ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಕಡಿತ: ಅರಣ್ಯ ವಿಜ್ಞಾನ ವಿದ್ಯಾರ್ಥಿಗಳಿಗೆ ಆತಂಕ

ಆರ್.ಎಫ್.ಒ. ಹುದ್ದೆ: ಅರಣ್ಯವಿಜ್ಞಾನ ಪದವೀಧರರ ಮೀಸಲಾತಿ ಶೇ 50ಕ್ಕೆ ಇಳಿಕೆ
Last Updated 4 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ವಲಯ ಅರಣ್ಯಾಧಿಕಾರಿ (ಆರ್.ಎಫ್.ಒ.) ಹುದ್ದೆಗೆ ನೇರ ನೇಮಕಾತಿಯಲ್ಲಿ ಅರಣ್ಯವಿಜ್ಞಾನ ಪದವೀಧರರಿಗೆ ಇದ್ದ ಶೇ 75ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ಶೇ 50ಕ್ಕೆ ಇಳಿಕೆ ಮಾಡಿ ಫೆ.28 ರಂದು ಅಧಿಸೂಚನೆ ಹೊರಡಿಸಿದೆ. ಇದು ಅರಣ್ಯವಿಜ್ಞಾನ ಪದವೀಧರ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

ಹೊಸ ಅಧಿಸೂಚನೆ ಅನ್ವಯ ಅರಣ್ಯವಿಜ್ಞಾನ ಪದವೀಧರರಿಗೆ ಶೇ 50ರಷ್ಟು, ಉಳಿದ ಅರ್ಧದಷ್ಟು ಅನ್ಯ ವಿಜ್ಞಾನ ಸಂಬಂಧಿತ ವಿಷಯಗಳ ಪದವೀಧರರಿಗೆ ಆದ್ಯತೆ ನೀಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಅರಣ್ಯವಿಜ್ಞಾನ ಪದವಿ ಕಾಲೇಜುಗಳಿವೆ. ಪ್ರತಿ ವರ್ಷ ಇಲ್ಲಿಂದ ತಲಾ 120 ವಿದ್ಯಾರ್ಥಿಗಳು ಪದವೀಧರರರಾಗಿ ಹೊರಬರುತ್ತಿದ್ದಾರೆ. ಅರಣ್ಯ ಇಲಾಖೆ ಪ್ರತಿ 3–4 ವರ್ಷಕ್ಕೊಮ್ಮೆ ಸರಾಸರಿ 25 ರಿಂದ 30 ಹುದ್ದೆ ಮಾತ್ರ ಭರ್ತಿ ಮಾಡುತ್ತದೆ.

‘ಮೀಸಲಾತಿ ಕಡಿತ ಮಾಡಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ. ಪಶು ಸಂಗೋಪನೆ, ತೋಟಗಾರಿಕೆ, ಕೃಷಿ ವಿಜ್ಞಾನ ಪದವೀಧರರಿಗೆ ಆಯಾ ಇಲಾಖೆಯಲ್ಲಿ ನೇಮಕಾತಿಗೆ ನೂರರಷ್ಟು ಆದ್ಯತೆ ಇದೆ. ಅರಣ್ಯ ಇಲಾಖೆಯಲ್ಲಿ ಅರಣ್ಯ ವಿಜ್ಞಾನ ಪದವಿ ಪಡೆದವರಿಗೆ ಆದ್ಯತೆ ಕಡಿಮೆಯಾಗಿದೆ. ಉಳಿದವರಿಗೆ ಹೆಚ್ಚು ಅವಕಾಶ ಸಿಗುತ್ತಿದೆ’ ಎಂದು ಅರಣ್ಯಶಾಸ್ತ್ರ ಪದವಿ ವಿಭಾಗದ ವಿದ್ಯಾರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ನೇಮಕಾತಿಗೆ ನಡೆಸುವ ಲಿಖಿತ ಪರೀಕ್ಷೆಯ ಐಚ್ಛಿಕ ವಿಷಯದಲ್ಲೂ ಅರಣ್ಯ ವಿಜ್ಞಾನಕ್ಕಿಂತ ಇತರ ವಿಜ್ಞಾನ ಸಂಬಂಧಿತ ವಿಷಯಗಳಿಗೆ ಆದ್ಯತೆ ನೀಡಲಾಗಿದೆ. ಅರಣ್ಯವಿಜ್ಞಾನ ಪದವೀಧರರನ್ನು ದೂರವಿಡುವ ಪ್ರಯತ್ನ ಇದಾಗಿದೆ’ ಎಂದು ಆರೋಪಿಸಿದರು.

‘ಸತತ ಹೋರಾಟದ ಫಲವಾಗಿ 2010ರಲ್ಲಿ ಅರಣ್ಯ ವಿಜ್ಞಾನ ಪದವೀಧರರಿಗೆ ಶೆ.75ರಷ್ಟು ಆದ್ಯತೆ ನೀಡುವ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. ಇದನ್ನೇ ಮಾದರಿಯಾಗಿಟ್ಟು ದೇಶದ ಕೆಲವು ರಾಜ್ಯಗಳಲ್ಲಿ ಮೀಸಲಾತಿ ಜಾರಿಯಾಗಿತ್ತು. ಪ್ರಸ್ತುತ ಮೀಸಲಾತಿ ಇಳಿಕೆ ಮಾಡುವ ಜತೆಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿರುವುದು ಅರಣ್ಯದ ಕುರಿತು ಪ್ರಾಯೋಗಿಕ ಜ್ಞಾನ ಇಲ್ಲದವರನ್ನು ಹುದ್ದೆಗೆ ಕೂರಿಸುವ ಪ್ರಯತ್ನ. ಇದರಿಂದ ಭವಿಷ್ಯದಲ್ಲಿ ಅರಣ್ಯ ಇಲಾಖೆಯ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರಿದರೆ ಅಚ್ಚರಿ ಇಲ್ಲ’ ಎಂದು ಅರಣ್ಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರೊಬ್ಬರು ಹೇಳಿದರು.

ಅರಣ್ಯ ಇಲಾಖೆ ಸದೃಢಕ್ಕೆ:‘ಕಾಡಿನಲ್ಲಿ ಹಣ್ಣು ಹಂಪಲು ಬೆಳೆ ವೃದ್ಧಿಸಬೇಕು. ಪ್ರಾಣಿಗಳ ಆರೋಗ್ಯ ಕಾಳಜಿ, ಸಮಗ್ರ ಅಭಿವೃದ್ಧಿ ಕೆಲಸಗಳನ್ನು ಗಮನದಲ್ಲಿಟ್ಟು ಹುದ್ದೆಯಲ್ಲಿ ತೋಟಗಾರಿಕೆ, ಪಶು ಸಂಗೋಪನೆ, ಎಂಜಿನಿಯರಿಂಗ್ ಪದವೀಧರರಿಗೂ ಆದ್ಯತೆ ಹೆಚ್ಚಿಸಲಾಗುತ್ತಿದೆ. ಈ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗುತ್ತಿದೆ. ಅನ್ಯ ಪದವೀಧರರಿಗೆ ಮೀಸಲಿಟ್ಟ ಹುದ್ದೆ ಭರ್ತಿಯಾಗದೆ ಉಳಿದರೆ ಅದನ್ನು ಅರಣ್ಯವಿಜ್ಞಾನ ಪದವೀಧರರಿಗೆ ಹಂಚಿಕೆ ಮಾಡಲಾಗುತ್ತದೆ’ ಎಂದು ಅರಣ್ಯ ಸಚಿವ ಉಮೇಶ ವಿ.ಕತ್ತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT