ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಡ್‌ಗೆ ಮುಳುವಾಯಿತೇ ‘ಮೋದಿಗೆ ಜೈ’?

ಕಲಘಟಗಿ: ಕಾಂಗ್ರೆಸ್‌ ಪ್ರಚಾರದ ಹಿಂದೆಯೇ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರು
Last Updated 17 ಮೇ 2018, 5:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಲಘಟಗಿಯಿಂದ ಸತತ ಎರಡು ಸಲ ಶಾಸಕರಾಗಿ, ಸಚಿವರೂ ಆಗಿದ್ದ ಸಂತೋಷ ಲಾಡ್‌ ಈ ಸಲದ ಚುನಾವಣೆಯಲ್ಲಿ ಬಾರಿ ಅಂತರದಿಂದ ಸೋತಿದ್ದು ಕ್ಷೇತ್ರದ ಕಾಂಗ್ರೆಸ್‌ ನಾಯಕರ ನಿದ್ದೆಗೆಡಿಸಿದೆ. ಇಷ್ಟೊಂದು ಅಂತರದ ಸೋಲಿಗೆ ಕಾರಣವೇನು ಎನ್ನುವ ವಿಶ್ಲೇಷಣೆ ಜೋರಾಗಿ ನಡೆಯುತ್ತಿದೆ.

ಗಣಿ ಉದ್ಯಮಿ ಸಂತೋಷ್‌ ಲಾಡ್‌ 2008ರಲ್ಲಿ 11,642 ಮತಗಳಿಂದ ಮತ್ತು 2013ರಲ್ಲಿ 45,658 ದೊಡ್ಡ ಅಂತರದಿಂದ ಗೆಲುವು ಸಾಧಿಸಿದ್ದರು. ಹತ್ತು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಅತಿಯಾದ ಆತ್ಮವಿಶ್ವಾಸದ ಮಾತುಗಳೇ ಅವರ ಸೋಲಿಗೆ ಕಾರಣವಾಯಿತು ಎಂದು ಕಾಂಗ್ರೆಸ್‌ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಲಾಡ್‌ ಈ ಬಾರಿ 25,997 ಅಂತರದಿಂದ ಪರಾಭವಗೊಂಡಿದ್ದಾರೆ.

ಮೊದಲ ಬಾರಿಗೆ ಶಾಸಕರಾಗಿರುವ ಬಿಜೆಪಿಯ ಸಿ.ಎಂ. ನಿಂಬಣ್ಣವರ ಅವರು ಹಿಂದಿನ ಎರಡೂ ಚುನಾವಣೆ ಸೇರಿ
ಒಟ್ಟು 69,235 ಮತಗಳನ್ನು ಪಡೆದಿದ್ದರು. ಆದರೆ, ಈ ಬಾರಿ 83,267 ಮತಗಳನ್ನು ಗಳಿಸಿದ್ದು ನೋಡಿದರೆ ಕ್ಷೇತ್ರದ ಮತದಾರರಿಗೆ ಲಾಡ್‌ ಬಗ್ಗೆ ಇದ್ದ ಅಸಮಾಧಾನ ಎಷ್ಟೆಂಬುದು ಗೊತ್ತಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

‘ಲಾಡ್ ಅವರು ಪ್ರಚಾರಕ್ಕೆ ಹೋದ ಬಹುತೇಕ ಕಡೆಗಳಲ್ಲಿ ಹಿಂದೆಯೇ ಬಂದು ‘ಮೋದಿಗೆ ಜೈ’ ಎನ್ನುತ್ತಿದ್ದ ಬಿಜೆಪಿ ಕಾರ್ಯಕರ್ತರ ‘ಪ್ರಚಾರ ತಂತ್ರ’ ಕೂಡ ಸೋಲಿಗೆ ಕಾರಣ ಆಗಿದೆ. ಅವರ ಘೋಷಣೆಗೆ ಲಾಡ್‌ ಆಡುತ್ತಿದ್ದ ಆಕ್ರೋಶದ ಪ್ರತಿಕ್ರಿಯೆಯನ್ನು ಬಿಜೆಪಿ ಕಾರ್ಯಕರ್ತರು ವಿಡಿಯೊ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿ ಬಿಡುತ್ತಿದ್ದದ್ದು ನಮ್ಮ ಅಭ್ಯರ್ಥಿಗೆ ಹಿನ್ನಡೆಯಾಯಿತು’ ಎಂದು ಅಳ್ನಾವರ ಪಟ್ಟಣ ಪಂಚಾಯ್ತಿ ಸದಸ್ಯ ಛಗನ್‌ ಪಟೇಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಚಾರ ಸಭೆಗಳು ನಡೆಯುತ್ತಿದ್ದಾಗ ಮಧ್ಯೆದಲ್ಲಿ ಬಂದು ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗುತ್ತಿದ್ದರು. ಬಿಜೆಪಿಯ ಈ ಕುತಂತ್ರ ಅರಿಯದ ಮತದಾರರು ಎಲ್ಲ ಕಡೆ ಮೋದಿ ಅಲೆ ಇದೆ ಎಂದು ತಪ್ಪಾಗಿ ಭಾವಿಸಿದ್ದು ನಮಗೆ ದೊಡ್ಡ ಪೆಟ್ಟು ನೀಡಿತು’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ಈ ಬಗ್ಗೆ ಸಂತೋಷ್‌ ಲಾಡ್ ಅವರನ್ನು ಪ್ರಶ್ನಿಸಿದಾಗ ‘ಒಬ್ಬ ಅಭ್ಯರ್ಥಿಯ ಸೋಲಿಗೆ ಹೇಗೆ ಕಾರಣಗಳು ಇರುತ್ತವೆಯೋ, ಅದೇ ರೀತಿ ಗೆಲುವಿಗೂ ಕಾರಣಗಳಿರುತ್ತವೆ. ಈಗಸೋಲಿಗೆ ಕಾರಣಗಳನ್ನು ಹುಡುಕುವುದಿಲ್ಲ. ಜನರು ನೀಡಿದ ತೀರ್ಪಿಗೆ ತಲೆಬಾಗುತ್ತೇನೆ’ ಎಂದರು.

‘ಹಿರಿಯರಾದ ನಿಂಬಣ್ಣವರ ಬಗ್ಗೆ ವೈಯಕ್ತಿಕವಾಗಿ ನನಗೆ ತುಂಬಾ ಗೌರವವಿದೆ. ಅಭಿವೃದ್ಧಿ ದೃಷ್ಟಿಯಿಂದ ಅವರು ಏನೇ ಕೆಲಸ ಮಾಡಿದರೂ ಬೆಂಬಲ ನೀಡುತ್ತೇನೆ. ಕಲಘಟಗಿ ಜನರಿಗೆ ಋಣಿಯಾಗಿರುತ್ತೇನೆ’ ಎಂದರು.

ನೋಟಾಕ್ಕಿಂತ ಕಡಿಮೆ ಮತ!

ಕಲಘಟಗಿಯಲ್ಲಿ ಸ್ಪರ್ಧಿಸಿದ್ದ ಒಟ್ಟು 15 ಅಭ್ಯರ್ಥಿಗಳ ಪೈಕಿ 12 ಜನ ನೋಟಾಕ್ಕಿಂತಲೂ ಕಡಿಮೆ ಮತಗಳನ್ನು ಪಡೆದಿದ್ದಾರೆ. ನೋಟಾಕ್ಕೆ 1,440 ಮತಗಳನ್ನು ಹಾಕಲಾಗಿದೆ. ಜೆಡಿಎಸ್‌ನ ಶಿವಾನಂದ ಅಂಬಡಗಟ್ಟಿ ಸೇರಿದಂತೆ ವಿವಿಧ ಪಕ್ಷದ ಹಾಗೂ ಪಕ್ಷೇತರರು ನೋಟಾಕ್ಕಿಂತ ಕಡಿಮೆ ಮತ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT