ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಿ ಕಾಲೊನಿಗೆ ಸಚಿವರ ಭೇಟಿ: ಗ್ರಾಮೀಣ ಜೀವನ ವೀಕ್ಷಣೆ

ಅಂಕೋಲಾ ತಾಲ್ಲೂಕಿನ ಅಂಗಡಿಬೈಲ್‌
Last Updated 16 ಏಪ್ರಿಲ್ 2022, 4:10 IST
ಅಕ್ಷರ ಗಾತ್ರ

ಅಂಗಡಿಬೈಲ್ (ಕಾರವಾರ): ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕಾಗಿ ಅಂಕೋಲಾ ತಾಲ್ಲೂಕಿನ ಅಚವೆ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಸಮೀಪದ ಅಂಗಡಿಬೈಲ್‌ನ ಸಿದ್ದಿ ಸಮುದಾಯದವರ ಕಾಲೊನಿಗೆ ಭೇಟಿ ನೀಡಿದರು.

ಸುಬ್ರಾಯ ಹಸನ ಸಿದ್ದಿ ಅವರ ಕೃಷಿ ಚಟುವಟಿಕೆಗಳನ್ನು ವೀಕ್ಷಿಸಿದರು. ಅಡಿಕೆ ಮರವೇರುವ ಯಂತ್ರ, ಕಾರ್ಬನ್ ದೋಟಿ, ಅಡಿಕೆ ಸುಲಿಯುವ ಯಂತ್ರ, ಜೇನು ಕೃಷಿ, ಆಲೆಮನೆ, ಜೋನಿ ಬೆಲ್ಲ ತಯಾರಿಕೆಯ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು. ಮನೆಯಂಗಳದಲ್ಲಿ ಸಮುದಾಯದವರು ಹಮ್ಮಿಕೊಂಡ ಜಾನಪದ ನೃತ್ಯ, ಹಾಲಕ್ಕಿ ಸಮುದಾಯದವರ ಹಾಡುಗಳನ್ನು ನೋಡಿದರು.

ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ‘ಬುಡಕಟ್ಟು ಜನಾಂಗದವರ ಬಗ್ಗೆ ಜನರ ಭಾವನೆ ಬದಲಾಗಬೇಕು. ಅವರಲ್ಲೂ ವಿದ್ಯಾವಂತರಿದ್ದಾರೆ. ಅವರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಿದ್ದಿ ಸಮಾಜ ಇಷ್ಟು ಸಮಯವಾದವರೂ ತನ್ನ ಮೂಲ ಸಂಸ್ಕೃತಿಯನ್ನು ಬಿಟ್ಟಿಲ್ಲ. ಅವರ ಪರಂಪರೆ ಉಳಿಯಬೇಕು’ ಎಂದು ಆಶಿಸಿದರು.‌

‘ಇಷ್ಟು ಸಮಯ ಅವರು ಸರ್ಕಾರದ ಸಹಾಯ ಪಡೆಯಲಿಲ್ಲ. ಇನ್ನಾದರೂ ಅವರಿಗೆ ಸರ್ಕಾರದ ಸಹಾಯ ಸಿಗಬೇಕು. ಗ್ರಾಮ ವಾಸ್ತವ್ಯ ಇದಕ್ಕೆ ಸಹಕಾರಿಯಾಗಲಿದೆ’ ಎಂದರು.‌

ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಮಾತನಾಡಿ, ‘ಜಿಲ್ಲೆಯ ಅರಣ್ಯವಾಸಿಗಳಿಗೆ ಹಕ್ಕುಪತ್ರಗಳನ್ನು ಇನ್ನೂ ಪೂರ್ಣವಾಗಿ ಕೊಟ್ಟಿಲ್ಲ. ಹಕ್ಕುಪತ್ರದ 11 ಮತ್ತು 9ನೇ ಕಾಲಂನಲ್ಲಿ ಫಲಾನುಭವಿಯ ಹೆಸರಿಲ್ಲ. ಪಹಣಿ ಮಾಡಿಕೊಟ್ಟರೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಸಮಸ್ಯೆಯಾಗುತ್ತದೆ. ನಮಗೆ ನೀಡುವ ಹಕ್ಕುಪತ್ರಗಳು ನೂರಕ್ಕೆ ನೂರು ಸಿಂಧುವಾಗಿರಬೇಕು. ಅಂತೆಯೇ ಗೊಂಡ ಮತ್ತು ಕುಂಬ್ರಿ ಮರಾಠಿ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ಕೊಡಬೇಕು’ ಎಂದು ಒತ್ತಾಯಿಸಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ, ಉಪ ವಿಭಾಗಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಇದ್ದರು.

ನೇಮಕಾತಿಯ ಭರವಸೆ:ಅಂಗಡಿಬೈಲ್ ಸಿದ್ದಿ ಕಾಲೊನಿಗೆ ಭೇಟಿ ನೀಡಿದ ಸಚಿವ ಅಶೋಕ್ ಅವರು, ಸುಬ್ರಾಯ ಹಸನ ಸಿದ್ದಿ ಹಾಗೂ ಮಂಗಲಾ ದಂಪತಿಯ ಪುತ್ರಿ ಭಾಗೀರಥಿ ಸಿದ್ದಿ ಅವರಿಗೆ ಗ್ರಾಮ ಸಹಾಯಕಿ ಹುದ್ದೆಗೆ ನೇಮಕಾತಿಯ ಭರವಸೆ ನೀಡಿದರು.

ಭಾಗೀರಥಿಎಂ.ಎಸ್.ಡಬ್ಲ್ಯು ವಿದ್ಯಾಭ್ಯಾಸ ಮಾಡಿದ್ದಾರೆ. ಅಂತೆಯೇ, ಮತ್ತೊಬ್ಬ ಯುವತಿ ಕಾವ್ಯಾ ಹನುಮಂತ ಸಿದ್ದಿ ಪೊಲೀಸ್ ಪ್ರವೇಶ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಂಡಿರುವ ವಿಚಾರ ತಿಳಿದುಕೊಂಡರು. ಅದರ ತರಬೇತಿಗೆ ತಗುಲುವ ಸಂಪೂರ್ಣ ವೆಚ್ಚವನ್ನು ಸ್ವಂತ ಭರಿಸುವುದಾಗಿ ಅಶೋಕ್ ತಿಳಿಸಿದರು.

ಇದೇವೇಳೆ, ಸಮಾಜಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಪಂಗಡದ ಇಬ್ಬರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT