ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತರೆತ್ತರಕ್ಕೆ ಹಾರಾಡಿದ ಕನ್ನಡ ಧ್ವಜ

ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ
Last Updated 1 ನವೆಂಬರ್ 2018, 12:18 IST
ಅಕ್ಷರ ಗಾತ್ರ

ಶಿರಸಿ: ಸಾವಿರಾರು ವಿದ್ಯಾರ್ಥಿಗಳು 400 ಉದ್ದದ ಕನ್ನಡ ಧ್ವಜ ಹಿಡಿದು ಹೆಜ್ಜೆ ಹಾಕಿದ್ದನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ಕೃಷ್ಣ ದೇವರಾಯ, ಸಂಗೊಳ್ಳಿ ರಾಯಣ್ಣನ ಬಂಡಿಚಿತ್ರಗಳು ಅವರನ್ನು ಹಿಂಬಾಲಿಸಿದವು. ಕನ್ನಡಾಂಬೆ ಅವರನ್ನು ಅನುಸರಿಸಿದಳು.

ಗುರುವಾರ ಇಲ್ಲಿ ಕಂಡುಬಂದು ಕನ್ನಡ ರಾಜ್ಯೋತ್ಸವದ ಸಂಭ್ರಮವಿದು. ರೆಡ್ ಆ್ಯಂಟ್ ಸಂಘಟನೆ ₹ 40ಸಾವಿರ ವೆಚ್ಚದಲ್ಲಿ ಸಿದ್ಧಪಡಿಸಿದ್ದ ಧ್ವಜವನ್ನು ಸುಮಾರು 1500ಕ್ಕೂ ಮಕ್ಕಳು ಹಿಡಿದರು. 14 ಶಾಲೆಗಳ ಸೇವಾದಳ ತಂಡ, 13 ಸ್ಕೌಟ್ಸ್ ಮತ್ತು ಗೈಡ್ಸ್ ತಂಡ, 11 ಸಮವಸ್ತ್ರ ತಂಡಗಳು ಶಿಸ್ತಿನ ಪಥಸಂಚಲನ ನಡೆಸಿದವು. ಮಾರಿಕಾಂಬಾ ಪ್ರೌಢಶಾಲಾ ಮೈದಾನದಿಂದ ಹೊರಟ ಮೆರವಣಿಗೆ, ಅಶ್ವಿನಿ ಸರ್ಕಲ್, ಸಿ.ಪಿ.ಬಜಾರ, ನಟರಾಜ ರಸ್ತೆ ಮಾರ್ಗವಾಗಿ ಪುನಃ ಇದೇ ಶಾಲೆಯ ಆವರಣಕ್ಕೆ ಬಂದು ಸಮಾಪ್ತಿಗೊಂಡಿತು.

ಮಾರಿಕಾಂಬಾ ಪ್ರೌಢಶಾಲೆಯ ಮಕ್ಕಳು ಪ್ರದರ್ಶಿಸಿದ ಕೃಷ್ಣ ದೇವರಾಯ ರೂಪಕ ಪ್ರಥಮ, ಎಂಇಎಸ್ ಶಾಲೆಯ ಪರಿಸರ ರಕ್ಷಣೆ ರೂಪಕ ದ್ವಿತೀಯ ಹಾಗೂ ಜೈ ಸಂತೋಷಿಮಾ ಬಾಲವಾಡಿಯ ಪುಟಾಣಿಗಳ ಸಂಗೊಳ್ಳಿ ರಾಯಣ್ಣ ಬಂಡಿಚಿತ್ರ ತೃತೀಯ ಸ್ಥಾನ ಪಡೆದವು.

ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಧ್ವಜಾರೋಹಣ ನೆರವೇರಿಸಿ, ಕನ್ನಡಾಂಬೆಯ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ‘ಭಾಷಾ ಬಳಕೆಯ ಪಾಲನೆಯಾದರೆ ಅದರ ಧನಾತ್ಮಕ ಪರಿಣಾಮ ಭಾಷೆಯ ಬೆಳವಣಿಗೆಯ ಮೇಲಾಗುತ್ತದೆ. ಮಾತೃ ಭಾಷೆಯೆಡೆ ಅಲಕ್ಷ್ಯ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಕನ್ನಡ ಬಳಸಿ, ಬೆಳೆಸುವ ಕೆಲಸ ಆಗಬೇಕು. ಪ್ರತಿ ಚಟುವಟಿಕೆಯಲ್ಲಿ ಕನ್ನಡ ಅನುರಣಿಸಬೇಕು. ಕನ್ನಡ ನೆಲದ ಸಾಧಕರನ್ನು ಸದಾ ಸ್ಮರಿಸಿಕೊಳ್ಳುವಂತೆ ಆಗಬೇಕು. ಭಾಷಾ ಬೆಳೆಯುವಿಕೆಯಲ್ಲಿ ತನ್ನದೇ ಆದ ಕೊಡುಗೆ ನೀಡಿದ ಸಾಹಿತ್ಯಗಳ ಅಧ್ಯಯನ ಹೆಚ್ಚಬೇಕು. ಅಧಿಕಾರಿ ವರ್ಗ, ಆಡಳಿತ ಕ್ಷೇತ್ರ, ಶಿಕ್ಷಕರು ಕನ್ನಡ ಬಳಕೆಗೆ ಪ್ರಾಶಸ್ತ್ಯ ನೀಡಬೇಕು’ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ದೇವಾಡಿಗ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಪ್ರೊಬೆಷನರಿ ಕೆಎಎಸ್ ಅಧಿಕಾರಿ ಅಜಯ್, ಪೌರಾಯುಕ್ತೆ ಬಿ.ಎಂ.ಅಶ್ವಿನಿ ಉಪಸ್ಥಿತರಿದ್ದರು. ವಸಂತ ಭಂಡಾರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT