ಬುಧವಾರ, ನವೆಂಬರ್ 20, 2019
21 °C
ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಸಚಿವೆ ಶಶಿಕಲಾ ಜೊಲ್ಲೆ

ನಾಡು, ನುಡಿ ಜಾಗೃತಿ ಪುಣ್ಯದ ಕೆಲಸ

Published:
Updated:
Prajavani

ಕಾರವಾರ: ‘ಕೇವಲ ಒಂದು ದಿನ ರಾಜ್ಯೋತ್ಸವ ಆಚರಿಸಿ ಸುಮ್ಮನಿರುವುದಲ್ಲ. ನಮ್ಮ ಮಕ್ಕಳಿಗೆ ನಾಡು, ನುಡಿ, ಜಲ, ಸಂಸ್ಕೃತಿಯ ಅರಿವು ಮೂಡಿಸಬೇಕಿದೆ. ಇದು ಪುಣ್ಯದ ಕೆಲಸ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ನಾಡು, ನುಡಿ ಉಳಿಸಿ, ಬೆಳೆಸುವ ಪ್ರತಿಜ್ಞೆಗೆ ಇದು ಸುಸಂದರ್ಭವಾಗಿದೆ. ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ಬೇರೆ ಬೇರೆ ಊರಿನಲ್ಲಿ ಇರುವ ಕನ್ನಡಿಗರು ತಾಯಿ ಭುವನೇಶ್ವರಿಯನ್ನು ಸ್ಮರಿಸುತ್ತಿದ್ದಾರೆ ಎಂದು ಆಲೋಚಿಸಿದಾಗಲೇ ಸಂತಸವಾಗುತ್ತದೆ’ ಎಂದು ಹೇಳಿದರು.

‘ಒಂದೆಡೆ ರಾಜ್ಯೋತ್ಸವದ ಸಂಭ್ರಮವಿದೆ. ಮತ್ತೊಂದೆಡೆ ನೆರೆ ಸಂತ್ರಸ್ತರ ಕಣ್ಣೀರು ಒರೆಸುವ ಜವಾಬ್ದಾರಿಯಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತವಾಗಿ ಕೆಲಸ ಮಾಡುತ್ತಿದೆ. ಸಂಕಷ್ಟಕ್ಕೀಡಾಗಿರುವ ಮೀನುಗಾರರಿಗೆ ಅಗತ್ಯ ಸ್ಪಂದನೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಇದೇವೇಳೆ, ಕಳೆದ ಬಜೆಟ್ ನಲ್ಲಿ ಜಿಲ್ಲಾ ಆಸ್ಪತ್ರೆಗೆ ನಿಗದಿ ಮಾಡಲಾದ ₹ 150 ಕೋಟಿ ಬಿಡುಗಡೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.

ವಿವಿಧ ಇಲಾಖೆಗಳ 13 ತುಕಡಿಗಳಿಂದ ಸಚಿವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕಚೇರಿಯಿಂದ ಪೊಲೀಸ್ ಪರೇಡ್ ಮೈದಾನದವರೆಗೆ ವಿವಿಧ ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳ ಮೆರವಣಿಗೆ ಮಾಡಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಾಡು ನುಡಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಉಪ ವಿಭಾಗಾಧಿಕಾರಿ ಪ್ರಿಯಾಂಗಾ ವೇದಿಕೆಯಲ್ಲಿದ್ದರು.

ವಿಜೇತ ತಂಡಗಳು: ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಚಿತ್ತಾಕುಲಾದ ಶಿವಾಜಿ ಪ್ರೌಢಶಾಲೆ ಮತ್ತು ಪದವಿಪೂರ್ವ ಮಹಾವಿದ್ಯಾಲಯ ಪ್ರಥಮ, ಕಾಜುಬಾಗದ ಸೇಂಟ್ ಜೋಸೆಫ್ ಪ್ರೌಢಶಾಲೆ ಹಾಗೂ ಪಿಯು ಕಾಲೇಜು ದ್ವಿತೀಯ, ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಯ ಸ್ತಬ್ಧಚಿತ್ರ ತೃತೀಯ ಬಹುಮಾನ ಗೆದ್ದುಕೊಂಡವು.

ಮೆರವಣಿಗೆಯಲ್ಲಿ ಒಟ್ಟು 17 ತಂಡಗಳು ಭಾಗವಹಿಸಿದ್ದವು.

ಪಥಸಂಚಲನದಲ್ಲಿ ಸೇಂಟ್ ಮೈಕೆಲ್ಸ್ ಪ್ರೌಢಶಾಲೆಯ ಗೈಡ್ಸ್ ತಂಡವು ಪ್ರಥಮ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 29ನೇ ಕರ್ನಾಟಕ ಎನ್‌ಸಿಸಿ ತಂಡವು ದ್ವಿತೀಯ ಹಾಗೂ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ವಸತಿ ಶಾಲೆಯ ತಂಡವು ತೃತೀಯ ಬಹುಮಾನ ತಮ್ಮದಾಗಿಸಿಕೊಂಡವು.

ಪ್ರತಿಕ್ರಿಯಿಸಿ (+)