ಶುಕ್ರವಾರ, ಜೂನ್ 25, 2021
21 °C
ದೇವಿಯೆದುರು ದುಃಖ–ದುಮ್ಮಾನ ಹೊರಗಿಕ್ಕುವ ತಾಯಂದಿರು

ಕುಣಿದು ಹಗುರಾಗುವ ಮನಗಳು...

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಜಾತ್ರೆಯೆಂದರೆ ದೇವಿ ಮಾರಿಕಾಂಬೆಯನ್ನು ನೋಡಲು ಬರುವವರು ಸಹಸ್ರಾರು ಭಕ್ತರು. ಇವರ ನಡುವೆ ಕೆಲವರು, ಉನ್ಮಾದದಿಂದ ಕುಣಿಯುವವರನ್ನು ನೋಡಲೆಂದು ಬರುತ್ತಾರೆ.

ಮಾರಮ್ಮನ ತೇರಿನಲ್ಲಿ ‘ಮೈಮೇಲೆ ಭಾರ’ ಬರುವವರು ನೂರಾರು ಮಂದಿ. ಬೆಳಿಗ್ಗೆ ನಸುಕಿನಲ್ಲಿ ಕೆಂಪು ಬಣ್ಣದ ಬಟ್ಟೆ ತೊಟ್ಟು ಗುಡಿಗೆ ಬರುವ ಅವರು, ಶೋಭಾಯಾತ್ರೆಯಲ್ಲಿ ಕಹಳೆ ಕೂಗು ಕಿವಿಗಪ್ಪಳಿಸಿದ್ದೇ ತಡ, ಮುಡಿಕಟ್ಟಿದ ಕೂದಲು ಇಳಿಬಿಟ್ಟು, ಕೈಯಲ್ಲಿ ಸಿಂಗಾರ ಹಿಡಿದು ಕುಣಿಯಲಾರಂಭಿಸುತ್ತಾರೆ. ಮುಖಕ್ಕೆ ಕುಂಕುಮ ಲೇಪಿನ, ಕುತ್ತಿಗೆಗೆ ಸೇವಂತಿಗೆ ಹಾರ ಹಾಕಿಕೊಂಡು ದೇವಿಯೆದುರು ನೃತ್ಯ ಮಾಡುತ್ತಾರೆ.

ಮಾರಿಗುಡಿಯಿಂದ ಆರಂಭವಾಗುವ ಅವರ ಕುಣಿತದ ಸೇವೆ, ದೇವಿ ಗದ್ದುಗೆ ತಲುಪುವವರೆಗೂ, ಕೆಲವೊಮ್ಮೆ ಮಧ್ಯಾಹ್ನ ದಾಟಿ ಮುಸ್ಸಂಜೆಯವರೆಗೂ ಮುಂದುವರಿಯುತ್ತದೆ. ಹೀಗೆ ಕುಣಿಯುವವರಲ್ಲಿ ಮಹಿಳೆಯರೇ ಬಹುಸಂಖ್ಯೆಯಲ್ಲಿರುತ್ತಾರೆ. ಅವರಲ್ಲೂ ಮಧ್ಯ ವಯಸ್ಸಿನ, ವೃದ್ಧಾಪ್ಯಕ್ಕೆ ಹತ್ತಿರುವಿರುವ ತಾಯಂದಿರು ಹೆಚ್ಚಿರುತ್ತಾರೆ. ಜಗವನ್ನು ಪೊರೆವ ಮಾರಮ್ಮನ ಎದುರು ತಾಯಂದಿರು ತಮ್ಮ ದುಃಖ–ದುಮ್ಮಾನ ಹೇಳಿಕೊಂಡು ನಿರಾಳರಾಗುತ್ತಾರೆ.ಜಾತ್ರೆಯ ಮೊದಲ ದಿನದಿಂದ ದೇವಿ ವಿಸರ್ಜನೆ ನಡೆಯುವ ತನಕವೂ ಗದ್ದುಗೆಯ ಆವರಣದಲ್ಲಿ ಇಂತಹ ದೃಶ್ಯಗಳು ಕಾಣಸಿಗುತ್ತವೆ.

‘ನೋಡುಗರಿಗೆ ಇದೊಂದು ಸಾಮಾನ್ಯ ಕುಣಿತ, ಭಕ್ತಿಯ ಪರಾಕಾಷ್ಠೆಯಂತೆ ಕಾಣುತ್ತದೆ. ಆದರೆ, ನಮಗೆ ಇದು ಹರಕೆಯ ಸೇವೆ. ಮನೆಯಲ್ಲಿ ಕಷ್ಟ ಬಂದಾಗ, ಜಾತ್ರೆಯ ವೇಳೆ ಕುಣಿದು ಹರಕೆ ತೀರಿಸುವ ಸೇವೆ ಹೇಳಿಕೊಳ್ಳುತ್ತೇವೆ. ಕೋರಿಕೆ ಈಡೇರಿದಾಗ ಜಾತ್ರೆಯಲ್ಲಿ ಹರಕೆಯನ್ನು ತಾಯಿಯ ಪದತಲದಲ್ಲಿ ಅರ್ಪಿಸುತ್ತೇವೆ’ ಎನ್ನುತ್ತಾರೆ ಭಕ್ತೆ ಲಕ್ಷ್ಮಿಬಾಯಿ.

‘ಜೀವನದ ಜಂಜಾಟದಲ್ಲಿ ಮನುಷ್ಯ ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಾನೆ. ದೈನಂದಿನ ಬದುಕಿನ ಹಲವು ಸಂದರ್ಭಗಳಲ್ಲಿ ಪ್ರಯತ್ನಪೂರ್ವಕವಾಗಿ ಈ ಹೊಂದಾಣಿಕೆ ನಡೆದಿರುತ್ತದೆ. ಹೀಗಾಗಿ ದುಃಖ, ನೋವು, ಭಯ ಇಂತಹ ಕರಾಳ ನೆನಪುಗಳು ಮನಸ್ಸಿನಲ್ಲಿ ಹುದುಗಿಕೊಂಡಿರುತ್ತವೆ. ಅಮ್ಮನ ಸಾನ್ನಿಧ್ಯದಲ್ಲಿ ಅರಿವಿಲ್ಲದೇ ಅಂತರಂಗದ ಭಾವಗಳು ‘ಮೈಮೇಲೆ ಭಾರ’ ಬರುವ ರೂಪದಲ್ಲಿ ಹೊರಹೊಮ್ಮುತ್ತವೆ’ ಎಂದು ವಿಜ್ಞಾನಿಕವಾಗಿ ವಿಶ್ಲೇಷಿಸುತ್ತಾರೆ ಮನಃಶಾಸ್ತ್ರಜ್ಞೆ ಮಾಲಾ ಗಿರಿಧರ. 

ಮನುಷ್ಯನೊಳಗೆ ಅಗಾಧ ಶಕ್ತಿಯಿದೆ ಎಂಬುದನ್ನು ಕೂಡ ಈ ಸಂದರ್ಭಗಳು ದೃಢಪಡಿಸುತ್ತವೆ. ಊಟ, ಆಹಾರವಿಲ್ಲದೆ ಕೂಡ ಎಷ್ಟೊ ಜನರು ದಿನವಿಡೀ ಹೀಗೆ ಕುಣಿಯುತ್ತಾರೆ. ಇದರಿಂದ ಮನದೊಳಗೆ ತುಂಬಿರುವ ನಕಾರಾತ್ಮಕ ಭಾವಗಳು ಕರಗಿ, ನಿರುಮ್ಮಳವಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ ಜೊತೆ ಅಭಿಪ್ರಾಯ ಹಂಚಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು