ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರಿ ಬಿಸಿಲಿಗೆ ಬಸವಳಿದ ಕರಾವಳಿ

ಕಾರವಾರದಲ್ಲಿ ಶುಕ್ರವಾರ ಗರಿಷ್ಠ 36 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲು
Last Updated 19 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಒಂದು ವಾರದಿಂದ ಬಿಸಿಲಿನ ತೀವ್ರತೆ ಹೆಚ್ಚಿದ್ದು, ಸಾರ್ವಜನಿಕರು ಬಸವಳಿದಿದ್ದಾರೆ. ನಗರದಲ್ಲಿ ಶುಕ್ರವಾರ 36 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದ್ದು, ಈ ವರ್ಷದ ಅತಿ ಹೆಚ್ಚು ಬಿಸಿಲಿನ ದಿನವಾಗಿದೆ.

ಕರಾವಳಿಯಲ್ಲಿ ಸಾಮಾನ್ಯವಾಗಿ ಮಾರ್ಚ್ ಕೊನೆಯ ವಾರದಲ್ಲಿ ಅಥವಾ ಏಪ್ರಿಲ್ ನಂತರ 35 ಡಿಗ್ರಿ ಸೆಲ್ಷಿಯಸ್ ಸುತ್ತಮುತ್ತ ಉಷ್ಣಾಂಶವಿರುತ್ತದೆ. ಆದರೆ, ಈ ಬಾರಿ ಮಾರ್ಚ್ ಎರಡನೇ ವಾರದಿಂದಲೇ ಇಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಈಗಲೇ ಬಿಸಿಲಿನ ತೀವ್ರತೆ ಹೀಗಿದ್ದರೆ, ಇನ್ನು ಎರಡೂವರೆ ತಿಂಗಳ ಅವಧಿಯನ್ನು ಕಳೆಯುವುದು ಹೇಗೆ ಎಂಬ ಚಿಂತೆ ಜನರದ್ದು.

ಮುಂದಿನ ಒಂದು ವಾರ ಗರಿಷ್ಠ 35 ಡಿಗ್ರಿ ಸೆಲ್ಷಿಯಸ್‌ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕನಿಷ್ಠ ಉಷ್ಣಾಂಶದಲ್ಲಿ ವಾಡಿಕೆಯಷ್ಟೇ ಅಂದರೆ, 21 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿ ಇರಬಹುದು ಎಂದು ಮುನ್ಸೂಚನೆ ನೀಡಿದೆ.

ಎರಡು ದಿನಗಳಿಂದ ಸಂಜೆಯ ವೇಳೆಗೆ ಅಲ್ಲಲ್ಲಿ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಘಟ್ಟ ಪ್ರದೇಶದಲ್ಲಿ ದಟ್ಟವಾದ ಇಬ್ಬನಿ ಬೀಳುತ್ತಿದೆ. ಅಲ್ಲದೇ ಗಾಳಿಯಲ್ಲಿ ತೇವಾಂಶ ಜಾಸ್ತಿಯಾದಾಗ ಕೂಡ ಸೆಕೆ ಹೆಚ್ಚಿದ್ದಂತೆ ಭಾಸವಾಗುತ್ತದೆ. ಇದು ಕೂಡ ಉಷ್ಣಾಂಶ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಆರೋಗ್ಯ ಕಾಪಾಡಿಕೊಳ್ಳಿ’:

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಬಾಯಾರಿಕೆ ಆದಾಗ ಆದಷ್ಟೂ ಸಾಮಾನ್ಯ ನೀರನ್ನೇ ಸೇವಿಸಬೇಕು. ಫ್ರಿಜ್‌ನಲ್ಲಿಟ್ಟ ನೀರನ್ನು ಬಿಸಿಲಿನಿಂದ ಬಂದ ತಕ್ಷಣ ಸೇವಿಸುವುದರಿಂದ ಗಂಟಲು ಅಲರ್ಜಿ, ಶೀತ, ನೆಗಡಿ ಆಗುವ
ಸಾಧ್ಯತೆಗಳಿರುತ್ತವೆ. ತಂಪು ಪಾನೀಯಗಳ ಬದಲು ಹಣ್ಣಿನ ರಸಗಳನ್ನೇ ಕುಡಿಯುವುದು ಉತ್ತಮ. ಬಿರು ಬಿಸಿಲಿಗೆ ಹೋಗು
ವಾಗ ಮೈಯನ್ನು ಸಂಪೂರ್ಣವಾಗಿ ಮುಚ್ಚುವಂಥ ಬಟ್ಟೆಯನ್ನೇ ಧರಿಸಬೇಕು ಎನ್ನುವುದು ವೈದ್ಯರ ಸಲಹೆ.

ತಂಪು ಪಾನೀಯಕ್ಕೆ ಬೇಡಿಕೆ:

ಬಿಸಿಲಿಗೆ ಕಂಗೆಟ್ಟ ಜನರು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಎಳನೀರು, ಕಲ್ಲಂಗಡಿ, ಲಿಂಬು ಸೋಡಾದಂಥ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ವರ್ತಕರಿಗೂ ಒಂದಷ್ಟು ಆದಾಯ ಗಿಟ್ಟುತ್ತಿದೆ. ಕಾರವಾರದಲ್ಲಿ ಪ್ರಸ್ತುತ ಎಳನೀರು ₹ 30ರಿಂದ ₹ 40ರಂತೆ ಮಾರಾಟವಾಗುತ್ತಿದೆ.

‘ಸೋಡಾ ಮಿಶ್ರಿತ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದೆ. ಕೆಲವರು ಬಾಕ್ಸ್‌ಗಳನ್ನೇ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಬಾರಿಯ ಬೇಸಿಗೆ ಕಾಲ ಇನ್ನೂ ಬಾಕಿಯಿರುವ ಕಾರಣ ಮತ್ತಷ್ಟು ಬೇಡಿಕೆ ಬರುವ ನಿರೀಕ್ಷೆಯಿದೆ’ ಎನ್ನುತ್ತಾರೆ ನಗರದ ಸೂಪರ್ ಮಾರ್ಕೆಟ್ ಒಂದರ ಮಾಲೀಕ ರಾಜೇಶ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT