ಬುಧವಾರ, ಸೆಪ್ಟೆಂಬರ್ 22, 2021
27 °C

‘ಕಾಂಕ್ರೀಟ್ ರಸ್ತೆಯ ತುದಿಗೆ ಸಿಮೆಂಟ್ ತುಂಬಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ಕೆಎಚ್‌ಬಿ ಹೊಸ ಬಡಾವಣೆಯಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆಗಳ ಆರಂಭ ಮತ್ತು ಕೊನೆಯಲ್ಲಿ ಹಾಕಲಾಗಿದ್ದ ಮಣ್ಣು, ವಾಹನಗಳ ನಿರಂತರ ಸಂಚಾರದಿಂದ ದೂಳಾಗಿ ಹೋಗಿದೆ. ಇದರಿಂದ ವಾಹನ ಸವಾರರಿಗೆ ಭಾರಿ ತೊಂದರೆಯಾಗುತ್ತಿದೆ.

ಹಬ್ಬುವಾಡ ರಸ್ತೆಯಿಂದ ಒಳಕ್ಕೆ ಸಾಗಿದಾಗ ಚರಂಡಿ ಕಾಮಗಾರಿಗೆಂದು ಸುಮಾರು 20 ಅಡಿ ಜಾಗವನ್ನು ರಸ್ತೆ ಮಾಡದೇ ಖಾಲಿ ಬಿಡಲಾಗಿದೆ. ಅಲ್ಲಿ ಒಂದು ರಸ್ತೆಯಿಂದ ಇಳಿಯುವಲ್ಲಿ ಮತ್ತು ಮುಂದುವರಿದ ರಸ್ತೆಗೆ ಹತ್ತುವಲ್ಲಿ ಸುಮಾರು ಅರ್ಧ ಅಡಿಯಷ್ಟು ಅಂತರವಿದೆ. ಅಲ್ಲಿಗೆ ಹಾಕಲಾಗಿದ್ದ ಮಣ್ಣು ಪುಡಿಯಾಗಿ ಹಾರಿ ಹೋಗಿದ್ದು, ತಕ್ಷಣಕ್ಕೆ ವಾಹನ ಸವಾರರಿಗೆ ತಿಳಿಯುವುದಿಲ್ಲ. ದ್ವಿಚಕ್ರ ವಾಹನ ಸವಾರರು ಇಲ್ಲಿ ಬಹಳ ನಾಜೂಕಾಗಿ ಸಾಗಬೇಕಿದೆ. ಮಹಿಳೆಯರು, ಗರ್ಭಿಣಿಯರು, ಹಿರಿಯರು, ಎಲುಬು ಸಂಬಂಧಿ ನೋವು ಹೊಂದಿದವರು ವಾಹನದಲ್ಲಿದ್ದರೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಿದೆ.

ಇದೇ ರಸ್ತೆಯಲ್ಲಿ ಗೋಲ್ಡನ್ ಬೇಕರಿಯಿಂದ ಕೆಳಭಾಗದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆಂದು ಜಲ್ಲಿಕಲ್ಲು ಹಾಗೂ ಸಿಮೆಂಟ್ ಪುಡಿ ಹಾಕಲಾಗಿತ್ತು. ಅದನ್ನು ಪೂರ್ಣಗೊಳಿಸಲಿಲ್ಲ. ಆದರೆ, ರಸ್ತೆಗೆ ಅಡ್ಡಲಾಗಿ ಹೊಂಡ ಮಾಡಲಾಗಿದ್ದು, ವಾಹನ ಸವಾರರನ್ನು ಪೇಚಿಗೆ ಸಿಲುಕಿಸುತ್ತಿದೆ. ಎದುರಿನಿಂದ ವಾಹನಗಳು ಬಂದರೆ ಇಲ್ಲಿ ನಿಲ್ಲಿಸಿಯೇ ಮುಂದೆ ಸಾಗುವಂತಾಗಿದೆ. 

ಎರಡೂ ಕಡೆಗಳಲ್ಲಿ ನಗರಸಭೆಯು ರಸ್ತೆ ಹೊಂಡಗಳಿಗೆ ಸಿಮೆಂಟ್ ತುಂಬಿಸಿ ಶಾಶ್ವತವಾಗಿ ದುರಸ್ತಿ ಮಾಡಬೇಕು. ಮಳೆಗಾಲ ಆರಂಭವಾದರೆ ಇಲ್ಲಿ ನೀರು ನಿಂತು ಅಪಘಾತಗಳಾದರೂ ಅಚ್ಚರಿಯಿಲ್ಲ. 

– ನಾಗರಾಜ್ ಕಾರವಾರ, ಕೆಎಚ್‌ಬಿ ಕಾಲೊನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು