ಕಾರವಾರ: ಮನೆಯೊಳಗೇ ರಂಜಾನ್ ಹಬ್ಬದ ಸಂಭ್ರಮ

ಕಾರವಾರ: ನಗರದಲ್ಲಿ ಸೋಮವಾರ ಈದ್ ಉಲ್ ಫಿತ್ರ್ ಹಬ್ಬವನ್ನು ಮುಸ್ಲಿಮರು ತಮ್ಮ ಮನೆಗಳಲ್ಲೇ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಬಾರಿ ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರಲಿಲ್ಲ.
ನಗರದ ಮಸ್ಜಿದ್ ಎ ಫುರ್ಖಾನ್ನಲ್ಲಿ ಬೆಳಿಗ್ಗೆ ಏಳು ಗಂಟೆಯಿಂದ ಆರಂಭವಾದ ಪ್ರಾರ್ಥನೆಯನ್ನು ಮನೆ ಮನೆಗಳಿಗೆ ತಲುಪಿಸಲು ತಂತ್ರಜ್ಞಾನದ ನೆರವನ್ನೂ ಪಡೆದುಕೊಳ್ಳಲಾಗಿತ್ತು. ಧರ್ಮಗುರುಗಳು ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ದೃಶ್ಯಗಳನ್ನು ಫೇಸ್ಬುಕ್ ಲೈವ್ ಮೂಲಕ ಪ್ರಸಾರ ಮಾಡಲಾಯಿತು. ಈ ಸಂದರ್ಭದಲ್ಲಿ ಕೆಲವರು ಮನೆಯಂಗಳದಲ್ಲಿ ಮುಖಗವಸು ಧರಿಸಿ ಪ್ರಾರ್ಥಿಸಿದರೆ, ಮತ್ತೆ ಹಲವರು ಮನೆಯೊಳಗೇ ಕುಟುಂಬದ ಸದಸ್ಯರೊಂದಿಗೆ ಭಾಗವಹಿಸಿದರು.
ಪ್ರತಿವರ್ಷ ಕಾಜುಬಾಗದ ಗಫೂರಿ ಜಾಮಿಯಾ ಮಸೀದಿಯಲ್ಲಿ ಸಾವಿರಾರು ಮುಸ್ಲಿಮರು ಶ್ವೇತವಸ್ತ್ರಧಾರಿಗಳಾಗಿ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಸಣ್ಣ ಮಕ್ಕಳೂ ಹೊಸ ಬಟ್ಟೆಗಳನ್ನು ಧರಿಸಿ ಪರಸ್ಪರ ಆಲಂಗಿಸಿ ಶುಭಾಶಯ ಕೋರುತ್ತಿದ್ದರು. ಅದೇರೀತಿ, ಪ್ರಾರ್ಥನೆಯ ಬಳಿಕ ಮಸೀದಿಯ ಹೊರಗೆ ಬಡವರಿಗೆ ದಾನ ನೆರವೇರಿಸುತ್ತಿದ್ದರು. ಆದರೆ, ಈ ಬಾರಿ ಅಂತಹ ದೃಶ್ಯಗಳು ಕಾಣಲಿಲ್ಲ.
ನಗರದ ಜಾಮಿಯಾ ಮಸೀದಿ, ಗ್ರಾಮೀಣ ಭಾಗದಲ್ಲಿರುವ ಸದಾಶಿವಗಡದ ಸಾವರ್ ಪೈ ದರ್ಗಾ ಮಸೀದಿ, ರಹೀಮ್ ಮಸೀದಿ ಮುಂತಾದೆಡೆ ಈ ಬಾರಿ ಹಬ್ಬದ ಸಂಭ್ರಮ ಇರಲಿಲ್ಲ. ಆದರೆ, ತಮ್ಮ ಮನೆಗಳಲ್ಲೇ ಹಬ್ಬ ಆಚರಿಸಿದ ಮುಸ್ಲಿಮರು, ಪರಸ್ಪರ ಹಬ್ಬದ ಶುಭಾಶಯ ಕೋರಿದರು. ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಿ ಮನೆ ಮಂದಿಯೆಲ್ಲ ಒಟ್ಟಾಗಿ ಸೇರಿ ಸವಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.