ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳಾಂತರಕ್ಕೆ ಸೂಚನೆ: ದಿಕ್ಕು ತೋಚದಂತಾದ ನಿವಾಸಿಗಳು

ಭೂ ಕುಸಿತವಾಗದಂತೆ ತಡೆಗೋಡೆ ನಿರ್ಮಿಸಲು ಒತ್ತಾಯ
Last Updated 9 ಜುಲೈ 2020, 6:45 IST
ಅಕ್ಷರ ಗಾತ್ರ

ಶಿರಸಿ: ಕಳೆದ ವರ್ಷ ಮಳೆಗಾಲದಲ್ಲಿ ಭೂ ಕುಸಿತವಾಗಿದ್ದ ತಾಲ್ಲೂಕಿನ ಬಾಳೆಕಾಯಿಮನೆ ಗ್ರಾಮದ ಏಳು ಕುಟುಂಬಗಳು ಸ್ಥಳಾಂತರಗೊಳ್ಳುವಂತೆ ಕಂದಾಯ ಇಲಾಖೆ ಸೂಚನೆ ನೀಡಿದೆ. ಮಳೆಗಾಲ ಆರಂಭವಾದ ಮೇಲೆ ಅಧಿಕಾರಿಗಳಿಂದ ಬಂದಿರುವ ಈ ಸೂಚನೆ ಕಂಡು, ನಿವಾಸಿಗಳು ಕಂಗಾಲಾಗಿದ್ದಾರೆ.

ಕಳೆದ ವರ್ಷ ಅತಿವೃಷ್ಟಿಯ ಸಂದರ್ಭದಲ್ಲಿ, ಈ ಗ್ರಾಮದ ಜಾಜಿಗುಡ್ಡೆಯಲ್ಲಿ ಗುಡ್ಡ ಕುಸಿತವಾಗಿತ್ತು. ಗುಡ್ಡದ ಕೆಳಭಾಗದಲ್ಲಿರುವ ಮನೆಗಳಿಗೆ ನೀರು ನುಗ್ಗಿತ್ತು. ಅಲ್ಲದೇ, ಗುಡ್ಡದ ಒಂದು ಭಾಗ ಬಿರುಕು ಬಿಟ್ಟಿತ್ತು. ಭೂವಿಜ್ಞಾನ ಇಲಾಖೆಯವರು ಈ ಭಾಗದಲ್ಲಿ ಸಮೀಕ್ಷೆ ನಡೆಸಿ, ಇಲ್ಲಿ ಮತ್ತೆ ಗುಡ್ಡ ಕುಸಿತವಾಗುವ ಸಾಧ್ಯತೆ ಇರುವುದಾಗಿ ಹೇಳಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು, ಹುಲೇಕಲ್ ಉಪತಹಶೀಲ್ದಾರರು ಕಳೆದ ಕೆಲ ದಿನಗಳ ಹಿಂದೆ, ಜಾಜಿಗುಡ್ಡೆ ಹಾಗೂ ತುಳಗೇರಿ ಮಜಿರೆಗಳ ನಿವಾಸಿಗಳಿಗೆ, ಮಳೆಗಾಲದಲ್ಲಿ ಮನೆ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ.

‘ಕಳೆದ ವರ್ಷ ಭೂ ಕುಸಿತವಾದಾಗ, ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಯಾವ ಕ್ರಮವೂ ಆಗಿಲ್ಲ. ಈ ವರ್ಷ ಮತ್ತೆ ಭೂ ಕುಸಿತವಾದರೆ, ಕೆಲ ಮನೆಗಳಿಗೆ ತೊಂದರೆಯಾಗುವ ಜತೆಗೆ, ತೆಂಗಿನಮುಡಿ, ಅಗ್ರಹಾರ, ತುಳಗೇರಿ ಭಾಗದ 40ಕ್ಕೂ ಹೆಚ್ಚು ಮನೆಗಳಿಗೆ ನಾಗರಿಕ ಸಂಪರ್ಕ ಕಡಿತವಾಗುತ್ತದೆ. ಈ ಮನೆಗಳಿರುವ ಇನ್ನೊಂದು ಭಾಗದಲ್ಲಿ ಹೊಳೆ ಹರಿಯುವುದರಿಂದ ಅವರಿಗೆ ಜಡ್ಡಿಗದ್ದೆ, ಶಿರಸಿಗೆ ಬರಲು ಇರುವ ಏಕೈಕ ಮಾರ್ಗ ಇದಾಗಿದೆ. ಹೀಗಾಗಿ ಗುಡ್ಡ ಕುಸಿಯದಂತೆ ತಡೆಗೋಡಿ ನಿರ್ಮಿಸಿ, ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯ ತಪ್ಪಿಸಬೇಕು’ ಎಂಬುದು ಸ್ಥಳೀಯರ ಒತ್ತಾಯ.

‘ನಾವು ನಾಲ್ಕು ತಲೆಮಾರಿಗೂ ಹೆಚ್ಚು ಕಾಲದಿಂದ ಇಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿರುವ ಕೃಷಿಭೂಮಿ ಜೀವನಾಧಾರವಾಗಿದೆ. ಕಳೆದ ವರ್ಷ ಭೂ ಕುಸಿತವಾದಾಗ, ಪರ್ಯಾಯ ಜಾಗ ನೀಡಿದರೆ, ಮನೆ ನಿರ್ಮಿಸಿಕೊಳ್ಳುವುದಾಗಿ ನಾವು ಬೇಡಿಕೆಯಿಟ್ಟಿದ್ದೆವು. ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ಈಗ ಮಳೆಗಾಲ ಆರಂಭವಾದ ಮೇಲೆ, ವಾರದ ಹಿಂದೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದರೆ, ನಾವು ಎಲ್ಲಿಗೆ ಹೋಗಬೇಕು’ ಎಂದು ಸ್ಥಳೀಯರಾದ ರಾಮಕೃಷ್ಣ ಹೆಗಡೆ ಪ್ರಶ್ನಿಸಿದರು.

‘ಸ್ಥಳಾಂತರಗೊಳ್ಳುವಂತೆ ಸೂಚಿಸಿ, ಏಳು ಕುಟುಂಬಗಳಿಗೆ ನೋಟಿಸ್ ಬಂದಿದೆ. ಈ ಕುಟುಂಬಗಳಲ್ಲಿ ಒಟ್ಟು 42ಕ್ಕೂ ಹೆಚ್ಚು ಜನರಿದ್ದಾರೆ. 25ರಷ್ಟು ಜಾನುವಾರುಗಳಿವೆ. ಇವುಗಳನ್ನು ತೆಗೆದುಕೊಂಡು ಎಲ್ಲಿ ಹೋಗಿ ವಾಸಿಸಬೇಕು. ಹಾಗೆಂದು, ಗುಡ್ಡ ಕುಸಿತವಾದರೆ ಅಪಾಯ ಸಂಭವಿಸಬಹುದು ಎಂಬ ಆತಂಕವೂ ನಮ್ಮಲ್ಲಿದೆ. ಮನೆ ನಿರ್ಮಿಸಿಕೊಳ್ಳಲು ಮಾಲ್ಕಿ ಜಾಗವಿಲ್ಲ. ಗುಡ್ಡ ಪ್ರದೇಶವೇ ಹೆಚ್ಚಿದೆ. ಸರ್ಕಾರ ನಮಗೆ ಮನೆ ಕಟ್ಟಿಕೊಳ್ಳಲು ಸಮತಟ್ಟಾದ, ಪರ್ಯಾಯ ಜಾಗ ಕಲ್ಪಿಸಬೇಕು’ ಎಂದು ಅನಂತ ಹೆಗಡೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT