ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ‘ಭೀಮಕೋಲ್’ ಕೆರೆಗೆ ಕಾಯಕಲ್ಪದ ಭಾಗ್ಯ

ಕಾರವಾರ ತಾಲ್ಲೂಕಿನ ಹಣಕೋಣ ಗ್ರಾಮದ ವಿಶಾಲವಾದ, ಆಕರ್ಷಕ ಜಲಮೂಲ
Last Updated 30 ಮೇ 2022, 19:30 IST
ಅಕ್ಷರ ಗಾತ್ರ

ಕಾರವಾರ: ಮುಳ್ಳು, ಕುರುಚಲು ಕಾಡು ಬೆಳೆದುಕೊಂಡು ಮರೆಯಾಗಿದ್ದ ಸುಂದರ ಪ್ರವಾಸಿ ತಾಣಕ್ಕೆ ಕೊನೆಗೂ ಮುಕ್ತಿ ಸಿಗುತ್ತಿದೆ. ಮಣ್ಣಿನ ದಾರಿಯು ಕಲ್ಲಿನ ಹಾಸು ಹೊದ್ದುಕೊಂಡು ಆಕರ್ಷಿಸುತ್ತಿದೆ.

ಹೌದು, ತಾಲ್ಲೂಕಿನ ಹಣಕೋಣ ಗ್ರಾಮದ ಭೀಮಕೋಲ್ ಕೆರೆಯ ಸ್ವರೂಪ ಬದಲಾಗುತ್ತಿದೆ. ಎತ್ತರದ ಪ್ರದೇಶದಲ್ಲಿರುವ ಈ ತಾಣವು ಪೂರ್ಣ ಪ್ರಮಾಣದ ಪ್ರವಾಸಿ ಸ್ಥಳವಾಗಿ ಕಂಗೊಳಿಸುವ ಹಂತದಲ್ಲಿದೆ. ಉದ್ಯೋಗ ಖಾತ್ರಿ ಯೋಜನೆಯು ಇದಕ್ಕೆ ನೆರವಾಗಿದೆ.

ಪಾಳು ಬಿದ್ದಿದ್ದ ಬೃಹತ್ ಕೆರೆಯ ಆವರಣದಲ್ಲಿ ಸ್ವಚ್ಛತೆಯಿರಲಿಲ್ಲ. ಇಡೀ ಪ್ರದೇಶದಲ್ಲಿ ಕುಡುಕರ ಹಾವಳಿಯಿಂದಾಗಿ ಬಿಯರ್, ಮದ್ಯದ ಬಾಟಲಿಗಳು ರಾಶಿ ಬಿದ್ದಿದ್ದವು. ಕೆರೆಯ ದಂಡೆಯ ಮೇಲೆ ವಾಯು ವಿಹಾರಕ್ಕೆ ಅನುಕೂಲವಾಗುವಂತೆ ನಿರ್ಮಿಸಲಾಗಿದ್ದ ಮಣ್ಣಿನ ದಾರಿಯಲ್ಲಿ ಮುಳ್ಳಿನ ಗಿಡಗಳು ಬೆಳೆದಿದ್ದವು. ಹಾಗಾಗಿ ಯಾರಾದರೂ ಒಂದಷ್ಟು ಸಮಯ ಕಳೆಯಲು ಇಲ್ಲಿಗೆ ಬಂದರೆ ನಿರಾಸೆಯಿಂದ ವಾಪಸಾಗುವ ಹಾಗಿತ್ತು.

ಕೆರೆಯನ್ನು ದುರಸ್ತಿ ಮಾಡುವಂತೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ, ಜನ‍ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು. ಜಲಮೂಲದ ದುರವಸ್ಥೆಯ ಬಗ್ಗೆ 2021ರ ಜುಲೈ 13ರಂದು ‘ಪ್ರಜಾವಾಣಿ’ಯಲ್ಲಿ ‘ಕಾಯಕಲ್ಪಕ್ಕೆ ಕಾದಿದೆ ಭೀಮಕೋಲ್ ಕೆರೆ’ ಎಂಬ ವಿಸ್ತೃತವಾದ ಸುದ್ದಿ ಪ್ರಕಟವಾಗಿತ್ತು.

ಕೆರೆಯನ್ನು ಉದ್ಯೋಗ ಖಾತ್ರಿಯಡಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಜಿಲ್ಲಾ ಪಂಚಾಯಿತಿ ನಿರ್ಧರಿಸಿತು. ಇದಕ್ಕಾಗಿ 15ನೇ ಹಣಕಾಸು ಯೋಜನೆಯನ್ನೂ ಬಳಸಿಕೊಂಡು ಒಟ್ಟು ₹ 28 ಲಕ್ಷ ವೆಚ್ಚದಲ್ಲಿ ಕಾಮಗಾರಿ ಹಮ್ಮಿಕೊಳ್ಳಲಾಯಿತು.

‘ಉದ್ಯೋಗ ಖಾತ್ರಿ ಯೋಜನೆಯಡಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅವಕಾಶವಿದೆ. ಭೀಮಕೋಲ್ ಕೆರೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಮೊದಲನೇ ಹಂತದಲ್ಲಿ ಕೆರೆಯ ಮೇಲಿನ ದಾರಿಯನ್ನು ಅಭಿವೃದ್ಧಿಗೊಳಿಸಲಾಗಿದೆ. ಕೆರೆಯ ಸುತ್ತಮುತ್ತ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ. ಎರಡನೇ ಹಂತದ ಕಾಮಗಾರಿಯಲ್ಲಿ, ಕೆರೆಯ ಎಡಭಾಗದಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗುತ್ತದೆ’ ಎಂದು ಜಿಲ್ಲಾ ‍ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ ಮಾಹಿತಿ ನೀಡಿದರು.

‘ಮತ್ತಷ್ಟು ತಾಣ ಅಭಿವೃದ್ಧಿ’
‘ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಮೂರು ತಾಣಗಳ ಅಭಿವೃದ್ಧಿಗೆ ಯೋಜಿಸಲಾಗಿದೆ. ಶಿರಸಿಯ ಸಹಸ್ರಲಿಂಗ, ಬನವಾಸಿಯ ಮಧುಕೇಶ್ವರ ದೇಗುಲದ ಬಳಿಯ ತಾಣ ಹಾಗೂ ಅಂಕೋಲಾದ ಬೇಲೆಕೇರಿಯಲ್ಲಿ ಕಡಲ ಕಿನಾರೆಯಲ್ಲಿರುವ ಉದ್ಯಾನವನ್ನು ಪುನಶ್ಚೇತನಗೊಳಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ ತಿಳಿಸಿದ್ದಾರೆ.

ಕಾಲುವೆ ದುರಸ್ತಿ:ಕೆರೆಯು ಕೋಡಿ ಬಿದ್ದಾಗ, ಬೇಸಿಗೆಯಲ್ಲಿ ಕೆಳಭಾಗದ ಹೊಲಗಳಿಗೆ ನೀರು ಹರಿಯಲು ನಿರ್ಮಿಸಲಾಗಿದ್ದ ಕಾಂಕ್ರೀಟ್ ಹಾಸು ಸಂಪೂರ್ಣವಾಗಿ ಕಿತ್ತುಹೋಗಿದೆ. ಗೇಟ್‌ಗಳು ತುಕ್ಕು ಹಿಡಿದಿವೆ. ಇವುಗಳನ್ನೂ ಸಣ್ಣ ನೀರಾವರಿ ಇಲಾಖೆಯಿಂದ ದುರಸ್ತಿ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT