ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಲೇಪನವಿಲ್ಲದ ಪರಿಸರ ಸ್ನೇಹಿ ಕಾಗದ ತಟ್ಟೆ

ಅಭಿವೃದ್ಧಿ ಪಡಿಸಿದ ಕೈಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ
Last Updated 31 ಜುಲೈ 2022, 19:31 IST
ಅಕ್ಷರ ಗಾತ್ರ

ಕಾರವಾರ: ದೇಶದಾದ್ಯಂತ ಬಹುತೇಕ ಕಡೆಗಳಲ್ಲಿ ಗ್ರಾಹಕರಿಗೆ ಪ್ಲಾಸ್ಟಿಕ್ ಲೇಪಿತ ಕಾಗದದ ತಟ್ಟೆಗಳಲ್ಲಿ ಆಹಾರೋತ್ಪನ್ನಗಳನ್ನು ನೀಡಲಾಗುತ್ತಿದೆ. ಆದರೆ, ಜುಲೈ 1ರಿಂದ ಏಕಬಳಕೆಯ ಪ್ಲಾಸ್ಟಿಕ್ ನಿಷೇಧವಾಗಿದ್ದು, ಇಂಥ ತಟ್ಟೆಗಳ ‍ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಇದಕ್ಕೆ ಪರ್ಯಾಯವಾಗಿ, ಬಳಕೆಯಲ್ಲಿ ಇಷ್ಟೇ ಪರಿಣಾಮಕಾರಿಯಾದ ಪರಿಸರ ಸ್ನೇಹಿ ಕಾಗದದ ತಟ್ಟೆಯನ್ನು ಕೈಗಾರಿಕಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಧನಂಜಯ ಹೆಗಡೆ ಅಭಿವೃದ್ಧಿ ಪಡಿಸಿದ್ದಾರೆ.

ಅವರು ಕಾಗದಕ್ಕೆ ಮೆಕ್ಕೆಜೋಳದ ಅಂಟನ್ನು ಮಾತ್ರ ಬಳಸಿದ್ದಾರೆ. ಮೇಲಿನ ಮತ್ತು ಕೆಳಗಿನ ಪದರಗಳಿಗೆ ಉತ್ತಮ ಗುಣಮಟ್ಟದ, ಮರುಬಳಕೆ ಮಾಡಬಹುದಾದ ಕಂದು ಬಣ್ಣದ ಕಾಗದಗಳನ್ನು ಅಂಟಿಸಿದ್ದಾರೆ. ಅವುಗಳ ನಡುವೆ ದಿನಪತ್ರಿಕೆಗಳ ಹಾಳೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಜೋಡಿಸಿದ್ದಾರೆ.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ಪ್ಲಾಸ್ಟಿಕ್ ಲ್ಯಾಮಿನೇಷನ್ ಮಾಡಿರುವ ಕಾಗದದ ತಟ್ಟೆಗಳು ಪ್ಲಾಸ್ಟಿಕ್ ಕೈಚೀಲಗಳಿಂತಲೂ ಅಪಾಯಕಾರಿ. ಕೆಲವು ತಟ್ಟೆಗಳು ಆಕರ್ಷಕವಾಗಿ ಕಾಣಲೆಂದು ಬಿಳಿಯ ಪೇಂಟ್ ಕೂಡ ಬಳಿದಿರುತ್ತಾರೆ. ಪ್ಲಾಸ್ಟಿಕ್ ಮತ್ತು ಪೇಂಟ್‌ನ ರಾಸಾಯನಿಕಗಳಿರುವ ತಟ್ಟೆಯಲ್ಲಿ ಬಿಸಿಯಾದ ಆಹಾರ ಸೇವಿಸುವುದು ಆರೋಗ್ಯಕ್ಕೆ ದುಪ್ಪಟ್ಟು ಅಪಾಯಕಾರಿಯಾಗುತ್ತದೆ’ ಎಂದರು.

‘ಬಳಸಿ ಎಸೆದ ತಟ್ಟೆಗಳಪ್ಲಾಸ್ಟಿಕ್ ಲೇಪನವು ಕಾಲಕ್ರಮೇಣ ಪುಡಿಯಾಗುತ್ತದೆ. ಸೂಕ್ಷ್ಮ ಕಣಗಳು ಅಂತರ್ಜಲ ಸೇರಿಕೊಳ್ಳುತ್ತವೆ. ಇದರಿಂದ ಕುಡಿಯುವ ನೀರು ಕೂಡ ಮಲಿನವಾಗುತ್ತದೆ. ಅದನ್ನು ಸೇವಿಸಿದವರು ಹೃದ್ರೋಗದಂಥ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಯಿರುತ್ತದೆ’ ಎಂದು ವಿವರಿಸಿದರು.

‘ಇದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸಿ ಸುಮಾರು ಎರಡು ತಿಂಗಳುಗಳಿಂದ ಸಂಶೋಧನೆಯಲ್ಲಿ ತೊಡಗಿದ್ದೆ. ಕೊನೆಗೆ ಮೆಕ್ಕೆಜೋಳದ ಅಂಟು ಲೇಪಿತ ಕಾಗದದ ತಟ್ಟೆ ಅಭಿವೃದ್ಧಿಯಾಯಿತು. ಅಗತ್ಯಕ್ಕೆ ಅನುಗುಣವಾಗಿ ತಟ್ಟೆಯಲ್ಲಿ ದಿನಪತ್ರಿಕೆಯ ಪದರಗಳನ್ನು ಹೆಚ್ಚಿಸಿ ಗಟ್ಟಿಗೊಳಿಸಬಹುದು. ಮೆಕ್ಕಜೋಳದ ಅಂಟು ಒಣಗಿದರೆ ಅದರೊಂದಿಗೆ ಬೇರೆ ದ್ರವ ಪದಾರ್ಥಗಳು ಬೆರೆಯುವುದಿಲ್ಲ. ಇಡ್ಲಿ ಸಾಂಬಾರ್‌ನಂಥ ಪದಾರ್ಥಗಳನ್ನೂ ತಟ್ಟೆಯಲ್ಲಿಟ್ಟು ಮಾಡಿದ ಪ್ರಯೋಗ ಯಶಸ್ವಿಯಾಗಿದೆ’ ಎಂದರು.

‘ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾಗದದ ತಟ್ಟೆಗಳಿಗೆ ಹೋಲಿಸಿದರೆ ಇದು ಕಡಿಮೆ ವೆಚ್ಚದಾಯಕ. ದೊಡ್ಡ ಗಾತ್ರದ ತಟ್ಟೆಯನ್ನು ಸುಮಾರು ₹ 1ಯಂತೆ ಗ್ರಾಹಕರಿಗೆ ತಲುಪಿಸಬಹುದು. ಮನೆಗಳಲ್ಲಿರುವ ರದ್ದಿ ಕಾಗದದ ವಿಲೇವಾರಿಗೂ ಮತ್ತೊಂದು ಮಾರ್ಗೋಪಾಯ ಸಿಗುತ್ತದೆ’ ಎಂದು ಹೇಳಿದರು.

ಯಂತ್ರದ ವಿನ್ಯಾಸ:

ಮೆಕ್ಕೆಜೋಳದ ಅಂಟು ಮಿಶ್ರಿತ ಕಾಗದದ ತಟ್ಟೆಗಳನ್ನು ದೊಡ್ಡ ಮಟ್ಟದಲ್ಲಿ ತಯಾರಿಸಲು ಧನಂಜಯ ಹೆಗಡೆ ಯಂತ್ರವನ್ನೂ ವಿನ್ಯಾಸ ಮಾಡಿದ್ದಾರೆ. ಇದೇ ಯಂತ್ರದ ಸಹಾಯದಿಂದ ಕಾಗದದ ಚೀಲಗಳನ್ನೂ ಮಾಡಲು ಸಾಧ್ಯವಿದೆ ಎಂದು ಅವರು ಹೇಳುತ್ತಾರೆ.

ಅವರು 2020ರಲ್ಲಿ ಕಾರವಾರದಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದಾಗ, ನೀರು ಹೀರಿಕೊಳ್ಳದಂಥ ಕಾಗದದ ಕೈಚೀಲ ಅಭಿವೃದ್ಧಿ ಪಡಿಸಿದ್ದರು. ಅದಕ್ಕೂ ಅವರು ಮೆಕ್ಕೆಜೋಳದ ಅಂಟನ್ನು ಬಳಸಿದ್ದರು. ಅದರ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಬಳಿಕ ದೇಶದ ವಿವಿಧ ಭಾಗಗಳಿಂದ ಆಸಕ್ತರು ಅವರನ್ನು ಸಂಪರ್ಕಿಸಿ ಉಚಿತವಾಗಿ ಮಾಹಿತಿ ಪಡೆದು ವಾಣಿಜ್ಯಿಕವಾಗಿ ಕೈಚೀಲಗಳ ಉತ್ಪಾದನೆ ಆರಂಭಿಸಿದ್ದಾರೆ.

–––––

* ಕಾಗದದ ತಟ್ಟೆ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕದ ಬಳಕೆಯಿಲ್ಲ. ಹಾಗಾಗಿ ಮಣ್ಣಿನಲ್ಲಿ ಯಾವುದೇ ಆತಂಕವಿಲ್ಲದೇ ಹೂಳಬಹುದು.

– ಧನಂಜಯ ಹೆಗಡೆ, ನಿವೃತ್ತ ಜಂಟಿ ನಿರ್ದೇಶಕ, ಕೈಗಾರಿಕಾ ಇಲಾಖೆ

(ಅವರ ಸಂಪರ್ಕಕ್ಕೆ: 94813 72678)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT