ಮಂಗಳವಾರ, ಜನವರಿ 26, 2021
26 °C
ಬಣ್ಣದ ಪುಡಿಗಳಲ್ಲಿ ಮೂಡಿದ ಅದ್ಭುತ ಕಲಾಕೃತಿಗಳು: ಕೊರೊನಾ ಯೋಧರಿಗೆ ವಿಶೇಷ ಗೌರವ

ಕಾರವಾರದ ‘ರಂಗೋಲಿ ಜಾತ್ರೆ’ಯ ಚಿತ್ರಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದಲ್ಲಿ ಜ.11ರಂದು ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಕೆ.ಜಿ.ಎಫ್ 2’ ಚಲನಚಿತ್ರದ ಟೀಸರ್ ಬಿಡುಗಡೆಯಾಯಿತು. ಬಾಲಕ ಅಂಬೇಡ್ಕರ್, ಸದ್ಗುರು ಜಗ್ಗಿ ವಾಸುದೇವ್, ನಾಗಸಾಧುಗಳು... ಇನ್ನೂ ಹಲವಾರು ಮಂದಿ ಅಲ್ಲಿದ್ದರು. ಅಲ್ಲಿ ‘ಕೊರೊನಾ ಯೋಧ’ರನ್ನು ವಿಶೇಷವಾಗಿ ಗುರುತಿಸಲಾಗಿತ್ತು!

ಇದು ‘ರಂಗೋಲಿ ಜಾತ್ರೆ’ ಎಂದೇ ಪ್ರಸಿದ್ಧವಾಗಿರುವ ನಗರದ ಮಾರುತಿ ದೇವಸ್ಥಾನದ ಜಾತ್ರೆಯ ಅಂಗವಾಗಿ ಕಲಾವಿದರು ರಚಿಸಿದ ಬಣ್ಣ ಬಣ್ಣದ ರಂಗೋಲಿಗಳು. ಇಲ್ಲಿನ ಮಾರುತಿ ಗಲ್ಲಿ ಹಾಗೂ ಕೆ.ಇ.ಬಿ ರಸ್ತೆಗಳ ಇಕ್ಕೆಲಗಳಲ್ಲಿರುವ ಮನೆಗಳ ಮುಂದೆ ಅದ್ಭುತವಾದ ರಂಗೋಲಿಗಳನ್ನು ಪ್ರತಿವರ್ಷ ಜಾತ್ರೆಯ ದಿನ ರಚಿಸಲಾಗುತ್ತದೆ. ಅವುಗಳಿಗೆ ಆಕರ್ಷಕ ಬಹುಮಾನಗಳೂ ಇರುತ್ತವೆ. ಇದೊಂದು ಸಂಪ್ರದಾಯವಾಗಿ ಬಂದಿದ್ದು, ಸ್ಥಳೀಯರು ಹೆಚ್ಚಿನ ಆಸಕ್ತಿ ಹೊಂದಿ ರಂಗೋಲಿಗಳಿಗೆ ‘ಜೀವ’ ತುಂಬುವ ಕೆಲಸ ಮಾಡುತ್ತಾರೆ.

ಈ ಬಾರಿ ಕೊರೊನಾದ ಹಾವಳಿ ಹೆಚ್ಚಿರುವ ಕಾರಣ, ಅದರ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು, ಪೊಲೀಸರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವವರನ್ನು ರಂಗೋಲಿಗಳಲ್ಲಿ ಮೂಡಿಸಲಾಗಿದೆ. ಜೊತೆಗೇ ಸೋಂಕಿನಿಂದ ನಿಧನರಾದ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಅಸಹಜ ಸಾವು ಕಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ರಂಗೋಲಿ ಚಿತ್ರಗಳೂ ನೈಜ ಭಾವಚಿತ್ರಗಳಂತೆ ಕಾಣುತ್ತಿವೆ. 

ಕಾರವಾರದ ನಾಗರಿಕರಿಗೆ ಚಿರಪರಿಚಿತರಾಗಿರುವ, ನಲ್ಲಿ ದುರಸ್ತಿ ಮಾಡುವ ಶೇಶು ಗೌಡ (ಚಿಪ ಗೌಡ) ಅವರ ಚಿತ್ರವೂ ಆಕರ್ಷಿಸುತ್ತಿದೆ. ಉಳಿದಂತೆ, ಆಂಜನೇಯ, ಗಣಪತಿ, ಈಶ್ವರ, ದುರ್ಗೆ, ರಾಧಾಕೃಷ್ಣರ ಚಿತ್ರಗಳೂ ಬಹಳ ಸುಂದರವಾಗಿ ಮೂಡಿಬಂದಿವೆ.

ಜಾತ್ರೆಯ ಅಂಗವಾಗಿ ಮಾರುತಿ ದೇಗುಲ ಹಾಗೂ ಸುತ್ತಮುತ್ತಲಿನ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪ್ರತಿ ವರ್ಷ ರಂಗೋಲಿಗಳನ್ನು ನೋಡಲು ಜನಜಂಗುಳಿಯೇ ಇರುತ್ತಿತ್ತು. ಆದರೆ, ಈ ಬಾರಿ ಕೊರೊನಾ ಭೀತಿಯಿಂದ ಬಹಳಷ್ಟು ಮಂದಿ ಮನೆಗಳಲ್ಲೇ ಉಳಿದು, ಮೊಬೈಲ್‌ ಫೋನ್‌ಗಳಿಗೆ ಬಂದ ಚಿತ್ರಗಳನ್ನೇ ಕಣ್ತುಂಬಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು