ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೆಡ್ ಅಲರ್ಟ್’: ಮತ್ತಷ್ಟು ಮಳೆ ಸಾಧ್ಯತೆ

ಹೊಳೆಯಂತಾದ ಹಲವು ರಸ್ತೆಗಳು: ದಿನವಿಡೀ ವರ್ಷಧಾರೆಯಿಂದ ಜನಜೀವನ ಅಸ್ತವ್ಯಸ್ತ
Last Updated 22 ಜುಲೈ 2019, 13:21 IST
ಅಕ್ಷರ ಗಾತ್ರ

ಕಾರವಾರ: ನಗರದಲ್ಲಿ ಸೋಮವಾರ ದಿನವಿಡೀ ಒಂದೇ ಸಮನೆ ಜೋರಾಗಿ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಯಿತು. ಬೆಳಿಗ್ಗೆ 9ರ ಸುಮಾರಿಗೆ ಶುರುವಾದ ಮಳೆ ಸಂಜೆಯವರೆಗೂ ಬಿಡುವು ನೀಡಲೇ ಇಲ್ಲ.

ಹವಾಮಾನ ಇಲಾಖೆಯು ಮತ್ತಷ್ಟು ಮಳೆ ಬರುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿ ‘ರೆಡ್‌ ಅಲರ್ಟ್’ ಘೋಷಿಸಿದೆ. ಪಶ್ಚಿಮ ಭಾಗದಿಂದ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಕಡಲಿಗೆ ಇಳಿಯದಿರುವುದು ಉತ್ತಮ ಎಂದು ಇಲಾಖೆ ಸಲಹೆ ನೀಡಿದೆ.

ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ನೀಡುವ ಬಗ್ಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಹಶೀಲ್ದಾರರು ಜಂಟಿಯಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ಸೂಚಿಸಿದ್ದಾರೆ.

ಸೋಮವಾರದ ಮಳೆಯಿಂದ ನಗರದ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಮಣ್ಣು ಹಾಕಿ ಎತ್ತರಿಸಿ ಕಾಂಕ್ರೀಟ್ ಮಾಡಿದ ರಸ್ತೆಗಳಲ್ಲಿ ವಾಹನ ಸಂಚಾರ ಸುಗಮವಾಗಿದೆ. ಆದರೆ,ಹಳೆಯ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ. ಕೆಎಚ್‌ಬಿ ಕಾಲೊನಿ ಸುತ್ತಮುತ್ತ ಅಂತಹಚಿತ್ರಣಗಳು ಸಾಕಷ್ಟಿವೆ.

ಹಬ್ಬುವಾಡದಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗ ಘಟಕದ ಬಳಿ ವಿದ್ಯುತ್ ಕಂಬವೊಂದು ಮುರಿದು ಬಿತ್ತು. ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಚರಂಡಿ ಉಕ್ಕಿ ಹರಿದು ರಸ್ತೆಯ ಮೇಲೆ ನೀರು ತುಂಬಿಕೊಂಡಿತು.

ಬೈತಖೋಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವ್ಯವಸ್ಥೆ ಮುಂದುವರಿದಿದೆ. ಈ ಬಗ್ಗೆ ಸ್ಥಳೀಯರುಅಸಮಾಧಾನ ವ್ಯಕ್ತಪಡಿಸಿ, ‘ಬಂದರು ಇಲಾಖೆಯ ಕಾಂಪೌಂಡ್ ಮೂಲಕ ದೊಡ್ಡ ಪೈಪ್ ಅಳವಡಿಸಿದರೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಆದರೆ, ಅದಕ್ಕೆ ಮನಸ್ಸು ಮಾಡದ ಕಾರಣ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT