಾಗ ಅಭಿಮಾನಿ ವೃದ್ಧೆ ಕರಿಯವ್ವ ಎಂಬುವವರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿದ್ದರು.

ಕರಾವಳಿಯ ಗೋಕರ್ಣ, ಕುಮಟಾ, ಮುರುಡೇಶ್ವರದಲ್ಲೂ ಪುನೀತ್ ಸಂಚರಿಸಿದ್ದಾರೆ. ಗೋಕರ್ಣ ದೇಗುಲದಲ್ಲಿ ಪೂಜೆ ಸಲ್ಲಿಸಿ, ಕಡಲತೀರದಲ್ಲಿ ಹೆಜ್ಜೆ ಹಾಕಿದ್ದರು.

‘ಬ್ಯಾಕ್ ಫ್ಲಿಪ್’ ಸಾಹಸ:ಈ ವರ್ಷ ಫೆ.7ರಂದು ಮುರುಡೇಶ್ವರಕ್ಕೆ ಭೇಟಿ ನೀಡಿದ್ದ ಪುನೀತ್, ಸಮುದ್ರದ ಮಧ್ಯೆ ಇರುವ ನೇತ್ರಾಣಿ ನಡುಗಡ್ಡೆ ಬಳಿ ಸ್ಕೂಬಾ ಡೈವಿಂಗ್ ಮಾಡಿದ್ದರು. ದೋಣಿಯಿಂದ ಸಮುದ್ರಕ್ಕೆ ‘ಬ್ಯಾಕ್ ಫ್ಲಿಪ್’ ಮಾಡಿ ಅಚ್ಚರಿ ಮೂಡಿಸಿದ್ದರು. ಅವರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುರುರಾಜ್ ಎಂಬುವವರ ಮದುವೆಗೆ ಕುಮಟಾಕ್ಕೆ ಬಂದಿದ್ದರು.

ಹೀಗೆ ಹಲವು ಸಂದರ್ಭಗಳಲ್ಲಿ ಉತ್ತರ ಕನ್ನಡಕ್ಕೆ ಭೇಟಿ ನೀಡಿದ್ದ ಪುನೀತ್ ಅವರ ಅಕಾಲಿಕ ನಿರ್ಗಮನದಿಂದ, ಜಿಲ್ಲೆಯ ಸಾವಿರಾರು ಅಭಿಮಾನಿಗಳು ದುಃಖಿತರಾಗಿದ್ದಾರೆ.

ಸಾಕ್ಷ್ಯಚಿತ್ರದ ಕುತೂಹಲ:ಜೊಯಿಡಾದ ಕಾಡು ಮತ್ತು ಕರಾವಳಿಯ ವಿವಿಧೆಡೆ ಚಿತ್ರೀಕರಿಸಲಾದ ಸಾಕ್ಷ್ಯಚಿತ್ರವು ನ.1ರಂದು ಬಿಡುಗಡೆಯಾಗುವ ಬಗ್ಗೆ ಪುನೀತ್, ಅ.27ರಂದು ಸಾಮಾಜಿಕ ಜಾಲತಾಣಗಳ ತಮ್ಮ ಖಾತೆಗಳಲ್ಲಿ ಬರೆದುಕೊಂಡಿದ್ದರು. ಇದು ಸಾಕಷ್ಟು ಕುತೂಹಲ ಮೂಡಿಸಿತ್ತು.

‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಬರೆದು ಸ್ಕೂಬಾ ಡೈವಿಂಗ್ ಮಾಡಿದ ಚಿತ್ರವನ್ನು ಅಪ್‌ಲೋಡ್ ಮಾಡಿದ್ದರು.

***

ಪುನೀತ್ ತುಂಬ ಸರಳ, ಸಜ್ಜನ. ಅವರಿಗೆ ಉತ್ತರ ಕನ್ನಡದ ಪ್ರಕೃತಿ ತುಂಬ ಇಷ್ಟವಾಗಿತ್ತು. ಬುಡಕಟ್ಟು ಜನರ ಅಭಿವೃದ್ಧಿಗೆ ಕೆಲಸ ಮಾಡುವ ಬಯಕೆ ವ್ಯಕ್ತಪಡಿಸಿದ್ದರು.
–ನರಸಿಂಹ ಚಾಪಖಂಡ‌, ಜೊಯಿಡಾ, ಕಾಡುಮನೆ ಹೋಂ ಸ್ಟೇ ಮಾಲೀಕ

***

ಕರಾವಳಿಯಲ್ಲಿ ಪುನೀತ್‌ ಅವರಿಗೆ ಹೆಚ್ಚು ಅಭಿಮಾನಿಗಳಿದ್ದಾರೆ. ಅವರ ಸಜ್ಜನಿಕೆಯೇ ಅದಕ್ಕೆ ಕಾರಣ. ಅವರಿಗೆ ಸ್ಕೂಬಾ ಡೈವಿಂಗ್ ಮಾಡಿಸಿದ ಕ್ಷಣಗಳು ಸದಾ ಸ್ಮರಣೀಯ.
–ಗಣೇಶ ಹರಿಕಂತ್ರ, ಮಾಲೀಕ, ನೇತ್ರಾಣಿ ಅಡ್ವೆಂಚರ್ಸ್, ಮುರುಡೇಶ್ವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT