ಶುಕ್ರವಾರ, ನವೆಂಬರ್ 22, 2019
22 °C

ಅಳ್ನಾವರ–ಅಂಬೇವಾಡಿ ರೈಲು ಸಂಚಾರ ಆರಂಭಿಸಲು ಒತ್ತಾಯ

Published:
Updated:

ಶಿರಸಿ: ಅಳ್ನಾವರ–ಅಂಬೇವಾಡಿ ಪ್ಯಾಸೆಂಜರ್ ರೈಲು ಸಂಚಾರ ಶೀಘ್ರ ಪುನರಾರಂಭಿಸಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರನ್ನು ಶಾಸಕ ಆರ್.ವಿ.ದೇಶಪಾಂಡೆ ಒತ್ತಾಯಿಸಿದ್ದಾರೆ.

ಈ ಕುರಿತು ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಅವರು, ‘ಅಳ್ನಾವರ-ಅಂಬೇವಾಡಿ ಪ್ಯಾಸೇಂಜರ್ ರೈಲು ಪ್ರಾರಂಭಿಸುವಂತೆ 2005ರಿಂದ ಸತತವಾಗಿ ಕೇಂದ್ರ ರೈಲ್ವೆ ಸಚಿವರು, ಅಧಿಕಾರಿಗಳಿಗೆ ಪತ್ರ ಬರೆದು ಗಮನ ಸೆಳೆಯಲಾಗುತ್ತಿದೆ. ಕೆಲ ದಿನಗಳ ಹಿಂದೆ ನಾನು ದೆಹಲಿಯಲ್ಲಿ ತಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಅದರಂತೆ ಅಕ್ಟೋಬರ್ 17ರಂದು ಹುಬ್ಬಳ್ಳಿಯ ರೈಲ್ವೆ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕರು, ಸ್ಥಳೀಯ ಸ್ಟೇಷನ್ ಅಧೀಕ್ಷಕ ಹಾಗೂ ತಾಂತ್ರಿಕ ಅಧಿಕಾರಿಗಳನ್ನೊಳಗೊಂಡ ತಂಡವು ಅಳ್ನಾವರ - ಅಂಬೇವಾಡಿ ರೈಲ್ವೆ ಸಂಚಾರದ ಸುರಕ್ಷತಾ ಪರೀಕ್ಷೆ ಮತ್ತು ಪ್ರಾಯೋಗಿಕವಾಗಿ ಸಂಚಾರ ಪರೀಕ್ಷೆ ಯಶಸ್ವಿಯಾಗಿ ನಡೆಸಿದ್ದು ಸಂತೋಷದ ವಿಷಯ’ ಎಂದಿದ್ದಾರೆ.

‘ಈ ರೈಲಿನ ಪುನರಾರಂಭದಿಂದ ದಾಂಡೇಲಿಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗುತ್ತದೆ. ಇನ್ನಿತರ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ದಾಂಡೇಲಿ ಪ್ರವಾಸೋದ್ಯಮ ಕೇಂದ್ರವಾಗಿರುವುದರಿಂದ ರಾಜ್ಯದ ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಾಗಿ ದಾಂಡೇಲಿ ನಗರಕ್ಕೆ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರದಿಂದ ನೇರವಾಗಿ ಸಂಪರ್ಕ ಕಲ್ಪಿಸುವುದು ಅತೀ ಅವಶ್ಯವಿದೆ’ ಎಂದು ವಿವರಿಸಿದ್ದಾರೆ.

ಪ್ರತಿಕ್ರಿಯಿಸಿ (+)