ಶನಿವಾರ, ಅಕ್ಟೋಬರ್ 1, 2022
20 °C

‘ಧರ್ಮ ಸಮರದಲ್ಲಿ ರಾಮಭಟರಾಗಿ ಹೋರಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಧರ್ಮ, ಅಧರ್ಮದ ಮಧ್ಯೆ, ಒಳಿತು ಕೆಡುಕಿನ ನಡುವೆ ಸಮರ ಸದಾ ಎಲ್ಲೆಡೆ ನಡೆಯುತ್ತಲೇ ಇರುತ್ತದೆ. ಧರ್ಮ– ಅಧರ್ಮದ ಸಮರದಲ್ಲಿ ನಮ್ಮ ಜಾಗವನ್ನು ಆಯ್ದುಕೊಳ್ಳಬೇಕು. ಕಗ್ಗದ ಕವಿ ಹೇಳುವಂತೆ ರಾಮಭಟನಾಗಿ ನಾವು ಕಾರ್ಯ ನಿರ್ವಹಿಸುವ ಸಂಕಲ್ಪ ಕೈಗೊಳ್ಳಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಗೋಕರ್ಣದ ಅಶೋಕೆಯಲ್ಲಿ ಹಮ್ಮಿಕೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ನಡೆದ ‘ಗುರಿಕಾರರ ಮತ್ತು ಶ್ರೀ ಕಾರ್ಯಕರ್ತರ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಧರ್ಮಕಾರ್ಯಗಳಲ್ಲಿ ಗುರಿಕಾರರು ಮಾಧ್ಯಮವಾಗಿ ಕಾರ್ಯ ನಿರ್ವಹಿಸಬೇಕು. ಗುರಿಕಾರರು ಗುರುಗಳ ನೇರ, ನೈಜ, ಆಪ್ತ ಪ್ರತಿನಿಧಿಗಳು. ಮಠದ ಎಲ್ಲ ಸೇವಾ ಕಾರ್ಯಗಳನ್ನು ಸಾಕಾರಗೊಳಿಸುವ ಹೊಣೆ ನಿಮ್ಮ ಮೇಲಿದೆ. ಸಮಸ್ತ ಸಮಾಜದ ಹೃದಯ ಗೆಲ್ಲುವ ಹೊಣೆಯಿದೆ’ ಎಂದರು.

‘ಸಮಾಜದ ಸುಖ– ದುಃಖಗಳಲ್ಲಿ ಭಾಗಿಗಳಾಗಬೇಕು. ಅವರೊಂದಿಗೆ ಬೆರೆತಾಗ ಅವರೂ ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತಾರೆ. ಕಷ್ಟಗಳು ಎದುರಾದಾಗ ಯಾರಿಗೆ ಏನು ಅಗತ್ಯವಿದೆ ಎಂದು ತಿಳಿದುಕೊಂಡು ನೆರವಾಗಬೇಕು’ ಎಂದು ಸೂಚಿಸಿದರು.

‘ಸತ್ಕಾರ್ಯಗಳು, ಪುಣ್ಯ ಕಾರ್ಯಗಳು ನಡೆಯುವಾಗ ಗುರುವಿನ ಸ್ಥಾನದಲ್ಲಿ ನಿಂತು ಕಾರ್ಯ ಸುವ್ಯವಸ್ಥಿತವಾಗಿ ನಡೆಯುವಂತೆ ಮಾಡುವವರು ನೀವು. ಅಂತೆಯೇ ಶಿಷ್ಯರನ್ನು ಸನ್ನಿಧಿಗೆ ಕರೆತಂದು ಅನುಗ್ರಹ ಕೊಡಿಸುವ ಹೊಣೆ ನಿಮ್ಮದು. ಯಾವುದೇ ಕಾರಣಕ್ಕೂ ಕರ್ತವ್ಯ ಲೋಪ ಆಗಬಾರದು’ ಎಂದು ಎಚ್ಚರಿಸಿದರು.

ಗುರಿಕಾರರ ದಿನಾಚರಣೆ:

‘ಗುರಿಕಾರರ ಸೇವೆಯನ್ನು ಗುರುತಿಸಿ ಪ್ರತಿ ವರ್ಷ ಚಾತುರ್ಮಾಸ್ಯದ ಕೊನೆಯ ಭಾನುವಾರವನ್ನು ಗುರಿಕಾರರ ದಿನವನ್ನಾಗಿ ಆಚರಿಸಲಾಗುವುದು. ಗುರಿಕಾರರ ಎಲ್ಲ ಸಂಕಷ್ಟ ಪರಿಹಾರ, ಸೌಭಾಗ್ಯ ಸಿದ್ಧಿಗಾಗಿ ಅಂದು ಅವರ ಹೆಸರಲ್ಲಿ ಸಂಕಲ್ಪ ನಡೆಸಿ ಗ್ರಹಶಾಂತಿ ನೆರವೇರಿಸಲಾಗುವುದು’ ಎಂದು ರಾಘವೇಶ್ವರ ಭಾರತಿ ಸ್ವಾಮೀಜಿ ಪ್ರಕಟಿಸಿದರು.

‘ಮಠದಿಂದ ಗುರಿಕಾರರಾಗಿ ನೇಮಿಸುವಾಗ ಸಾಂಪ್ರದಾಯಿಕವಾಗಿ ನೀಡುವ ಶ್ರೀಮುದ್ರೆಯ ಸಾಟಿ, ಸನ್ನದಿನ ಜತೆಗೆ ಸಭೆಗೆ ನೀವು ಅಲಂಕಾರವಾಗಿ ಕಾಣಬೇಕೆಂದು ಇನ್ನುಮುಂದೆ ಪೇಟವನ್ನೂ ಗುರಿಕಾರರಿಗೆ ನೀಡಲಾಗುತ್ತದೆ’ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಗುರಿಕಾರರು ಸಮಾವೇಶದಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು