ಶುಕ್ರವಾರ, ಜನವರಿ 22, 2021
27 °C
ಕೂಲಿಕಾರ್ಮಿಕರ ಕೊರತೆ: ಸಂಸ್ಕರಣೆ ಕ್ರಮಗಳ ಉಳಿತಾಯಕ್ಕೆ ರೈತರ ಆಸಕ್ತಿ

ಶಿರಸಿ: ಹಸಿ ಅಡಿಕೆ ಮಾರಾಟ ಜೋರು

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಮಲೆನಾಡಿನ ರೈತರ ಜೀವನಾಡಿ ಅಡಿಕೆ ಬೆಳೆ ಕೊಯ್ಲು ಮತ್ತು ಸಂಸ್ಕರಣೆಗೆ ಕೂಲಿಕಾರ್ಮಿಕರ ಕೊರತೆ ದೊಡ್ಡ ಚಿಂತೆಯಾಗಿದೆ. ಇದಕ್ಕೆ ಮಾರ್ಗೋಪಾಯವಾಗಿ ಪ್ರಮುಖ ಸಹಕಾರ ಸಂಸ್ಥೆಗಳು ಜಾರಿಗೆ ತಂದ ಹಸಿ ಅಡಿಕೆ ಖರೀದಿಗೆ ಈ ಹಿಂದಿಗಿಂತಲೂ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಗತೊಡಗಿದೆ.

ಬೆಳೆ ಕೊಯ್ಲು ಮಾಡಲು ಕೊನೆಗೌಡರು ಸಿಗದೆ ತೋಟಿಗರು ಹೈರಾಣಾಗುತ್ತಿದ್ದಾರೆ. ಅವರಿಗೆ ನೀಡುವ ಕೂಲಿಯೂ ದುಬಾರಿಯಾಗುತ್ತಿದೆ. ದಿನಕ್ಕೆ ಒಂದೂವರೆ ಸಾವಿರ ಕೊಟ್ಟರೂ ಕಾರ್ಮಿಕರು ಸಿಗುತ್ತಿಲ್ಲ. ಅಡಿಕೆ ಸುಲಿಯಲು, ಬೇಯಿಸಲು ಮತ್ತು ಒಣಗಿಸಲು ಕೂಡ ಹಲವರು ಹರಸಾಹಸಪಡಬೇಕಿದೆ. ಹೀಗಾಗಿ ಈ ಬಾರಿ ಹಸಿ ಅಡಿಕೆಯನ್ನೇ ಮಾರಾಟ ಮಾಡುವವರ ಸಂಖ್ಯೆ ಅಧಿಕವಾಗಿದೆ.

ಕದಂಬ ಮಾರ್ಕೆಟಿಂಗ್ ಟ್ರಸ್ಟ್ ಹತ್ತು ವರ್ಷಗಳ ಹಿಂದೆ ಹಸಿ ಅಡಿಕೆಯನ್ನು ಹರಾಜು ಮೂಲಕ ಖರೀದಿಸುವ ಪ್ರಕ್ರಿಯೆ ಪರಿಚಯಿಸಿತ್ತು. ಅದೀಗ ಟಿಎಂಎಸ್ ಸೇರಿದಂತೆ ತಾಲ್ಲೂಕಿನ 25ಕ್ಕೂ ಹೆಚ್ಚು ಸೊಸೈಟಿಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಟಿಎಸ್‍ಎಸ್ ಸಂಸ್ಥೆ ಕೂಡ ಪ್ರಸಕ್ತ ವರ್ಷದಿಂದ ಹಸಿ ಅಡಿಕೆ ಟೆಂಡರ್ ಖರೀದಿ ಆರಂಭಿಸಿದೆ.

ಹಸಿ ಅಡಿಕೆಗೆ ಈ ಬಾರಿ ಆರಂಭದಲ್ಲಿ ಉತ್ತಮ ದರವು ಸಿಗುತ್ತಿದೆ. ಕಾಯಿ ಅಡಿಕೆ ಸರಾಸರಿ ಪ್ರತಿ ಕ್ವಿಂಟಲ್‍ಗೆ ₹4,700 ದರ ಪಡೆದುಕೊಂಡಿದ್ದು, ಗರಿಷ್ಠ ₹5,108 ವರೆಗೂ ಇದೆ. ಗೋಟು ಅಡಿಕೆ (ಹಣ್ಣು) ಸರಾಸರಿ ₹5,400 ದರ ಪಡೆದುಕೊಂಡಿದೆ. ಗರಿಷ್ಠ ₹6,009 ದರವಿದೆ. ಈ ದರವೂ ರೈತರನ್ನು ಆಕರ್ಷಿಸಿದೆ.

ನ.5 ರಿಂದ ಖರೀದಿ ಆರಂಭಗೊಂಡಿದ್ದು ಈವರೆಗೆ ಎರಡು ಸಾವಿರ ಕ್ವಿಂಟಲ್‌ಗಿಂತ ಅಧಿಕ ಅಡಿಕೆ ಮಾರಾಟ ಕಂಡಿದೆ. ಹಳ್ಳಿಗಳಿಂದ ದಿನವೂ ಹಸಿ ಅಡಿಕೆ ತುಂಬಿಕೊಂಡ ವಾಹನಗಳು ಪೇಟೆಯತ್ತ ಧಾವಿಸುತ್ತಿವೆ. 

‘ಕೊಯ್ಲು ಮಾಡಲು ಕೊನೆಗೌಡರನ್ನು ಹೊಂದಿಸುವುದು ಕಷ್ಟವಾಯಿತು. ಅಡಿಕೆ ಸುಲಿಯಲು ಕೆಲಸದವರು ಸಿಗುತ್ತಿಲ್ಲ. ಸಂಸ್ಕರಣೆಯ ಉಳಿದ ಹಂತಗಳನ್ನು ಕೈಗೊಳ್ಳಲು ನಮ್ಮಿಂದ ಕಷ್ಟ. ಹೀಗಾಗಿ ಹಸಿ ಅಡಿಕೆಯನ್ನೇ ಮಾರಾಟ ಮಾಡಿದ್ದೇವೆ’ ಎಂದು ಹಿರಿಯ ಕೃಷಿಕ ವಿಶ್ವನಾಥ ಹೆಗಡೆ ಸಮಸ್ಯೆ ಹೇಳಿದರು.

‘ಮೊದಲ ಬಾರಿಗೆ ನಡೆಸುತ್ತಿರುವ ಹಸಿ ಟೆಂಡರ್ ಪ್ರಕ್ರಿಯೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರತಿದಿನ ಸರಾಸರಿ 400 ಕ್ವಿಂಟಲ್ ಅಡಿಕೆ ವಹಿವಾಟು ನಡೆಯುತ್ತಿದೆ. ಕೂಲಿಕಾರ್ಮಿಕರ ಕೊರತೆಯ ಸಮಸ್ಯೆ ಪರಿಹರಿಸಲು ಸಂಸ್ಥೆ ರೈತಸ್ನೇಹಿ ನಿರ್ಧಾರ ತೆಗೆದುಕೊಂಡಿದೆ’ ಎಂದು ಟಿಎಸ್‍ಎಸ್ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು