ಗುರುವಾರ , ಆಗಸ್ಟ್ 22, 2019
27 °C
ನಗರದಲ್ಲಿ ಒಂದೇ ರಾತ್ರಿ 129.7 ಮಿಲಿಮೀಟರ್ ವರ್ಷಧಾರೆ

ಕಾರವಾರದಲ್ಲಿ ಧಾರಾಕಾರ ಸುರಿದ ಮಳೆ: ಮನೆಗೆ ನುಗ್ಗಿದ ನೀರು

Published:
Updated:
Prajavani

ಕಾರವಾರ: ನಗರದಲ್ಲಿ ಭಾನುವಾರ ಸಂಜೆಯವರೆಗೆ ಮೋಡ ಹಾಗೂ ಸಾಧಾರಣ ಮಳೆಯಾಗಿತ್ತು. ಜೋರು ಮಳೆಯ ಯಾವ ಸುಳಿವನ್ನೂ ನೀಡದೇ ತಡರಾತ್ರಿ ಧಾರಾಕಾರವಾಗಿ ಸುರಿಯಿತು.

ಸುಮಾರು ಆರು ತಾಸು ನಿರಂತರವಾಗಿ ಒಂದೇ ಸಮನೆ ಭಾರಿ ವರ್ಷಧಾರೆಯಾಯಿತು. ಇದರೊಂದಿಗೆ ನಗರದ ವಿವಿಧ ಭಾಗಗಳಲ್ಲಿ ಸಂಕಷ್ಟಗಳನ್ನೂ ಸುರಿಸಿತು. ಬಾಡ, ಮಾಧವ ನಗರ, ಪದ್ಮನಾಭ ನಗರ, ಕೆಎಚ್‌ಬಿ ಕಾಲೊನಿಯ ವಿವಿಧ ಭಾಗಗಳಲ್ಲಿ ಮಳೆ ನೀರು ಅವಾಂತರ ಸೃಷ್ಟಿಸಿತು. ಮಾಧವ ನಗರದಲ್ಲಿ ಚರಂಡಿಯಲ್ಲಿ ಮಳೆ ನೀರು ಉಕ್ಕಿ ಹರಿದು ಮನೆಗಳಿಗೆ ನುಗ್ಗಿತು. 

ತಡರಾತ್ರಿ ಈ ರೀತಿ ಆದ ಕಾರಣ ನಿವಾಸಿಗಳು ಏನು ಮಾಡಬೇಕು ಎಂದು ತೋಚದೇ ಕಂಗಾಲಾದರು. ಬೆಳಿಗ್ಗೆಯವರೆಗೂ ನಿದ್ದೆಗೆಟ್ಟು ಮನೆಯಿಂದ ನೀರು ಹೊರಹಾಕಿದರು. ಸಣ್ಣ ಮಕ್ಕಳೂ ಮನೆ ಮಂದಿಯ ಜೊತೆ ಕೈ ಜೋಡಿಸಿದರು. ಪದ್ಮನಾಭ ನಗರದ ಚರಂಡಿಯಲ್ಲಿ ನೀರು ಸಮರ್ಪಕವಾಗಿ ಹರಿಯದೇ ರಸ್ತೆಯ ತುಂಬ ಸಂಗ್ರಹವಾಗಿ ಕೆರೆಯಂತಾಯಿತು. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಸಂಚರಿಸಲು ಪರದಾಡುವಂತಾಯಿತು.

ಇತ್ತ ಕೆಎಚ್‌ಬಿ ಹಳೆಯ ಮತ್ತು ಹೊಸ ಬಡಾವಣೆಗಳಲ್ಲಿ ಕೂಡ ಮಳೆ ನೀರು ಹರಿದು ಹೋಗದೇ ಸಮಸ್ಯೆಯಾಯಿತು. ಖಾಲಿ ನಿವೇಶನಗಳಿಂದ ಹರಿದುಬಂದ ನೀರು ರಸ್ತೆಯ ಹೊಂಡಗಳಲ್ಲಿ ಒಂದು ಅಡಿಯಷ್ಟು ನಿಂತಿತ್ತು. ಅದೇ ನೀರಿನಲ್ಲಿ ಶಾಲಾ ಮಕ್ಕಳು ಅನಿವಾರ್ಯವಾಗಿ ಹೆಜ್ಜೆ ಹಾಕಿದರು.

ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ನಗರಸಭೆ ಈಜುಕೊಳದ ಸಮೀಪದಲ್ಲಿ ಮರವೊಂದು ಬುಡಮೇಲಾಯಿತು. ರಸ್ತೆಯ ಮತ್ತೊಂದು ಬದಿಯಲ್ಲಿರುವ ಕಾಂಪೌಂಡ್ ಮೇಲೆ ಬಿದ್ದ ಕಾರಣ ವಾಹನ ಸಂಚಾರಕ್ಕೆ ಅಡಚಣೆಯಾಗಲಿಲ್ಲ.

ಅಸಮಾಧಾನ: ಗುರುಮಠ ಸುತ್ತಮುತ್ತವೂ ಮಳೆ ನೀರು ಸೂಕ್ತ ರೀತಿಯಲ್ಲಿ ಹರಿದು ಹೋಗುತ್ತಿಲ್ಲ. ಈ ಬಗ್ಗೆ ಸ್ಥಳೀಯ ನಿವಾಸಿ ಸಂತೋಷ ಗುರುಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹಲವು ವರ್ಷಗಳಿಂದ ಈ ಸಮಸ್ಯೆಯಿದೆ. ಅದನ್ನು ಪರಿಹರಿಸಲು ಮನವಿ, ದೂರು ನೀಡಿದ್ದರೂ ಪರಿಹಾರ ಸಿಗಲಿಲ್ಲ. ಈ ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಇರುವ ಜಾಗವನ್ನು ಮುಚ್ಚಲಾಗಿದೆ. ಅದನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ರಾಜಕಾಲುವೆಯ ಅತಿಕ್ರಮಣವನ್ನು ತೆರವು ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಅಧಿಕಾರಿಗಳ ತಂಡದಿಂದ ಪರಿಶೀಲನೆ: ಸುಂಕೇರಿಯ ಮಾಧವ ನಗರದಲ್ಲಿ ಮೂರು ಮನೆಗಳಿಗೆ ಮಳೆ ನೀರು ನುಗ್ಗಿತು. ಅವುಗಳಲ್ಲಿ ಒಂದು ಮನೆಯಲ್ಲಿ ತುಂಬು ಗರ್ಣಿಯೂ ಇದ್ದರು. ಆ ಪ್ರದೇಶಕ್ಕೆ ನಗರಸಭೆ ಅಧಿಕಾರಿಗಳ ತಂಡ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿತು. 

ಈ ಸಂಬಂಧ ಮಾಹಿತಿ ನೀಡಿದ ನಗರಸಭೆ ಆಯುಕ್ತ ಯೋಗೇಶ್ವರ್, ‘ಮಾಧವ ನಗರದಲ್ಲಿ 50 ಮೀಟರ್ ಕಾಂಕ್ರೀಟ್ ರಸ್ತೆಯಾಗಬೇಕು. ಅದಾದರೆ ಸಮಸ್ಯೆ ಬಗೆಹರಿಯುತ್ತದೆ. ಹಾಗಾಗಿ ತುರ್ತು ಕಾಮಗಾರಿ ಕೈಗೊಳ್ಳಲಾಗುವುದು. ಉಳಿದಂತೆ, ಮಳೆ ನೀರು ಹರಿಯುವ ಜಾಗದಲ್ಲಿ ಇದ್ದ ಅಡೆತಡೆಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವು ಮಾಡಲಾಗಿದೆ. ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

Post Comments (+)