ಶುಕ್ರವಾರ, ಜನವರಿ 22, 2021
25 °C
ಕಟಾವು ಮಾಡಿದ ಫಸಲಿಗೆ ಪರಿಹಾರ ನೀಡಲು ನಿಯಮದಲ್ಲಿ ಅವಕಾಶವಿಲ್ಲ

ಅಕಾಲಿಕ ಮಳೆ: ಮೊಳಕೆಯೊಡೆದ ಭತ್ತ, ಸಂಕಷ್ಟದಲ್ಲಿ ರೈತ

ನಾಗರಾಜ ಮದ್ಗುಣಿ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ವಾಯುಭಾರ ಕುಸಿತದಿಂದಾಗಿ ತಾಲ್ಲೂಕಿನಲ್ಲಿ ಒಂದು ವಾರ ಬಿದ್ದ ಅಕಾಲಿಕ ಮಳೆಯು ರೈತರಿಗೆ ಸಂಕಟ ತಂದಿಟ್ಟಿದೆ. ಭತ್ತದ ಬೆಳೆ ಕಟಾವಿನ ಹಂಗಾಮು ಪ್ರಾರಂಭವಾದಾಗಲೇ ವರ್ಷಧಾರೆಯಾಗಿದೆ. ಇದರಿಂದ ಅಪಾರ ಹಾನಿಯಾಗಿದೆ. ಕಟಾವು ಮಾಡಿದ ಫಸಲಿಗೆ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲದಿರುವುದು ರೈತರಿಗೆ ಮತ್ತಷ್ಟು ಸಮಸ್ಯೆ ಉಂಟುಮಾಡಿದೆ.

ಭತ್ತದ ಬೆಳೆ ಕಟಾವು ಮಾಡಿಕೊಂಡು ಗೊಣಬೆ ಹಾಕಿಕೊಂಡ ರೈತರ ಬೆಳೆಯು ಬಚಾವಾಗಿದೆ. ಹಲವರು ಮೊದಲ ಮಳೆಗೇ ಎಚ್ಚರಿಕೆ ವಹಿಸಿ ಪ್ಲಾಸ್ಟಿಕ್ ತಾಡಪಾಲುಗಳನ್ನು ಮುಚ್ಚಿ ರಕ್ಷಣೆ ಮಾಡಿಕೊಂಡಿದ್ದಾರೆ. ಆದರೆ, ಕಟಾವು ಮಾಡಿ ಗದ್ದೆಯಲ್ಲಿಯೇ ಬಿಟ್ಟವರಿಗೆ ನಷ್ಟವಾಗಿದೆ. ಹುಲ್ಲಿನಲ್ಲಿದ್ದ ಭತ್ತವು ಮಳೆಯಿಂದಾಗಿ ನೆಲಕ್ಕೆ ಬಿದ್ದಿದೆ. ಜೊತಗೇ ಹುಲ್ಲೂ ಹಾಳಾಗಿದೆ. ನೆಲಕ್ಕೆ ಬಿದ್ದ ಭತ್ತವು ಮೊಳಕೆ ಒಡೆದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.

ತಾಲ್ಲೂಕಿನ ಕಿರವತ್ತಿ, ಮದ್ನೂರು, ಉಮ್ಮಚಗಿ ಭಾಗದ ಬಾಳೆಗದ್ದೆ, ಮಲ್ಲಾಪುರ, ಕೋಟೆಮನೆ, ತೋಟದ ಕಲ್ಲಳ್ಳಿ, ಕಾನಗೋಡ, ತುಡುಗುಣಿ ಮೊದಲಾದ ಗ್ರಾಮಗಳಲ್ಲಿ ಭತ್ತದ ಬೆಳೆ ಹೆಚ್ಚಿದೆ. ಇಲ್ಲಿನ ರೈತರು ಬೆಳೆದ ಫಸಲಿಗೆ ತೀವ್ರ ಹಾನಿಯಾಗಿದೆ.

ಮಲ್ಲಾಪುರದ ತಿಮ್ಮಪ್ಪ ಗಣಪತಿ ಹೆಗಡೆ ಕನೇನಳ್ಳಿ ಎಂಬುವವರ ಎರಡು ಎಕರೆ ಭತ್ತದ ಫಸಲು ಕಣದಲ್ಲೇ ಮಳೆಗೆ ಸಿಲುಕಿದೆ. ಹುಲ್ಲು ಕೊಳೆತು ಹೋಗಿ 20ಕ್ಕೂ ಹೆಚ್ಚು ಚೀಲ ಭತ್ತಕ್ಕೆ ಮೊಳಕೆ ಬಂದಿದೆ. ಅದೇರೀತಿ ಸುಬ್ರಾಯ ಭಾಸ್ಕರ ಹೆಗಡೆ ಹುಣಸೆಮನೆ ಎಂಬುವವರ ಸುಮಾರು 30 ಚೀಲಗಳಷ್ಟು ಭತ್ತಕ್ಕೆ ಹಾನಿಯಾಗಿದೆ. ಕಾನಗೋಡಿನ ಪುಟ್ಟು ಗಿರಿಯಾ ಗೌಡ, ಮಂಜು ಹುಲಿಯಾ ಗೌಡ ಮೊದಲಾದವರ ಕಟಾವು ಮಾಡಿದ ಭತ್ತದ ಬೆಳೆ ಗದ್ದೆಯಲ್ಲೇ ಕೊಳೆಯುತ್ತಿದೆ.

‘ಈ ಭಾಗದ ಬಹುತೇಕ ರೈತರ ಬೆಳೆಗಳು ಹಾನಿಯಾಗಿದ್ದು, ಕೃಷಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಸರ್ಕಾರ ಪರಿಹಾರ ನೀಡಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಗ.ರಾ.ಭಟ್ಟ, ಕುಪ್ಪಯ್ಯ ಪೂಜಾರಿ, ಖೈತಾನ್ ಬಿ.ಡಿಸೋಜಾ, ಶಿವರಾಯ ಪೂಜಾರಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು