ಭಾನುವಾರ, ಆಗಸ್ಟ್ 25, 2019
20 °C
ದ್ವೀಪವಾಗಿರುವ ಕಾರಕುಂಡಿ ಜನರಿಗೆ ಕಿರವತ್ತಿಯಲ್ಲಿ ಆಶ್ರಯ

ಗೌಳಿಗರಿಗೆ ಜಲಬಂಧಿಯಾದ ಜಾನುವಾರು ಚಿಂತೆ

Published:
Updated:
Prajavani

ಶಿರಸಿ: ‘ಉಟ್ಟ ಬಟ್ಯಾಗ್ ಬಂದೀವಿ, ಮೂರು ದಿನಾ ಆತು. ನಾವ್ ಇಲ್ಲಾದ್ರೂ ಊಟ ಮಾಡ್ತೇವಿ, ನಮ್ ಆಕಳು, ಎಮ್ಮಿ ಎಲ್ಲ ಅಲ್ಲೇ ಐತಿ, ಅವ್ಕೆ ಹುಲ್ಲು ಹಾಕವ್ರೂ ಗತಿಯಿಲ್ಲ. ಊಟದ ತಾಟಿನ ಮುಂದೆ ಕುಂತ್ರೆ ಅವೇ ಕಣ್ಮುಂದೆ ಬರ್ತಾವೆ’ ಎನ್ನುವಾಗ ಜನ್ನುಬಾಯಿ ಗದ್ಗದಿತರಾದರು. ಸೆರಗಿನಲ್ಲಿ ಕಣ್ಣೊರಸಿಕೊಳ್ಳುತ್ತಲೇ, ‘ಹುಡಗ್ರು–ಪಡಗ್ರು ಎಲ್ಲಾ ನಮ್ ಜೊತೆ ಬಂದಾವ್ರಿ, ಅದೊಂದೇ ಸಮಾಧಾನ’ ಎಂದು ನಿಟ್ಟುಸಿರು ಬಿಟ್ಟರು.

ಯಲ್ಲಾಪುರ ತಾಲ್ಲೂಕು ಕಾರ್ಕುಂಡಿಯಲ್ಲಿ 50ರಷ್ಟು ಗೌಳಿಗರ ಕುಟುಂಬಗಳಿವೆ. ಅವರಿವರ ಮನೆ ಕೆಲಸ ಮಾಡಿ ಬದುಕುವ ಅವರಿಗೆ ನಿತ್ಯದ ಕೂಲಿಯೇ ತುತ್ತಿನ ಗಂಟು. ಬೊಮ್ಮನಳ್ಳಿ ಜಲಾಶಯದಿಂದ ಹೆಚ್ಚುವರಿ ನೀರು ಹೊರಬಿಟ್ಟಿರುವ ಕಾರಣ ಈ ಊರು ನಾಗರಿಕ ಜಗತ್ತಿನ ಸಂಪರ್ಕ ಕಳೆದುಕೊಂಡಿದೆ. ಊರಿನಲ್ಲಿದ್ದ 80ರಷ್ಟು ಜನರನ್ನು ಕಿರವತ್ತಿ ಸಮುದಾಯ ಭವನದಲ್ಲಿ ತೆರೆದಿರುವ ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಮನೆ ಬಿಟ್ಟು ಬಂದಿರುವ ಸಂಕಟದಲ್ಲಿ ಹಿರಿಯ ಜೀವಗಳು ಮೌನಕ್ಕೆ ಶರಣಾಗಿವೆ. ‘ಚೂರ್‌ಪಾರು ಇದ್ದ ಗದ್ದೆಯಲ್ಲಿ ಹತ್ತಿ ಬಿತ್ತಿದ್ದೆವು. ಎಲ್ಲವು ನೀರು ಪಾಲಾಗಿದೆ. ಮೂರು ದಿನಗಳಿಂದ ಕೂಲಿ ಕೆಲಸವೂ ಇಲ್ಲ. ಕೈಯಲ್ಲಿ ಕಾಸೂ ಇಲ್ಲದಾಗಿದೆ. ಇನ್ನು ಎಷ್ಟು ದಿನ ಇದೇ ಶಿಕ್ಷೆಯೋ ಗೊತ್ತಿಲ್ಲ’ ಎಂದರು ಸಗ್ಗುಬಾಯಿ.

ಆರನೇ ಕ್ಲಾಸಿನಲ್ಲಿ ಓದುತ್ತಿರುವ ಪದ್ದು ತಂಗಿಯನ್ನು ಕಾಲಮೇಲೆ ಕುಳ್ಳಿರಿಸಿಕೊಂಡಿದ್ದ. ಅಲ್ಲೇ ಇದ್ದ ಎಂಟನೇ ತರಗತಿಯ ಲಲಿತಾ ಪಿಂಗ್ಳೆ, ಪಕ್ಕದ ಮನೆಯ ಪಾಪುವನ್ನು ಎತ್ತಿ ಆಡಿಸುತ್ತಿದ್ದಳು. ‘ನಾವು ಸುಮಾರು 20 ಹೈಸ್ಕೂಲ್ ಮಕ್ಕಳು, 30ರಷ್ಟು ಪ್ರಾಥಮಿಕ ಶಾಲೆ ಮಕ್ಕಳು ನಿತ್ಯವೂ ಯಲ್ಲಾಪುರಕ್ಕೆ ಶಾಲೆಗೆ ಹೋಗುತ್ತೇವೆ. ತಾಟವಾಳದಲ್ಲಿ ಬಸ್ ಇಳಿದು, ಎರಡು ಕಿ.ಮೀ ನಡೆದು ಮನೆ ತಲುಪುವ ಹೊತ್ತಿಗೆ ಸಂಜೆ 6 ಗಂಟೆಯಾಗಿತ್ತು. ಆಗಷ್ಟೇ ಮನೆ ಸೇರಿದ್ದ ನಮಗೆ ಎಲ್ಲರೂ ವಾಹನ ಹತ್ತುವಂತೆ ಹೇಳಿದರು. ನಾವು ಗಾಡಿ ಹತ್ತಿ ಬಂದೆವು’ ಎಂದು ಲಲಿತಾ ಹೇಳಿದಳು.

‘ಹೊರಡುವ ಒಂದು ತಾಸು ಮೊದಲು ನಮಗೆ ಮಾಹಿತಿ ನೀಡಿದರು. ಕೆಲವರು ಮನೆಗೆ ಬೀಗ ಹಾಕಿದ್ದಾರೆ, ಇನ್ನು ಕೆಲವರು ಬಾಗಿಲಷ್ಟೇ ಹಾಕಿ ಬಂದಿದ್ದಾರೆ. ಕೆಲವರು ಕೊಟ್ಟಿಗೆಯಲ್ಲಿದ್ದ ಜಾನುವಾರುಗಳ ಹಗ್ಗ ಬಿಚ್ಚಿ ಬಂದರು, ಕೆಲವರಿಗೆ ಹೊರಡುವ ಗಡಿಬಿಡಿ, ಮರೆತು ಹಾಗೇ ಬಂದಿದ್ದಾರೆ. ಚೀಲವೊಂದರಲ್ಲಿ ಬಟ್ಟೆ ತುಂಬಿಕೊಂಡು ಇಲ್ಲಿ ಬಂದಿದ್ದೇವೆ. ಇವಿಷ್ಟೇ ಈಗ ನಮ್ಮ ಬಳಿಯಿರುವ ಆಸ್ತಿ’ ಎಂದರು ಒಂದೂವರೆ ವರ್ಷದ ಮಗನನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಸುಶೀಲಾ.

ಡಾ. ಮಂಜುನಾಥ ಮತ್ತು ತಂಡ, ಕಿರವತ್ತಿ ಪಂಚಾಯ್ತಿ ಸಿಬ್ಬಂದಿ ವಸತಿ ಕೇಂದ್ರದಲ್ಲಿರುವವರ ಉಪಚಾರ ನೋಡಿಕೊಳ್ಳುತ್ತಿದ್ದಾರೆ. ಕಿರವತ್ತಿ ಪಂಚಾಯ್ತಿ ಅಧ್ಯಕ್ಷೆ ಶೋಬಿನಾ ಸಿದ್ದಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾ ಶೆಟ್ಟಿ ಗುರುವಾರ ಭೇಟಿ ನೀಡಿ, ಗೌಳಿಗರಿಗೆ ಸಮಾಧಾನ ಹೇಳಿದರು.

Post Comments (+)