ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಚ್ಚಳ್ಳಿ: ರಸ್ತೆಗೆ ಅನುಮತಿ ಪಡೆಯಲು ಯತ್ನ: ರತ್ನಾಕರ ಹೆಗ್ಡೆ

Last Updated 22 ಜುಲೈ 2021, 16:31 IST
ಅಕ್ಷರ ಗಾತ್ರ

ಕಾರವಾರ: ‘ತಾಲ್ಲೂಕಿನ ಕುಗ್ರಾಮ ಮಚ್ಚಳ್ಳಿಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು. ಬಳಿಕ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಲು ಅನುಕೂಲವಾಗಲಿದೆ’ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

ನಗರದಲ್ಲಿ ಗುರುವಾರ, ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಗ್ರಾಮಕ್ಕೆ ರಸ್ತೆಯ ಕೊರತೆಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿದ್ದ ಯೋಜನಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ಕಾಮಗಾರಿ ನಡೆಸಲು ಸೂಚಿಸಿದ್ದರು. ಈ ಸಂಬಂಧ ಗುರುವಾರ ಖುದ್ದು ಸ್ಥಳ ಪರಿಶೀಲನೆ ಮಾಡಿದ್ದೇನೆ. ಅಲ್ಲದೇ ಲೋಕೋಪಯೋಗಿ ಇಲಾಖೆಯಿಂದ ₹ 14 ಕೋಟಿ ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಇದು ನಮ್ಮ ನಿರೀಕ್ಷೆಗಿಂತ ಭಾರಿ ಹೆಚ್ಚಾಗಿದೆ’ ಎಂದು ತಿಳಿಸಿದರು.

‘ರಸ್ತೆ ಸಾಗುವ ಪ್ರದೇಶವು ಕಾಯ್ದಿಟ್ಟ ಅರಣ್ಯದಲ್ಲಿದೆ. ಹಾಗಾಗಿ ಇಲಾಖೆಯ ಅನುಮತಿ ಬೇಕಾಗುತ್ತದೆ. ಶಾಸಕಿ ರೂಪಾಲಿ ನಾಯ್ಕ ಅವರ ಮುತುವರ್ಜಿಯಿಂದ ಈಗಾಗಲೇ ಮೂರು ಕಿಲೋಮೀಟರ್ ರಸ್ತೆ ಆಗಿದೆ. ಮತ್ತೆ ₹ 45 ಲಕ್ಷವನ್ನು ಶಾಸಕರ ನಿಧಿಯಿಂದ ಹಂಚಿಕೆ ಮಾಡಿದ್ದಾರೆ. ಹೆಚ್ಚುವರಿ ಅನುದಾನದ ಬಗ್ಗೆ ಸಚಿವರು ಮತ್ತು ಹೆಚ್ಚುವರಿ ಕಾರ್ಯದರ್ಶಿ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.

‘ಕರಾವಳಿ ಪ್ರಾಧಿಕಾರವನ್ನು ಮಂಡಳಿಯನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ. ಆರೆಂಟು ತಿಂಗಳಲ್ಲಿ ರಚನೆಯಾಗುವ ನಿರೀಕ್ಷೆಯಿದೆ. ಇದರಿಂದ ಮಂಡಳಿಗೆ ಹೆಚ್ಚು ಶಕ್ತಿ ಬರಲಿದೆ’ ಎಂದು ತಿಳಿಸಿದರು.

‘ರಾಜ್ಯದ 320 ಕಿಲೋ ಮೀಟರ್ ಉದ್ದದ ಕಡಲತೀರದಲ್ಲಿ ಸಮಾನಾಂತರ ರಸ್ತೆ ಮಾಡಲು ಡಿ.ಪಿ.ಆರ್ ಮಾಡಲಾಗಿದೆ. ಅದೇ ರೀತಿ, ಹೊನ್ನಾವರದಲ್ಲಿ ‘ಪಿಂಕ್ ಸಿಟಿ’ ನಿರ್ಮಾಣಕ್ಕೆ ಹೊನ್ನಾವರದ ಮಹಿಳೆಯೊಬ್ಬರು ನೀಡಿದ ಪ್ರಸ್ತಾವವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಅನುಮತಿ ಸಿಕ್ಕಿದರೆ, ಹೆದ್ದಾರಿ ವಿಭಜಕದಲ್ಲಿ ಹಳದಿ ಹೂ ಬಿಡುವ ಗಿಡಗಳನ್ನು ನೆಡಲಾಗುವುದು. ಜೊತೆಗೆ ಇತರ ಕಾಮಗಾರಿಗಳೂ ನಡೆಯಲಿವೆ’‌ ಎಂದು ಮಾಹಿತಿ ನೀಡಿದರು.

ಗೊಂದಲ ನಿವಾರಣೆಗೆ ಸೂಚನೆ:

ಮಾದನಗೇರಿಯಲ್ಲಿ ಪ್ರಾಧಿಕಾರದಿಂದ ನಿರ್ಮಿಸಲಾಗಿರುವ ಮೀನು ಮಾರುಕಟ್ಟೆಯನ್ನು ಬಳಕೆಗೆ ತೆರೆಯುವ ನಿಟ್ಟಿನಲ್ಲಿ ಉಂಟಾಗಿರುವ ಗೊಂದಲವನ್ನು ಬಗೆ ಹರಿಸಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧಿಕಾರಿಗಳಿಗೆ ಸೂಚಿಸಿದರು.

‘ತೊರ್ಕೆ ಮತ್ತು ಸಗಡಗೇರಿ ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಮಾತನಾಡಬೇಕು. ಹೇಗಾದರೂ ಸರಿ, ಮೀನುಗಾರರಿಗೆ ಅನುಕೂಲವಾಗುವಂತೆ ನಿರ್ಣಯಕ್ಕೆ ಬರಬೇಕು’ ಎಂದು ತಿಳಿಸಿದರು.

ಶಾಸಕಿ ರೂಪಾಲಿ ಮಾತನಾಡಿ, ‘ಒಂದು ವೇಳೆ ಗೊಂದಲ ಮುಂದುವರಿದರೆ, ಮತ್ತೊಂದು ಕಟ್ಟಡ ಮಾಡಿಸಬಹುದು. ಕಟ್ಟಡವನ್ನು ಮೀನುಗಾರಿಕೆ ಇಲಾಖೆಯವರ ಸುಪರ್ದಿಗೂ ಕೊಡಬಹುದು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಎಂ.ಪ್ರಿಯಾಂಗಾ ಪ್ರತಿಕ್ರಿಯಿಸಿ, ‘ಮುಂದಿನ ವಾರವೇ ಮೀನುಗಾರಿಕೆ ಇಲಾಖೆಯವರು, ಎರಡೂ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳನ್ನು ಕರೆಸಿ ಸಭೆ ಮಾಡಿಸಲಾಗುವುದು’ ಎಂದು ತಿಳಿಸಿದರು.

ಪ್ರಾಧಿಕಾರದ ಸದಸ್ಯರಾದ ಮಂಜುನಾಥ ಹಾಗೂ ವಿಜಯ್, ಕಾರ್ಯದರ್ಶಿ ಪ್ರದೀಪ ಡಿಸೋಜಾ, ಅಮದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ನಾಯ್ಕ, ತಹಶೀಲ್ದಾರ್ ನಿಶ್ಚಲ ನರೋನಾ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT